‘ದಿನ್ನೆ ಇಂದ ತೆಗ್ಗಿನೆಡೆಗೆ’ ಉದ್ಯೋಗ ಖಾತ್ರಿ ಕಾರ್ಯಾಗಾರ

ವರದಿ : ಚನ್ನಯ್ಯ ಹಿರೇಮಠ

ಕುಕನೂರು : “ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಅದಕ್ಕಾಗಿ ಜಲ ಸಂರಕ್ಷಣೆ ಮಾಡಲು ಜನರೆಲ್ಲ ಪಣ ತೊಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್ ಕರೆ ನೀಡಿದರು.

ಕುಕನೂರು ತಾಲೂಕಿನ ಬೆಣಕಲ್ ಪಂಚಾಯತಿಯ ವ್ಯಾಪ್ತಿಯ ಅನ್ನದಾನೇಶ್ಚರ ಮಠದ ಸಭಾಂಗಣದಲ್ಲಿ FES ಸಂಸ್ಥೆಯ ಸಹಭಾಗಿತ್ವದಲ್ಲಿ ಮನೆ-ಮನೆಗೂ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದಿನ್ನೆ ಇಂದ ತೆಗ್ಗಿನಡೆಗೆ 2022-23ನೇ ಸಾಲಿನ ಕ್ರಿಯಾ ಯೋಜನೆ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಈಗಾಗಲೇ ಜಲ‌ಮೂಲಗಳನ್ನು ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆನೀರು ನಿಂತು ಸಂಗ್ರಹವಾದರೆ ನಮ್ಮ ನೆಲ, ಜಲ, ಸಮೃದ್ಧವಾಗಲು ಸಾಧ್ಯ. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು. ತಾಲೂಕಿನಲ್ಲಿ ಸಾಕಷ್ಟು ಕರೆಗಳಿದ್ದು, ಆದರೂ ನೀರಿನ ಸಮಸ್ಯೆಯಾಗುತ್ತಿದೆ. ಅಂದರೆ ಅವುಗಳ ರಕ್ಷಣೆ ಮಾಡಬೇಕಿದೆ. ಈಗ ನರೇಗಾ ಯೋಜನೆಯಡಿ ಜಲ ಮೂಲಗಳ ಸಂರಕ್ಷಣೆಗೆ ಬದು, ಕೆರೆ, ಕೃಷಿಹೊಂಡ, ನಾಲಾ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಹಾಗೇ ಗ್ರಾಪಂ ಹಾಗೂ ಶಾಲಾ ಕಟ್ಟಡಗಳಿಗೆ ಮಳೆನೀರು ಕೊಯ್ಲು ಘಟಕ ನಿರ್ಮಿಸಿ ಮಳೆನೀರನ್ನು ತಡೆಯಲಾಗುತ್ತಿದೆ. ಉದ್ಯೋಗ ಖಾತ್ರಿಯಲ್ಲಿ 250ಕ್ಕೂ ಹೆಚ್ಚು ಸೌಲಭ್ಯಗಳಿದ್ದು, ಅವುಗಳ ಸದುಪಯೊಗ ಪಡೆದುಕೊಳ್ಳಬೇಕು ಎಂದರು.

ಎಫ್ ಇಎಸ್ ಸಂಸ್ಥೆಯ ಅಂತರಜಲ ಚೇತನ ಜಿಲ್ಲಾ ಸಂಯೋಜಕರಾದ ವಾಸುದೇವ ಮೂರ್ತಿ ಮಾತನಾಡಿ, ಮಣ್ಣು ನೀರಿನಿಂದ ಸಸ್ಯ ಸಂಪತ್ತು ಸೃಷ್ಟಿಯಾಗುತ್ತದೆ. ನಮಗೆ ವ್ಯವಸಾಯಕ್ಕೆ ಬೇಕಾಗುವ ಮಳೆನೀರನ್ನು ಜಮೀನಿನಲ್ಲೆ ತಡೆಯುವಂತೆ ಮಾಡಬೇಕು. ಆಗ ಮಾತ್ರ ಜಮೀನಿನಲ್ಲಿ ತಂಪು ವಾತಾವರಣ ಇರಲು ಸಾಧ್ಯ. ಇದಕ್ಕಾಗಿ ಉದ್ಯೋಗ ಖಾತ್ರಿಯಲ್ಲಿ ಬದು, ಕೃಷಿಹೊಂಡ, ರಿಚಾರ್ಜ್ ಪಿಟ್ ಮುಂತಾದ ಕಾಮಗಾರಿಗಳ ಸದ್ಬಳಕೆ ಮಾಡಿಕೊಂಡು ಮಳೆನೀರು ತಡೆಯಿರಿ ಎಂದರು. ಮಣ್ಣು-ನೀರು ಚನ್ನಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಚನ್ನಾಗಿರಲು ಸಾಧ್ಯ. ಆನಿಟ್ಟಿನಲ್ಲಿ ರೈತರು ದಿನ್ನೆ ಇಂದ ತಗ್ಗಿನೆಡೆಗೆ 2022-23 ನೇ ಸಾಲಿನ ಕ್ರಿಯಾ ಯೋಜನೆ ಯಲ್ಲಿ ಕಾಮಗಾರಿಗಳನ್ನು ಮಾಡಬೇಕು ಎಂದು ತಿಳಿಸಿದರು.

ತಾಪಂ ತಾಂತ್ರಿಕ ಸಂಯೋಜಕರಾದ ಯಮನೂರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾಪಂ ಪಿಡಿಒ ಕೃಷ್ಣಾರೆಡ್ಡಿ, ಅಧ್ಯಕ್ಷೆ ಕಸ್ತೂರೆವ್ವ ನಿಂಗಪ್ಪ ಹಂಚಿನಾಳ ಹಾಗೂ ಗ್ರಾಮ ಪಂಚಾಯತ ಸದಸ್ಯರು ಗ್ರಾಮದ ಗುರು-ಹಿರಿಯರು, ತಾಲೂಕಿನ ಎಲ್ಲ ತಾಂತ್ರಿಕ ಸಂಯೋಜಕರು, ಬಿಎಫ್ ಟಿ ಗಳು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *