ಹೊಸದಿಲ್ಲಿ: ಕೋವಿಡ್ ಸೋಂಕಿನಿಂದಾಗಿ ಜನಸಾಮಾನ್ಯರಿಗೆ ಹಲವು ತೊಂದರೆಗಳು ಎದುರಾಗಿದ್ದರೆ, ಕೋಟ್ಯಾಧಿಪತಿಗಳಿಗೆ ಇದು ವರದಾನವಾಗಿ ಪರಿಣಮಿಸಿದೆ. ಕೋವಿಡ್ ಅವಧಿಯಲ್ಲಿ ದೇಶದ ಬಿಲಿಯನೇರ್ಗಳ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ. ಸುಮಾರು ಶೇ.39ರಿಂದ ಶೇ.142ರಷ್ಟು ಆದಾಯ ಹೆಚ್ಚಿಸಿಕೊಂಡಿರುವ ಉದ್ಯಮಿಗಳೂ ಇದ್ದಾರೆ. ಕೋವಿಡ್ ಅವಧಿಯಲ್ಲಿ ದೇಶದ ಟಾಪ್ 10 ಶ್ರೀಮಂತರು ಗಳಿಸಿರುವ ಆದಾಯದಿಂದ 25 ವರ್ಷಗಳ ಕಾಲ ಇಡೀ ದೇಶದ ಮಕ್ಕಳ ಶಿಕ್ಷಣಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ಹಣ ಒದಗಿಸಬಹುದಾಗಿದೆ ಎಂದು ಆಕ್ಸ್ಫ್ಯಾಮ್ ಇಂಡಿಯಾ ವರದಿ ಬಿಡುಗಡೆ ಮಾಡಿದೆ.
ದಾವೋಸ್ನಲ್ಲಿ ಆನ್ಲೈನ್ ಮೂಲಕ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯ ಆರಂಭದ ದಿನವೇ ಆಕ್ಸ್ಫ್ಯಾಮ್ ಇಂಟರ್ನ್ಯಾಷನಲ್ನ ಈ ಅಧ್ಯಯನ ವರದಿ ಬಿಡುಗಡೆಗೊಡೆಗೊಳಿಸಿದ್ದು. ಆ ವರದಿಯಿಂದಾಗಿ ಈ ಅಂಶಗಳು ಬಹಿರಂಗಗೊಂಡಿವೆ. ಆರೋಗ್ಯ ರಕ್ಷಣೆ, ಲಿಂಗ ಆಧಾರಿತ ಹಿಂಸೆ, ಹಸಿವು ಮತ್ತು ಹವಾಮಾನದ ಕುಸಿತದ ಸಮಸ್ಯೆಯಿಂದ ಜಾಗತಿಕವಾಗಿ ಸಂಭವಿಸುವ ಸಾವಿನ ಪ್ರಕರಣಗಳ ಬಗ್ಗೆ ಸಾಂಪ್ರದಾಯಿಕವಾಗಿ ನಡೆಸಿದ ಅಧ್ಯಯನ ಇದಾಗಿದೆ ಎಂದು ವರದಿ ಹೇಳಿದೆ.
ಸಂಪತ್ತಿನ ಅಸಮಾನತೆಯ ಕುರಿತ ಆಕ್ಸ್ಫ್ಯಾಮ್ ವರದಿಯ ಅಂಕಿಅಂಶಗಳಂತೆ 142 ಭಾರತೀಯ ಬಿಲಿಯನೇರ್ಗಳು ಒಟ್ಟಾರೆ 719 ಬಿಲಿಯನ್ ಡಾಲರ್ನಷ್ಟು ( ಸುಮಾರು ₹53 ಲಕ್ಷ ಕೋಟಿಗೂ ಹೆಚ್ಚು) ಸಂಪತ್ತನ್ನು ಹೊಂದಿದ್ದಾರೆ. ಆದರೆ, ಈ ಪೈಕಿ 98 ಶ್ರೀಮಂತರರ ಅಂಪತ್ತು ದೇಶದ ಶೇ. 40ರಷ್ಟು ಬಡಜನರ ಅಂದರೆ, 55.5 ಕೋಟಿ ಜನರು ಹೊಂದಿರುವ ಸಂಪತ್ತಿಗೆ (657 ಬಿಲಿಯನ್ ಡಾಲರ್ ಅಥವಾ ಸುಮಾರು ₹49 ಲಕ್ಷ ಕೋಟಿ) ಸಮವಾಗಿದೆ.
ಭಾರತದ ಟಾಪ್ 10 ಶ್ರೀಮಂತರಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಒಂದು ಮಿಲಿಯನ್ ಡಾಲರ್ಗೂ ಹೆಚ್ಚು ವೆಚ್ಚ ಮಾಡಿದರೂ, ಅವರ ಪೂರ್ಣ ಸಂಪತ್ತನ್ನು ಖರ್ಚು ಮಾಡಲು ಬರೋಬ್ಬರಿ 84 ವರ್ಷ ತೆಗೆದುಕೊಳ್ಳುತ್ತದೆ. ಆದರೆ, ಮಲ್ಟಿ-ಮಿಲಿಯನೇರ್ಗಳು ಮತ್ತು ಬಿಲಿಯನೇರ್ಗಳಿಗೆ ಸಂಪತ್ತು ತೆರಿಗೆ ವಿಧಿಸಿದರೆ, ವಾರ್ಷಿಕ 78.3 ಬಿಲಿಯನ್ ಡಾಲರ್ ಸಂಗ್ರಹಿಸಬಹುದು. ಈ ಹಣದಿಂದ ಸರ್ಕಾರದ ಆರೋಗ್ಯ ಬಜೆಟ್ ಅನ್ನು ಶೇ.271 ರಷ್ಟು ಹೆಚ್ಚಿಸಬಹುದು.
ದೇಶದ ಶೇ.10ರಷ್ಟು ಶ್ರೀಮಂತರ ಆದಾಯದ ಮೇಲೆ ಕೇವಲ ಶೇ.1ರಷ್ಟು ತೆರಿಗೆ ವಿಧಿಸಿದರೆ ದೇಶಕ್ಕೆ ಸುಮಾರು 17.7 ಲಕ್ಷ ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ಗಳನ್ನು ಒದಗಿಸಬಹುದು ಎಂದು ಆಕ್ಸ್ಫ್ಯಾಮ್ ಇಂಡಿಯಾ ತಿಳಿಸಿದೆ. ಇದೇ ರೀತಿ ದೇಶದ 98 ಶ್ರೀಮಂತ ಬಿಲಿಯನೇರ್ ಕುಟುಂಬಗಳ ಮೇಲೆ ಸಂಪತ್ತು ತೆರಿಗೆ ವಿಧಿಸಿದರೆ, ಬರೋಬ್ಬರಿ ಏಳು ವರ್ಷಗಳಿಗೂ ಹೆಚ್ಚು ಕಾಲ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ‘ಆಯುಷ್ಮಾನ್ ಭಾರತ್’ ಗೆ ಹಣಕಾಸು ಒದಗಿಸಬಹುದು ಎಂದು ಹೇಳಿದೆ.
ಕೋವಿಡ್-19 ಕೇವಲ ಆರೋಗ್ಯ ಸಮಸ್ಯೆಯಾಗಿಯಷ್ಟೇ ಉಳಿದಿಲ್ಲ. ಬದಲಿಗೆ ಆರ್ಥಿಕ ಸಮಸ್ಯೆಯಾಗಿಯೂ ಮಾರ್ಪಟ್ಟಿದೆ. ದೇಶದ ಶೇ.10ರಷ್ಟಿರುವ ಶ್ರೀಮಂತ ವರ್ಗ ಇಡೀ ದೇಶದ ಶೇ.45ರಷ್ಟು ಸಂಪತ್ತನ್ನು ಹೊಂದಿದೆ. ಹಾಗೆಯೇ ಕೆಳಶ್ರೇಣಿಯಲ್ಲಿರುವ ಶೇ.50ರಷ್ಟು ಮಂದಿ ದೇಶದ ಒಟ್ಟು ಸಂಪತ್ತಿನ ಶೇ.6ರಷ್ಟನ್ನು ಮಾತ್ರವೇ ಹೊಂದಿದ್ದಾರೆ ಎಂದು ಆಕ್ಸ್ಫಾಮ್ ವರದಿಯಲ್ಲಿ ತಿಳಿಸಿದೆ.
2016ರ ಬಳಿಕ ಸಂಪತ್ತಿನ ತೆರಿಗೆ ಮತ್ತು ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಮಾಡಲಾಗಿದೆ. ಬದಲಿಗೆ ಪರೋಕ್ಷ ತೆರಿಗೆಯನ್ನು ಜಾಸ್ತಿ ಮಾಡಲಾಗಿದೆ. ಇದು ಕೂಡ ಶ್ರೀಮಂತರು ಶ್ರೀಮಂತರಾಗುತ್ತಲೇ ಸಾಗಲು ಕಾರಣವಾಯ್ತು. ಸಾಮಾನ್ಯ ಜನರು ಮಾತ್ರ ಜಾಸ್ತಿ ತೆರಿಗೆ ಕಟ್ಟುವಂತಾಯ್ತು ಅಂತ ಕೂಡ ಹೇಳಲಾಗ್ತಿದೆ. ಹೀಗಾಗಿ ಸರ್ಕಾರ ದೇಶದ ಟಾಪ್ ಶ್ರೀಮಂತರ ಮೇಲೆ 1 ಪರ್ಸೆಂಟ್ ಹೆಚ್ಚುವರಿ ಟ್ಯಾಕ್ಸ್ ಹಾಕಬೇಕು. ಅ ದುಡ್ಡನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಅಂತ ಆಕ್ಸ್’ಫ್ಯಾಮ್ ವರದಿ ಹೇಳಿದೆ. ಜೊತೆಗೆ ಇದಕ್ಕೆಲ್ಲ ಭಾರತದ ವ್ಯವಸ್ಥೆಯೇ ಕಾರಣ. ಈ ವ್ಯವಸ್ಥೆ ಶ್ರೀಮಂತರ ನಿಯಂತ್ರಣದಲ್ಲಿದೆ. ಇಲ್ಲಿ ಎಲ್ಲವೂ ಶ್ರೀಮಂತರ ಅನುಕೂಲಕ್ಕೆ ತಕ್ಕಂತೆ ನಡೆಯುತ್ತೆ ಎಂದು ಆಕ್ಸ್ಫ್ಯಾಮ್ ಆರೋಪಿಸಿದೆ.