ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು 2022ರ ಜನವರಿ 31ರಿಂದ ಆರಂಭಗೊಳ್ಳಲಿದೆ. 2022-2023ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಈ ಬಾರಿ ಬಜೆಟ್ ಅಧಿವೇಶನವ ಎರಡು ಅವಧಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಸಂಸತ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 14 ರಂದು ಪ್ರಾರಂಭವಾಗಿ ಏಪ್ರಿಲ್ 8 ರವರೆಗೆ ಇರುತ್ತದೆ. ಈ ಕುರಿತು ಸರ್ಕಾರ ಇಂದು ಮಾಹಿತಿ ನೀಡಿದ್ದು, ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ಜನವರಿ 31 ರಂದು ಸಭೆ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಫೆಬ್ರವರಿ 3 ರಿಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 12 ದಿನಗಳ ಅಧಿವೇಶನ ನಡೆಯಲಿದ್ದು ಫೆಬ್ರವರಿ 11 ಕ್ಕೆ ಅಂತ್ಯವಾಗಲಿದೆ. ಒಂದು ತಿಂಗಳ ನಂತರ ಅಧಿವೇಶನದ ಎರಡನೇ ಭಾಗವು ಮಾರ್ಚ್ 14ರಂದು ಆರಂಭವಾಗಿ ಏಪ್ರಿಲ್ 8ರವರೆಗೆ ನಡೆಯಲಿದೆ.
ಸಂಸತ್ ಚಳಿಗಾಲದ ಅಧಿವೇಶನವು ನವೆಂಬರ್ 29ರಂದು ಆರಂಭವಾಗಿ ಡಿಸೆಂಬರ್ 22ರಂದು ಮುಕ್ತಾಯವಾಗಿತ್ತು. ಇದೀಗ ದೇಶದಲ್ಲಿ ದೈನಂದಿನ 2 ಲಕ್ಷಕ್ಕೂ ಅಧಿಕ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಜೆಟ್ ಅಧಿವೇಶನವನ್ನು ಎರಡು ಅವಧಿಗೆ ನಡೆಸಲು ಉದ್ದೇಶಿಸಲಾಗಿದೆ.
ಈಗಾಗಲೇ ಹಣಕಾಸು ಸಚಿವರು ಕೃಷಿ, ಕೈಗಾರಿಕೆ, ಇಂಧನ ಸೇರಿದಂತೆ ವಿವಿಧ ಇಲಾಖೆಗಳ ಜತೆ ಪೂರ್ವಭಾವಿ ಸಭೆ ನಡೆಸಿ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಜನಸ್ನೇಹಿ ಬಜೆಟ್ ಮಂಡಿಸುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.