ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ಕರವೇ ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಬೆಂಗಳೂರು : ಕನ್ನಡ ನಾಡಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಟ್ವಿಟರ್‌ ಅಭಿಯಾನಕ್ಕೆ ಭರ್ಜರಿ ಜನಬೆಂಬಲ ವ್ಯಕ್ತವಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಅಭಿಯಾನಕ್ಕೆ ಕೇವಲ ಒಂದು ಗಂಟೆಯಲ್ಲಿ 10,000ಕ್ಕೂ ಹೆಚ್ಚು ಟ್ವೀಟ್‌ ಮಾಡುವ ಮೂಲಕ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರವರ ಆಗ್ರಹಕ್ಕೆ ಟ್ವಿಟರ್‌ ಬಳಕೆದಾರರು ಕೈಜೋಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ‘#ಸಂಸ್ಕೃತವಿವಿಬೇಡ’ ಮತ್ತು ‘#SayNoToSanskrit’ ಎಂಬ ಶೀರ್ಷಿಕೆಯಡಿ ಟ್ವಿಟರ್ ಅಭಿಯಾನ ಹಮ್ಮಿಕೊಂಡಿತ್ತು. ಈ ಕುರಿತು ಟ್ವೀಟ್‌ ಮಾಡಿದ ಕರವೇ ಅಧ್ಯಕ್ಷ ನಾರಾಯಣ ಗೌಡರು, “ದೇಶದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಸಂಸ್ಕೃತ ನುಡಿ ಆಡುವವರ ಸಂಖ್ಯೆ ಜಗತ್ತಲ್ಲಿ ಕೇವಲ 24,000. ಇಷ್ಟು ಜನರ ನುಡಿಗೆ ಹದಿನಾರು ವಿಶ್ವವಿದ್ಯಾಲಯಗಳ ಅಗತ್ಯವಾದರೂ ಏನಿತ್ತು? ನೆನಪಿಟ್ಟುಕೊಳ್ಳಿ, ಏಳು ಕೋಟಿ ಜನರು ಮಾತನಾಡುವ ಕನ್ನಡ ನುಡಿಗೆಂದು ಇರುವುದು ಒಂದೇ ವಿಶ್ವವಿದ್ಯಾಲಯ” ಎಂದು ಹೇಳಿದರು.

ಗೋಕಾಕ್‌ ಚಳವಳಿಯನ್ನು ಸ್ಮರಿಸಿದ ನಾರಾಯಣ ಗೌಡರು, “ಅಂದು ಗೋಕಾಕ್ ಚಳವಳಿಯಲ್ಲಿ ವರನಟ ಡಾ.ರಾಜಕುಮಾರ್ ಅವರು ಭಾಗವಹಿಸಿ ದೊಡ್ಡ ಸಂಚಲನ ಮೂಡಿಸಿದ್ದರು. ಈಗಲೂ ಅಂಥದ್ದೇ ಆಪತ್ತು ಎದುರಾಗಿರುವುದರಿಂದ ಕನ್ನಡದ ಸಾಹಿತಿ, ಕಲಾವಿದರು, ಚಿಂತಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಎಚ್ಚೆತ್ತುಕೊಂಡು ಈ ಪಿತೂರಿಗಳ ವಿರುದ್ಧ ನಿಲ್ಲಬೇಕಿದೆ. ಗೋಕಾಕ್ ಚಳವಳಿ ಯಾಕೆ ನಡೆಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗಲೂ ಕೂಡಾ ಇದೇ ಸಂಸ್ಕೃತದ ಯಜಮಾನಿಕೆ ಮಾಡಲು ಬಯಸುವವರು ಕನ್ನಡದ ಬದಲು ಸಂಸ್ಕೃತ ಕಲಿಕೆಯ ಪಿತೂರಿ ನಡೆಸಿದ್ದರು. ಇಡೀ ರಾಜ್ಯವೇ ಆಗ ಒಂದಾಗಿ ಹೋರಾಡಿತ್ತು. ಈಗ ಅಂಥದ್ದೇ ಕಾಲ ಬಂದಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

“ಒಂದು ಕಡೆ ಹೊಸ ಶಿಕ್ಷಣ ನೀತಿ ಅನ್ವಯ ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡುವುದು. ಇನ್ನೊಂದೆಡೆ ತಮ್ಮ ಕರುಳುಬಳ್ಳಿ ಸಂಘಟನೆಗಳಿಂದ ಕೋರ್ಟಿಗೆ ಅರ್ಜಿ ಹಾಕಿಸುವುದು. ಈ ಕಳ್ಳಾಟಗಳು ಏಕೆ‌? ನಾವು ಕನ್ನಡದ ವಿರುದ್ಧ ಇದ್ದೇವೆ ಎಂದು ಸರ್ಕಾರವೇ ಘೋಷಿಸಿಕೊಂಡುಬಿಡಲಿ. ಕನ್ನಡದ ವಿರುದ್ಧ ಕೋರ್ಟಿಗೆ ಹೋದವರನ್ನು ಸರ್ಕಾರದ ಮುಖ್ಯಸ್ಥರು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಬಹುದಿತ್ತು. ಕೋರ್ಟಿಗೆ ಹೋದವರೆಲ್ಲ ಸರ್ಕಾರ ನಡೆಸುತ್ತಿರುವ ಪಕ್ಷದ ಜತೆ ಕರುಳುಬಳ್ಳಿ ನಂಟು ಹೊಂದಿದವರು. ಹೀಗಾಗಿ ಸರ್ಕಾರವೇ ಈ ಪಿತೂರಿಯ ಭಾಗವಾಗಿದೆ ಎಂಬ ಅನುಮಾನ ನಮ್ಮದು” ಎಂದು ನಾರಾಯಣ ಗೌಡ ಸರ್ಕಾರವನ್ನು ತರಾಟೆಗೆ ತೆದುಕೊಂಡರು.

ಸರಕಾರಿ ಶಾಲೆ – ಕಾಲೇಜ್ – ವಿಶ್ವವಿದ್ಯಾಲಯಗಳಿಗೆ ಅದೇ ಹಣವನ್ನು ಬಳಸಿ, ಅವುಗಳನ್ನು ಉಳಿಸಿ ಬಡಜನರ ಶಿಕ್ಷಣ ಕಲಿಕೆಗೆ ಪ್ರೋತಗಸಾಹಿಸಿ ಎಂಬ ಟ್ವೀಟ್ ಗಳು ಗಮನ ಸೆಳದಿವೆ.

Donate Janashakthi Media

Leave a Reply

Your email address will not be published. Required fields are marked *