ಬೆಂಗಳೂರು: ಜನಪ್ರತಿನಿಧಿಗಳು ಎಸಗುವ ಭ್ರಷ್ಟಾಚಾರವನ್ನು ವಿಚಾರಣೆ ಮಾಡಲು ವಿಶೇಷ ಕೋರ್ಟುಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಇತಿಮಿತಿಗಳ ನಡುವೆಯೂ ಆ ಕೋರ್ಟ್ ಕರ್ನಾಟಕ ಶಾಸಕರ ಲಂಚಗುಳಿತನದ ವಿರುದ್ಧ ಕ್ರಮವಹಿಸಿದೆ.
ಜನಪ್ರತಿಗಳ ವಿರುದ್ಧ ಕೋರ್ಟಿಗೆ ದೂರು ನೀಡಲು ರಾಜ್ಯಪಾಲರ ಅನುಮತಿಯ ಅಗತ್ಯವಿದ್ದ ಕಾರಣ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಲಂಚ ಪ್ರಕರಣ ಕುರಿತು ಕೋರ್ಟಿಗೆ ದೂರು ನೀಡಲು ರಾಜ್ಯಪಾಲರ ಅನುಮತಿಗಾಗಿ ಪತ್ರ ಬರೆದರು. ಆದರೆ ಮೂರು ತಿಂಗಳಾದರೂ ರಾಜ್ಯಪಾಲರಿಂದ ಯಾವುದೇ ಉತ್ತರ ಬಾರದಿದ್ದಾಗ ಭ್ರಷ್ಟಾಚಾರ ತಡೆ ಕಾಯಿದೆಯ ಅಡಿಯಲ್ಲಿ ನೇರವಾಗಿ ವಿಶೇಷ ಕೋರ್ಟಿನಲ್ಲಿ ತಮ್ಮ ದೂರು ಸಲ್ಲಿಸಿದರು.
ಪ್ರಕರಣ ಹೀಗಿದೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಪಕ್ಷವು ಬಹಿರಂಗವಾಗಿ ಅಂದಿನ ಆಡಳಿತ ಪಕ್ಷಗಳ (ಕಾಂಗ್ರೆಸ್+ಜೆಡಿಎಸ್) ಶಾಸಕರಿಗೆ ಹಣ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷಾಂತರಕ್ಕೆ ಯತ್ನಿಸಿ ಯಶಸ್ವಿಯಾದ ಜಾಹೀರಾಗಿರುವ ವಿಷಯ.
ಕೋಲಾರ ಶಾಸಕ ಶ್ರೀನಿವಾಸಗೌಡ ಬಿಜೆಪಿ ಪಕ್ಷದವರು ತನಗೆ ರೂ.30 ಕೋಟಿ ಕೊಡಲು ಸಿದ್ಧರಿದ್ದಾರೆ ಮತ್ತು ಮುಂಗಡವಾಗಿ ರೂ.5 ಕೋಟಿ ಅದಾಗಲೇ ನೀಡಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ತಾನು ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರಲು ಸಚಿವ ಡಾ.ಸಿ.ಎನ್. ಅಶ್ವಥನಾರಾಯಣ ಮತ್ತು ಎಸ್.ಆರ್.ವಿಶ್ವನಾಥ್ ಇಬ್ಬರೂ ಸಿ.ಪಿ.ಯೋಗೇಶ್ವರ್ ಅವರ ಸಮಕ್ಷಮದಲ್ಲಿ ರೂ.5 ಕೋಟಿ ಹಣ ತನಗೆ ನೀಡಿದ್ದಾರೆಂದೂ ಶ್ರೀನಿವಾಸಗೌಡ ಹೇಳಿದ್ದರು.
ಟಿ.ಜೆ. ಅಬ್ರಾಹಂ ಅವರ ದೂರಿನ ಅನ್ವಯ ವಿಶೇಷ ಕೋರ್ಟ್ ಶಾಸಕರಿಗೆ ಮಾರ್ಚ್ 2021ರಲ್ಲಿ ಸಮನ್ಸ್ ಜಾರಿ ಮಾಡಿತು. ಮೂರು ತಿಂಗಳಾದರೂ ರಾಜ್ಯಪಾಲರಿಂದ ಉತ್ತರ ಬಾರದ ಕಾರಣ “ಅನುಮತಿ ದೊರೆತಿದೆ ಎಂದು ಭಾವಿಸಿ” ಈ ಸಮನ್ಸ್ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿತು.
ವಿಶೇಷ ಕೋರ್ಟಿನ ಈ ಸಮಸ್ ಅನ್ನು ಪ್ರಶ್ನಿಸಿ ಆ ಶಾಸಕರು ಕರ್ನಾಟಕ ಹೈಕೋರ್ಟಿಗೆ ತಮ್ಮ ಅರ್ಜಿ ಸಲ್ಲಿಸಿ, ರಾಜ್ಯಪಾಲರ ಅನುಮತಿ ಇಲ್ಲದೇ ಸಮನ್ಸ್ ನೀಡಿದ್ದು ಸರಿಯಲ್ಲ ಎಂದು ವಾದಿಸಿದರು. ಶಾಸಕರ ಅರ್ಜಿಯನ್ನು ನಿನ್ನೆ ವಿಲೇವಾರಿ ಮಾಡಿದ ಏಕಪೀಠವು ರಾಜ್ಯಪಾಲರ ಅನುಮತಿಯಿಲ್ಲದೇ ಸಮನ್ಸ್ ಜಾರಿಮಾಡಿದ್ದನ್ನು ಮರುಪರಿಶೀಲಿಸಬೇಕೆಂದು ವಿಶೇಷ ಕೋರ್ಟಿಗೆ ಆದೇಶ ಮಾಡಿದೆ.
ಹೈಕೋರ್ಟಿನ ಈ ಆದೇಶವು ಭ್ರಷ್ಟಾಚಾರ ತೊಡೆದುಹಾಕಲು ಬಯಸಿದ ವಿಶೇಷ ಕೋರ್ಟಿನ ಹಕ್ಕನ್ನು ಮೊಟಕು ಮಾಡಿದಂತಲ್ಲವೇ? ಹೈಕೋರ್ಟ್ ಕೂಡ ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ವಿಶೇಷ ಕೋರ್ಟಿನ ಜತೆ ಸಹಮತ ವ್ಯಕ್ತಪಡಿಸಬೇಕಾಗಿತ್ತು. ಈ ವಿಚಾರದಲ್ಲಿ ಕಾನೂನು ತಜ್ಞರು ಏನು ಹೇಳುತ್ತಾರೋ ಕಾದು ನೋಡಬೇಕಿದೆ.
ವರದಿ: ಟಿ ಸುರೇಂದ್ರರಾವ್