ಮೈಸೂರು : ಪಾನಿಪುರಿ ತಿನ್ನಲು ಮೇಲ್ಜಾತಿಯವರ ಬೀದಿಗೆ ಬಂದರು ಎಂಬ ಕಾರಣಕ್ಕಾಗಿ ಜಯಪುರ ಹೋಬಳಿಯ ಅರಸಿನಕೆರೆಯಲ್ಲಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಗ್ರಾಮದ ಮೂರ್ತಿ, ಸಚ್ಚಿನ್, ನವೀನ್, ಮಹದೇವಸ್ವಾಮಿ, ಚಂದನ್, ಸಂತೋಷ್ ಎಂಬುವವರು ದಲಿತರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಇವರನ್ನು ಬಂಧಿಸಿ ಪೊಲೀಸರು ತನಿಖೆಯನ್ನು ಆರಂಬಿಸಿದ್ದಾರೆ. ಹಲ್ಲೆಗೀಡಾದ ಸೌಭಾಗ್ಯ, ದಿಲೀಪ, ಚಂದನ, ಮಧುಕರ, ಪ್ರಸನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಲಿತ ಯುವಕ ಪ್ರಸನ್ನ ಎಂಬವರು ಜ.13ರಂದು ಸವರ್ಣಿಯರ ಬೀದಿಗೆ ಹೋಗಿ ಪಾನಿಪುರಿ ತಿಂದಿದ್ದಾನೆನ್ನಲಾಗಿದೆ. ಈ ವೇಳೆ ತಿಂದ ಪ್ಲೇಟ್ ಅನ್ನು ಡಸ್ಟ್ ಬಿನ್ ಗೆ ಹಾಕಲಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಸವರ್ಣೀಯ ವ್ಯಕ್ತಿಯೋರ್ವ ಪ್ರಶ್ನಿಸಿದ್ದು, ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಇದಾದ ನಂತರ ಶುಕ್ರವಾರ ಸವರ್ಣೀಯರ ತಂಡವೊಂದು ದಲಿತರ ಬೀದಿಯಲ್ಲಿರುವ ಪ್ರಸನ್ನರ ಮನೆಗೆ ನುಗ್ಗಿ ಪ್ರಸನ್ನ ಸಹಿತ ನಾಲ್ವರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಕೋರರು ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ಆರೋಪಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಘಟನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು. ಮೇಲ್ವರ್ಗದವರ ಬೀದಿಗೆ ಬಂದು ಪಾನೀಪುರಿ ತಿಂದರೆಂದು ಗಲಾಟೆ ಮಾಡುತ್ತಾರೆ ಎಂದರೆ ನಾವು ಯಾವಕಾಲದಲ್ಲಿ ಇದ್ದೇವೆ. ಹಿಂದುಗಳೆಲ್ಲ ಒಂದು ಎನ್ನುವವರಿಗೆ ದಲಿತರು ಹಿಂದುಗಳೆಂದು ಕಾಣುವುದಿಲ್ಲವೆ. ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ನಿಲ್ಲುವುದು ಯಾವಾಗ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.