ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಇಂದು ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ತಡೆಯಲು ಸಕಲ ಸಿದ್ಧತೆ ಮಾಡಿಕೊಂಡಿರುವ ಪೊಲೀಸರು ಎಡಿಜಿಪಿ ನೇತೃತ್ವದಲ್ಲಿ ಸುಮಾರು 3 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಡೆಯುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.
ಕೋವಿಡ್ ಸೋಂಕು ಹೆಚ್ಚಳ ಸಮಯದಲ್ಲಿ ಸರ್ಕಾರ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದೆ, ಕಾಂಗ್ರೆಸ್ ನಾಯಕರು ಯಾವ ರೀತಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಈಗಾಗಲೇ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದು, ಪ್ರಕರಣದ ವಿಚಾರಣೆ ಇದೇ 14ರಂದು ನಡೆಯಲಿದೆ
ಈ ಮಧ್ಯೆ ಕಾಂಗ್ರೆಸ್ ನಾಯಕರ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ 30 ಮಂದಿ ವಿರುದ್ಧ ನಾಲ್ಕನೇ ಎಫ್‌ಐಆರ್ ದಾಖಲಾಗಿದೆ.
ಪಾದಯಾತ್ರೆಗೆ ಬರುವ ವಾಹನಗಳ ತಪಾಸಣೆ : ಪಾದಯಾತ್ರೆಗೆ ಬರುವ ಪ್ರತೀ ವಾಹನವನ್ನು ತಪಾಸಣೆ ನಡೆಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬರುವವರನ್ನು ತಡೆಯಲು ಪೊಲೀಸರು ನಿರ್ಧರಿಸಿದ್ದಾರೆ. ಪಾದಯಾತ್ರೆ ಈಗಾಗಲೇ ರಾಮನಗರ ತಲುಪಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸರ್ಕಾರದ ಸೂಚನೆ ಹಾಗೂ ಸಭೆಯ ನಿರ್ಧಾರ ಹಿನ್ನೆಲೆಯಲ್ಲಿ ಐಜೂರು ವೃತ್ತ, ಸುತ್ತಮುತ್ತಲೂ 3 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಿರುವ ಸ್ಥಳಗಳಲ್ಲಿ ಮೀಸಲು ಪೊಲೀಸ್ ಪಡೆಗಳು ಬೀಡುಬಿಟ್ಟಿದ್ದಾರೆಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಐಜಿ ಲೋಕೇಶ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಗಿರೀಶ್ ಅವರು ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮುಖಂಡರ ಜೊತೆ ಚರ್ಚೆ ನಡೆಸಿದರು. ಕಾಂಗ್ರೆಸ್ ನಾಯಕರು ಆಂತರಿಕ ಸಭೆ ನಡೆಸಿ ನಂತರ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದರು.
ಇದಕ್ಕೂ ಮುನ್ನಾ ರಾಮನಗರದ ಕಾಗೇಪುರಗೇಟ್ ಬಳಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಜಮಾವಣೆ ತೆಗೆದುಕೊಂಡಿದ್ದರು. ಇಂದು ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಕಾರ್ಯಕರ್ತರನ್ನು ರಾಮನಗರ ಜಿಲ್ಲೆಯಲ್ಲಿ ಗಡಿ ಭಾಗದಲ್ಲೇ ತಡೆಯಲಾಯಿತು.
ರಾಮನಗರವನ್ನು ಸಂಪರ್ಕಿಸುವ ಕುಣಿಗಲ್, ಮಾಗಡಿ, ಮದ್ದೂರು, ಚೆನ್ನಪಟ್ಟಣ ಮಾರ್ಗಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಪ್ರತಿಯೊಂದು ವಾಹನವನ್ನು ತಡೆದು ಪರಿಶೀಲಿಸಲಾಯಿತು. ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಕಾರ್ಯಕರ್ತರನ್ನು ದಾರಿ ಮಧ್ಯೆಯೇ ತಡೆದು ನಿಲ್ಲಿಸಲಾಯಿತು.
ಇದನ್ನೂ ಓದಿ :ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಆಘಾತ : ಮತ್ತೊಬ್ಬ ಮಂತ್ರಿ ರಾಜೀನಾಮೆ!
ಇಂದು 13 ಕಿಲೋ ಮೀಟರ್ ಪಾದಯಾತ್ರೆ: ರಾಮನಗರ ಪಟ್ಟಣದಿಂದ ಇಂದು ಪಾದಯಾತ್ರೆ ಹೊರಡಲಿರುವ ಕೈ ನಾಯಕರು 13 ಕಿಲೋ ಮೀಟರ್ ಸಂಚಾರ ಮಾಡುವ ಸಾಧ್ಯತೆಯಿದೆ. ಆದರೆ ಇಂದು ಯಾವ್ಯಾವ ರಸ್ತೆಯಲ್ಲಿ ಸಾಗಲಿದೆ ಎಂಬ ಮಾಹಿತಿಯನ್ನು ನೀಡಿಲ್ಲ ಎಂಬುದು ಮಹತ್ವದ ವಿಷಯವಾಗಿದೆ.
ಇಂದು ಪಾದಯಾತ್ರೆಗೆ ಬ್ರೇಕ್?: ಈಗಾಗಲೇ ಪಾದಯಾತ್ರೆಯ ಔಚಿತ್ಯತೆಯನ್ನು ಈ ಸಮಯದಲ್ಲಿ ಪ್ರಶ್ನಿಸಿ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರ ಕೂಡ ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಿದೆ. ರಾಮನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಇಂದು ರಾಮನಗರದಲ್ಲಿಯೇ ಪಾದಯಾತ್ರೆಯನ್ನು ಕಾಂಗ್ರೆಸ್ ಸ್ಥಗಿತಗೊಳಿಸುತ್ತದೆಯೇ ಎಂಬ ಸಂಶಯ ಉಂಟಾಗಿದೆ.
ಇಂದು ರಾಮನಗರದಲ್ಲಿ ಸಿದ್ದರಾಮ್ಯಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಅದರಲ್ಲಿ ಪಾದಯಾತ್ರೆಯನ್ನು ಸದ್ಯಕ್ಕೆ ನಿಲ್ಲಿಸಿ ನಂತರ ಕೊರೋನಾ ಸೋಂಕು ತಗ್ಗಿದ ಮೇಲೆ ಮುಂದುವರಿಸುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.