ಬೆಂಗಳೂರು: ‘ನೀರಿಗಾಗಿ ಹೋರಾಟ’ ಮೇಕೆದಾಟು ಯೋಜನೆ ಕಾಮಗಾರಿ ಶೀಘ್ರ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಸ್ವಾಮೀಜಿ, ಮೌಲ್ವಿ ಮತ್ತು ಪಾದ್ರಿಗಳು ಮೂರೂ ಧರ್ಮಗಳ ಧಾರ್ಮಿಕ ಮುಖಂಡರು ಗಿಡಗಳಿಗೆ ನೀರೆರೆಯುವ ಮೂಲಕ, ನಗಾರಿ ಬಾರಿಸುವ ಮೂಲಕ, ರೈತಗೀತೆ ಹಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ ಕೆ ಸುರೇಶ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದ್ದು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಭಾಗವಹಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಮಧ್ಯೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಸಾರಥ್ಯದಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು, ‘ಉಳುವ ಯೋಗಿಯ ನೋಡಲ್ಲಿ’ ಎಂಬ ಗೀತೆ ಮತ್ತು ಪಾದಯಾತ್ರೆ ಆಗಿರುವುದರಿಂದ ಹೆಜ್ಜೆ ಹಾಕುತ್ತೇವೆ ನಾವು ಎಂಬ ಗೀತೆಯನ್ನು ಕಲಾವಿದರು ಹಾಡಿದರು.
ಈ ಸಂದರ್ಭದಲ್ಲಿ ಎಲ್ಲರೂ ಹಸಿರು ಶಾಲನ್ನು ಕೈಯೆತ್ತಿ ಬೀಸುತ್ತಾ ರೈತರಿಗಾಗಿ, ನೀರಿಗಾಗಿ ನಮ್ಮ ಹೋರಾಟ ಎಂದು ಸಾರುತ್ತಿದ್ದರು. ಕಾಂಗ್ರೆಸ್ ನ ಮಹಿಳಾ ಜನಪ್ರತಿನಿಧಿಗಳು, ಕಲಾವಿದರಾದ ಸಾಧು ಕೋಕಿಲಾ, ದುನಿಯಾ ವಿಜಯ್ ಭಾಗವಹಿಸಿದ್ದರು. ಕೆಲವು ಮಠಾಧೀಶರುಗಳು ಕೂಡ ಹಾಜರಿದ್ದರು. ಹಿರಿಯ ಚಿತ್ರನಟ ಶಿವರಾಜ ಕುಮಾರ ಪಾದಯಾತ್ರೆ ಜೊತೆ ಹೆಜ್ಜೆ ಹಾಕುವ ಸಾಧ್ಯತೆಗಳಿವೆ.
ಕನಕಪುರದಿಂದ ಬೆಂಗಳೂರಿಗೆ ಪಾದಯಾತ್ರೆ: ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮದ್ರಕ್ಕೆ ಹರಿದು ವ್ಯರ್ಥವಾಗಿ ಹೋಗುವ ಕಾವೇರಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ಇಂದು ನಾಯಕರು ಸುಮಾರು 15ರಿಂದ 20ಕಿಲೋ ಮೀಟರ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಕನಕಪುರದಿಂದ ಬೆಂಗಳೂರಿಗೆ 11 ದಿನಗಳ ಕಾಲ ಜನವರಿ 19ರವರೆಗೆ ಕೈಗೊಂಡಿರುವ ಪಾದಯಾತ್ರೆ ಇದಾಗಿದೆ. ರಾಮನಗರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 2 ಸಾವಿರ ಪೋಲಿಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
165 ಕಿ.ಮೀ. ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ಹೇಗಿದೆ? ಹಲವು ಅಡ್ಡಿ ಆತಂಕಗಳ ನಡುವೆಯೂ ಮೇಕೆದಾಟು ಪಾದಯಾತ್ರೆಗೆ ಇಂದು ಕೈ ಪಡೆ ಕಹಳೆ ಮೊಳಗಿಸೋಕೆ ಸಜ್ಜಾಗಿದೆ. ಬರೋಬ್ಬರಿ 11 ದಿನ 165ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ.
ಸಂಗಮದಿಂದ ಬೆಂಗಳೂರು ವರೆಗಿನ ರೂಟ್ ಮ್ಯಾಪ್ ಈ ರೀತಿ ಇದೆ.
ದಿನ 1: 15 ಕಿ.ಮೀ. ಪಾದಯಾತ್ರೆ ಮೇಕೆದಾಟು ಸಂಗಮದಿಂದ ದೊಡ್ಡ ಆಲದಹಳ್ಳಿ ವರೆಗೆ
ದಿನ 2 ಜನವರಿ 10: 16 ಕಿಲೋ ಮೀಟರ್ ಪಾದಯಾತ್ರೆ ದೊಡ್ಡ ಆಲದಹಳ್ಳಿಯಿಂದ ಕನಕಪುರದ ವರೆಗೆ.
ದಿನ 3 ಜನವರಿ 11: 14.5 ಕಿಲೋ ಮೀಟರ್ ಪಾದಯಾತ್ರೆ ಕನಕಪುರದಿಂದ ಚಿಕ್ಕೇಹಳ್ಳಿ ಗ್ರಾಮದವರೆಗೆ.
ದಿನ 4 ಜನವರಿ 12: 15 ಕಿಲೋ ಮೀಟರ್ ಪಾದಯಾತ್ರೆ, ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್ ವರೆಗೆ.
ದಿನ 5 ಜನವರಿ 13: 13 ಕಿಲೋ ಮೀಟರ್ ಪಾದಯಾತ್ರೆ ರಾಮನಗರ ಟೌನ್ನಿಂದ ಬಿಡದಿ ಟೌನ್ ವರೆಗೆ.
ದಿನ 6 ಜನವರಿ 14: 16 ಕಿಲೋ ಮೀಟರ್ ಪಾದಯಾತ್ರೆ ಬಿಡದಿ ಟೌನ್ನಿಂದ ಕೆಂಗೇರಿ ಪೊಲೀಸ್ ಸ್ಟೇಷನ್ ವರೆಗೆ
ದಿನ 7 ಜನವರಿ 15: 15.5 ಕಿಲೋ ಮೀಟರ್ ಪಾದಯಾತ್ರೆ ಕೆಂಗೇರಿ ಪೊಲೀಸ್ ಸ್ಟೇಷನ್ನಿಂದ ಸಾರಕ್ಕಿ ಸಿಗ್ನಲ್ ವರೆಗೆ.
ದಿನ 8 ಜನವರಿ 16: 16 ಕಿಲೋ ಮೀಟರ್ ಪಾದಯಾತ್ರೆ ಸಾರಕ್ಕಿ ಸಿಗ್ನಲ್ನಿಂದ ಮಾರತ್ತಹಳ್ಳಿ ಜಂಕ್ಷನ್ ವರೆಗೆ.
ದಿನ 9 ಜನವರಿ 17: 13.5 ಕಿಲೋ ಮೀಟರ್ ಪಾದಯಾತ್ರೆ, ಮಾರತ್ತಹಳ್ಳಿ ಜಂಕ್ಷನ್ನಿಂದ ಲಿಂಗರಾಜಿಪುರ ಜಂಕ್ಷನ್ ವರೆಗೆ.
ದಿನ 10 ಜನವರಿ 18: 14 ಕಿಲೋ ಮೀಟರ್ ಪಾದಯಾತ್ರೆ ಲಿಂಗರಾಜಿಪುರ ಜಂಕ್ಷನ್ನಿಂದ ಡಿಸಿಸಿ ಕಾಂಗ್ರೆಸ್ ಭವನದ ವರೆಗೆ
ದಿನ 11 ಜನವರಿ 19: 8 ಕಿಲೋ ಮೀಟರ್ ಪಾದಯಾತ್ರೆ ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು, ಬಸವನಗುಡಿ ವರೆಗೆ.
ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ.