ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಕುರಿತಾಗಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಲಾಕ್ಡೌನ್, ನೈಟ್ ಕರ್ಫ್ಯೂ ಸಾಧಕ, ಬಾಧಕದ ಚರ್ಚೆಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಲಾಕ್ಡೌನ್ ಬಗ್ಗೆ ಚಿಂತನೆ ಇಲ್ಲ. ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶುಕ್ರವಾರ ಮತ್ತೊಂದು ಸಭೆ ನಡೆಸಲಾಗುವುದು. ಈ ವೇಳೆ ಮತ್ತಷ್ಟು ಕಠಿಣ ನಿಯಮ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹ ಲಾಕ್ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರದ (ಜ. 21) ಸಭೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಜವಾಬ್ದಾರಿ ಹೊತ್ತಿರುವ ಎಲ್ಲ ಸಚಿವರೂ ಮತ್ತು ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ಅನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೊಟೆಲ್ ಅಥವಾ ಇತರ ಯಾರಿಗೋ ಸಹಾಯ ಮಾಡಲೆಂದು ನಿಯಮ ಸಡಿಲಿಸಲು ಆಗುವುದಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನರ ಪ್ರಾಣ ರಕ್ಷಣೆ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಪ್ರಸ್ತುತ ಪ್ರತಿದಿನ 1.5 ಲಕ್ಷ ಟೆಸ್ಟಿಂಗ್ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿಲ್ಲ. 1.5 ಲಕ್ಷಕ್ಕೂ ಹೆಚ್ಚಿನ ಟೆಸ್ಟಿಂಗ್ ಬೇಡ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಬೆಂಗಳೂರಿಗೆ 75 ಸಾವಿರ, ಉಳಿದೆಡೆ 75 ಸಾವಿರ ಟೆಸ್ಟಿಂಗ್ ಗುರಿ ನಿಗದಿಪಡಿಸಿದರೆ. ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುವುದರಿಂದ ಯಾವುದೇ ಉಪಯೋಗವಿಲ್ಲ ಸಾಕು ಎಂದು ತಜ್ಞರು ಸಭೆಯಲ್ಲಿ ಸಲಹೆ ನೀಡಿದರು ಎಂದು ಅಶೋಕ್ ಹೇಳಿದರು.
ಆರೋಗ್ಯ ಸಚಿವ ಡಾ. ಕೆ ಸುಧಾಕರ ಮಾತನಾಡಿ ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ಕೋವಿಡ್ ಮಾದರಿ ಪರೀಕ್ಷೆ ನಡೆಸಬೇಕು, ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಬೇಕು, 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನ ಚುರುಕುಗೊಳಿಸಬೇಕು, ಹೋಮ್ ಐಸೋಲೇಷನ್ ಕಾಲ್ಸ್ ಹೆಚ್ಚಿಸಬೇಕು, ಸಹ ಅಸ್ವಸ್ಥತೆ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು ಎಂದು ಸಲಹೆ ನೀಡಲಾಯಿತು ಎಂದು ಅವರು ತಿಳಿಸಿದರು.