ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಬಳಿ ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾದ ಅಮರ್ ಜವಾನ್ ಎಂಬ ಘೋಷಣೆ ಹಾಗೂ ಅದರ ಪಕ್ಕದಲ್ಲಿ ನಿರಂತರವಾಗಿ ಉರಿಯುತ್ತಿದ್ದ ಜ್ಯೋತಿ ಅಮರರಾಗಿರುವ ದೇಶದ ಹೆಮ್ಮೆಯ ಸೈನಿಕರಿಗೆ ಗೌರವ ಸೂಚಕವಾಗಿ ನಿರ್ಮಾಸಲಾಗಿತ್ತು. ಅದನ್ನು ಈಗ ಸಮೀಪದಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನವಾಗಲಿದೆ.
ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ ಮಾಡುತ್ತಿದ್ದೇವೆ. ಅಮರ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಉರಿಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಇರುವ ಸಂದರ್ಭ ಅಮರ ಸೈನಿಕರಿಗೆ ಎರಡು ಪ್ರತ್ಯೇಕ ಜ್ಯೋತಿ ಸರಿ ಕಾಣುವುದಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಸಮಗ್ರ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ, ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಸಮ್ಮುಖದಲ್ಲಿ ಈ ಕಾರ್ಯ ನಡೆಯಿತು.
ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟ್ ಅನ್ನು ಬ್ರಿಟಿಷರು ನಿರ್ಮಿಸಿದರು. 1971ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್ ಬಳಿ ಇರಿಸಲಾಗಿತ್ತು.
ಅಷ್ಟೇ ಅಲ್ಲದೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಈಗಾಗಲೇ ಇಂಡಿಯಾ ಗೇಟ್ ನಲ್ಲಿ ಕೆತ್ತಲಾಗಿರುವ ಹುತಾತ್ಮರ ಹೆಸರುಗಳನ್ನೂ ಸಹ ಹೊಂದಿದೆ. ಅದರೊಂದಿಗೆ 1947-48ರ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯವರೆಗೆ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಕ್ಷಣಾ ಸಿಬ್ಬಂದಿಯ ಹೆಸರು, ಭಯೋತ್ಪಾದಕ ವಿರೋಧಿ ಚಟುವಟಿಕೆಯಲ್ಲಿ ಹುತಾತ್ಮರಾದ ಸೈನಿಕರ ಹೆಸರನ್ನೂ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗಿದೆ.
ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನಗೊಳಿಸುವ ಸರ್ಕಾರದ ಕ್ರಮವು ದುಃಖಕರ ಮತ್ತು ಇತಿಹಾಸವನ್ನು ಅಳಿಸುವ ಪ್ರಯತ್ನ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.
ಅಮರ್ ಜವಾನ್ ಜ್ಯೋತಿಯಲ್ಲಿರುವ ಶಾಶ್ವತ ಜ್ಯೋತಿಯನ್ನು ನಂದಿಸುವ ಹಾಗೂ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ಯೋತಿಯನ್ನು ಇಡುವ ಕೇಂದ್ರ ಸರ್ಕಾರದ ಉದ್ದೇಶವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಪ್ರಶ್ನಿಸಿದ್ದಾರೆ.
“ನಮ್ಮ ವೀರ ಯೋಧರಿಗಾಗಿ ಉರಿಯುತ್ತಿದ್ದ ಅಮರ ಜ್ಯೋತಿಯನ್ನು ಇಂದು ನಂದಿಸುತ್ತಿರುವುದು ಅತ್ಯಂತ ದುಃಖದ ಸಂಗತಿ. ಕೆಲವು ಜನರು ದೇಶಭಕ್ತಿ ಹಾಗೂ ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪರವಾಗಿಲ್ಲ. ನಾವು ನಮ್ಮ ಸೈನಿಕರಿಗೆ ಅಮರ್ ಜವಾನ್ ಜ್ಯೋತಿಯನ್ನು ಮತ್ತೊಮ್ಮೆ ಬೆಳಗಿಸುತ್ತೇವೆ’’ ರಾಹುಲ್ ಗಾಂಧಿ ಟ್ವೀಟಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಕೂಡ ಅಮರ್ ಜವಾನ್ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ವಿಲೀನಗೊಳಿಸುವುದು ಇತಿಹಾಸವನ್ನು ಅಳಿಸಿಹಾಕುತ್ತದೆ. ಏನೇ ಮಾಡಿದರೂ ಅದು ರಾಷ್ಟ್ರೀಯ ದುರಂತ ಮತ್ತು ಇತಿಹಾಸವನ್ನು ಪುನಃ ಬರೆಯುವ ಪ್ರಯತ್ನವಾಗಿದೆ. ಬಿಜೆಪಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿದೆ, ಅವರು ಅಮರ್ ಜವಾನ್ ಜ್ಯೋತಿಯನ್ನು ನಂದಿಸಬಹುದು. ಆದರೆ ಅವರಿಗೆ ಗೌರವವಿಲ್ಲ ಎಂದಿದ್ದಾರೆ.