ಪಂಜಾಬ್: ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ-ಅಮೃತಸರ ಪೂರ್ವದಿಂದ ಸಿಧು, ಚಮ್ಕೌರ್ ಸಾಹಿಬ್‌ ನಿಂದ ಚನ್ನಿ ಕಣಕ್ಕೆ

ಅಮೃತಸರ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 86 ಅಭ್ಯರ್ಥಿಗಳ ಮೊದಲ ಪಟ್ಟಿ ಇದಾಗಿದ್ದು, ಕಾಂಗ್ರೆಸ್‍ನ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ನಿಂದ ಕಣಕ್ಕೆ ಇಳಿಯಲಿದ್ದಾರೆ. ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಡೇರಾ ಬಾಬಾ ನಾನಕ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ರಾಜ್ಯ ಸಾರಿಗೆ ಸಚಿವ ರಾಜಾ ಅಮರಿಂದರ್ ವಾರಿಂಗ್ ಅವರು ಗಿಡ್ದರ್‍ಬಾಹಾದಿಂದ ಸ್ಪರ್ಧಿಸಿದ್ದಾರೆ.

ಮಾನಸಾದಿಂದ ಪಂಜಾಬಿ ಗಾಯಕ ಸಿಧು ಮುಸ್ಸೆವಾಲಾ ಮತ್ತು ರಾಜ್ಯಸಭಾ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಖಾದಿಯಾನ್‍ನಿಂದ ಸ್ಪರ್ಧಿಸಲಿದ್ದಾರೆ.

ಮಜಿತಾ ಕ್ಷೇತ್ರದಿಂದ  ಜಗವಿಂದರ್ ಪಾಲ್ ಸಿಂಗ್ (ಜಗ್ಗ ಮಜಿತಾ), ಅಮೃತಸರ ಪಶ್ಚಿಮ ಕ್ಷೇತ್ರದಿಂದ ರಾಜ್ ಕುಮಾರ್ ವೆರ್ಕಾ, ಫತೇಘರ್ ಸಾಹಿಬ್ ಕ್ಷೇತ್ರದಿಂದ ಕುಲ್ಜೀತ್ ನಗ್ರಾ, ಭಟಿಂಡಾ ಅರ್ಬನ್ ಕ್ಷೇತ್ರದಿಂದ ಮನ್‌ಪ್ರೀತ್ ಸಿಂಗ್ ಬಾದಲ್, ಸಂಗ್ರೂರ್ ಕ್ಷೇತ್ರದಿಂದ ವಿಜಯ್ ಇಂದರ್ ಸಿಂಗ್ಲಾ, ಫತೇಘರ್ ಚುರಿಯನ್ ಕ್ಷೇತ್ರದಿಂದ ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ ಸ್ಪರ್ಧಿಸಲಿದ್ದಾರೆ.

ಕಳೆದ ತಿಂಗಳು ಬಿಜೆಪಿ ಸೇರಲು ಕಾಂಗ್ರೆಸ್ ತೊರೆದ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಆರು ದಿನಗಳ ನಂತರ‌ ಮತ್ತೆ ಕಾಂಗ್ರೆಸ್‌ಗೆ ಮರಳಿದರು. ಆದರೆ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಲಡ್ಡಿ ಶ್ರೀ ಹರಗೋಬಿಂದಪುರದ (ಮೀಸಲು ಸ್ಥಾನ) ಶಾಸಕರಾಗಿದ್ದು, ಇದೀಗ ಮನ್ದೀಪ್ ಸಿಂಗ್ ರಂಗರ್ ನಂಗಲ್ ಅವರಿಗೆ ಆ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.

ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ಮತ್ತು ಫಲಿತಾಂಶ ಹೊರಬೀಳಲಿದೆ.

Donate Janashakthi Media

Leave a Reply

Your email address will not be published. Required fields are marked *