ಆಳುವವರ ಹುಸಿ ಆಶಾವಾದದಿಂದಾಗಿ ಹತ್ತಾರು ಸಾವಿರ ಜನರ ಪ್ರಾಣಕ್ಕೆ ಸಂಚಕಾರದೊಂದಿಗೆ ಆರಂಭವಾದ 2021ರ ವರ್ಷ ರೈತರ ಧೀರೋದಾತ್ತ ಹೋರಾಟದ ವಿಜಯದೊಂದಿಗೆ ಮುಗಿದಿದೆ. ಕಿಸಾನ್ ಚಳವಳಿಯು ಜಂಟಿ ಹೋರಾಟಗಳಲ್ಲಿ ಕಾರ್ಮಿಕರು ಮತ್ತು ರೈತರ ಬೆಳೆಯುತ್ತಿರುವ ಒಗ್ಗಟ್ಟನ್ನು ತೋರಿಸಿಕೊಟ್ಟಿದೆ. ಭವಿಷ್ಯದಲ್ಲಿ ಹಿಂದುತ್ವ–ಕಾರ್ಪೊರೇಟ್ ಆಡಳಿತದ ವಿರುದ್ಧದ ಹೋರಾಟ ಹಾಗೂ ಚಳವಳಿಗಳಿಗೆ ಅದು ಭದ್ರ ಬುನಾದಿ ಇರಿಸಲಿದೆ. ಈ ಶುಭ ಶಕುನದೊಂದಿಗೆ 2022ರ ಹೊಸ ವರ್ಷ ಆರಂಭವಾಗಿದೆ.
ಪ್ರಕಾಶ್ ಕಾರಟ್
ಈಗಷ್ಟೆ ನಾವು ಬೀಳ್ಕೊಡುತ್ತಿರುವ 2021ನೇ ವರ್ಷ ಸಂಕಟ ಹಾಗೂ ಅಗ್ನಿಪರೀಕ್ಷೆಗಳಿಂದ ಕೂಡಿದ್ದ ವರ್ಷವಾಗಿತ್ತು. ಆದರೆ, ಅದು ಜನರಿಗೆ ಗೆಲುವಿನ ವರ್ಷವಾಗಿ ಅಂತ್ಯಗೊಂಡಿದೆ. ಡೆಲ್ಟಾ ತಳಿಯಿಂದ ಉಂಟಾದ ಕೋವಿಡ್‌ನ ಎರಡನೇ ಅಲೆ ಮಾರ್ಚ್ ನಿಂದ ಮೇ ವರೆಗೆ ಜನರನ್ನು ಅತಿಯಾಗಿ ಕಾಡಿತ್ತು. ವೈರಸ್ ಮೇಲೆ ಜಯ ಸಾಧಿಸಲಾಗಿದೆಯೆಂದು ಮೋದಿ ಸರ್ಕಾರ ಜನವರಿಯಲ್ಲೇ ಘೋಷಿಸಿದ್ದರಿಂದ ಸೋಂಕಿನ ದಾಳಿ ಎದುರಿಸಲು ದೇಶ ಸಿದ್ಧವಾಗಿರಲಿಲ್ಲ. ಈ ಹುಸಿ ಆಶಾವಾದದಿಂದಾಗಿ ಹತ್ತಾರು ಸಾವಿರ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಅನೇಕ ಜನರ ಸಾವು ದಾಖಲಾಗದೇ ಹೋಗಿರುವ ಸಂಭವವೂ ಇದೆ. ಆಮ್ಲಜನಕಕ್ಕಾಗಿ ಜನರು ಪರದಾಡಿದ್ದು ಹಾಗೂ ಗಂಗಾ ನದಿಯಲ್ಲಿ ಹೆಣಗಳು ತೇಲಾಡಿದ್ದ ದೃಶ್ಯಗಳು ಜಗತ್ತಿನಾದ್ಯಂತ ಟಿವಿ ವಾಹಿನಿಗಳಲ್ಲಿ ಬಿತ್ತರ ಗೊಂಡಿದ್ದವು. ಆದರೆ ದೇಶವನ್ನು ಈ ಪರಿಯಾಗಿ ದುರಂತಕ್ಕೆ ತಳ್ಳಿದ ಬಗ್ಗೆ ಪಶ್ಚಾತಾಪ ಅಥವಾ ವಿಷಾದದ ಲವಲೇಶವೂ ಪ್ರಧಾನಿಯಿಂದ ವ್ಯಕ್ತವಾಗಲಿಲ್ಲ.
ಲಸಿಕೆ ಕುರಿತು ಕೂಡ ಇದೇ ರೀತಿಯ ಅವಾಂತರಗಳು, ನಡೆದವು. ಸಕಾಲದಲ್ಲಿ ಸಾಕಷ್ಟು ಲಸಿಕೆ ಖರೀದಿ, ದೇಶದಲ್ಲಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸುವುದು ಹಾಗೂ ಅದರ ತ್ವರಿತ – ಸಮಾನ ವಿತರಣೆ ಈ ಎಲ್ಲ ವಿಚಾರಗಳಲ್ಲಿ ಗೊಂದಲದ ಗೂಡು ನಿರ್ಮಾಣವಾಗಿತ್ತು. ಇದೇ ಮೊದಲ ಬಾರಿಗೆ ಉಚಿತ ಲಸಿಕೆ ಬದಲು ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳುವ ಪದ್ಧತಿ ಪರಿಚಯಿಸಲಾಯಿತು. 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಡಿಸೆಂಬರ್ 31ರೊಳಗೆ ಎರಡೂ ಡೋಸ್‌ನೊಂದಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗುತ್ತದೆ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರ್ಕಾರ ತಿಳಿಸಿತು. ಅದು ಅಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಚಾರವಾಗಿತ್ತು. ಡಿಸೆಂಬರ್ ಅಂತ್ಯದೊಳಗೆ, ಶೇಕಡ 65ಕ್ಕಿಂತ ಕಡಿಮೆ ವಯಸ್ಕರು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಅಂದರೆ ಶೇಕಡ 35ಕ್ಕೂ ಹೆಚ್ಚಿನ ಕೊರತೆ ಕಾಡಿದೆ. ಒಮಿಕ್ರಾನ್ ತಳಿ ಇಡೀ ದೇಶವನ್ನು ಆವರಿಸುವ ಅಪಾಯದ ನಡುವೆ ಇಂಥ ಸನ್ನಿವೇಶವಿದೆ.
ಕಾರ್ಪೊರೇಟ್ ಅಜೆಂಡಾಕ್ಕೆ
ಎರಡನೇ ಅಲೆ ಎದುರಿಸಲು ಯೋಜನೆ ರೂಪಿಸುವುದು ಹಾಗೂ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವಲ್ಲಿ ಮತ್ತು ಒಂದು ಸಮಗ್ರ ಲಸಿಕೆ ನೀತಿ ರೂಪಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದು ಮಾತ್ರವಲ್ಲದೆ ಇಂಥ ಅನಾಹುತಕಾರಿ ಪರಿಸ್ಥಿತಿಯನ್ನು ಕೂಡ ಸರ್ಕಾರ ತನ್ನ ವಿಭಜನಕಾರಿ ಹಾಗೂ ಕಾರ್ಪೋರೇಟ್-ಪರ ಅಜೆಂಡಾವನ್ನು ಮುಂದೊತ್ತಲು ಬಳಸಿಕೊಂಡಿದ್ದು ಎದ್ದು ಕಾಣುತ್ತದೆ.
ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಿಂದ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ವಾಪಸ್ ಪಡೆಯುವ ಗುರಿಯನ್ನು ಕೇಂದ್ರ ಬಜೆಟ್‌ನಲ್ಲಿ ನಿಗದಿಪಡಿಸಲಾಯಿತು. ಇದರ ಜೊತೆಯಲ್ಲೇ ಆರು ಲಕ್ಷ ಕೋಟಿ ರೂಪಾಯಿ ಮೊತ್ತದ ಸರ್ಕಾರಿ ಆಸ್ತಿಪಾಸ್ತಿಗಳನ್ನು ನಗದೀಕರಿಸುವ, ಅಂದರೆ ಮಾರಾಟ ಮಾಡುವ ಯೋಜನೆ ಪ್ರಕಟಿಸಲಾಯಿತು. ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ ಹಳಿಗಳು, ಭೂಮಿ ಮತ್ತು ಇತರ ಸಾರ್ವಜನಿಕ ಸೊತ್ತುಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಹೆಸರಿನಲ್ಲಿ ಮಾರಾಟ ಮಾಡುವುದು ಎಂದೇ ಇದರ ಅರ್ಥವಾಗಿದೆ. ಕಾರ್ಪೊರೇಟ್ ಕಂಪೆನಿಗಳು ಸರ್ಕಾರಿ ಬ್ಯಾಂಕ್‌ಗಳಿಂದ ಪಡೆದಿದ್ದ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಸಾಲಗಳನ್ನು ಮನ್ನಾ ಮಾಡಲಾಯಿತು.
ಹಣಕಾಸು ಕ್ಷೇತ್ರದಲ್ಲಿ ನೋಡುವುದಾದರೆ, ಎರಡು ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಿಸಲು ಹಾಗೂ ಎಲ್‌ಐಸಿಯ ಷೇರುಗಳನ್ನು ಮಾರಲು ಸರ್ಕಾರ ಮುಂದಾಯಿತು. ಅಂಬಾನಿ ಮತ್ತು ಅದಾನಿಗೆ ತೋರಿದ ಔದಾರ್ಯದಿಂದಾಗಿ ಅವರಿಬ್ಬರೂ ಕೋವಿಡ್‌ನ ಸಂಕಟದ ಕಾಲದಲ್ಲೂ ಅಸಹ್ಯಕರ ಲಾಭವನ್ನು ದೋಚಿದರು. 2021ರಲ್ಲಿ ಅಂಬಾನಿಯ ಒಟ್ಟು ಆಸ್ತಿ 92.7 ಬಿಲಿಯ ಡಾಲರ್‌ಗೆ ಹಾಗೂ ಅದಾನಿಯ ಸಂಪತ್ತು 78.7 ಬಿಲಿಯ ಡಾಲರ್‌ಗೆ ಏರಿತು.
ಜನರ ಮೇಲೆ ಹೆಚ್ಚೆಚ್ಚು ಹೊರೆಗಳನ್ನು ಹೇರಲಾಯಿತು. ಕೋವಿಡ್ ಸಾಂಕ್ರಾಮಿಕತೆಯ ಮಾರಕ ಎರಡನೇ ಅಲೆಯ ವೇಳೆ ನಿರುದ್ಯೋಗ ಮತ್ತು ಬೆಲೆಯೇರಿಕೆ ಬಿಸಿ ಜನರನ್ನು ಬಹಳವಾಗಿ ತಟ್ಟಿತು. ಸಂಕಷ್ಟ ದುಪ್ಪಟ್ಟುಗೊಂಡಿತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಸತತ ಏರಿಕೆಯಿಂದ ಉಂಟಾದ ಹಣದುಬ್ಬರದಿಂದಾಗಿ ಜನರ ಅಲ್ಪಸ್ವಲ್ಪ ಆದಾಯವೂ ಕರಗಿ ಹೋಗಿ ಕೋಟ್ಯಂತರ ಜನರು ಬಡತನದ ಕೂಪಕ್ಕೆ ಬಿದ್ದರು. ಉದ್ಯೋಗ ಪ್ರಮಾಣ ಕುಸಿಯುತ್ತಿರುವುದರಿಂದ ಆದಾಯ ಕಡಿಮೆಯಾಗಿದ್ದು ಕೂಡ ಬಡತನದ ಬೇಗೆ ಹೆಚ್ಚಾಗಲು ಕಾರಣವಾಯಿತು. 2020-21ರ ಕೋವಿಡ್ ಮಹಾಸೋಂಕಿನ ಅವಧಿಯಲ್ಲಿ ಸುಮಾರು 7ರಿಂದ 8 ಕೋಟಿ ಜನರು ಹೆಚ್ಚುವರಿಯಾಗಿ ಬಡತನಕ್ಕೆ ಜಾರಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
ಭದ್ರತಾ ಖಯಾಲಿಯ ಪ್ರಭುತ್ವ
ಸರ್ಕಾರ ಆರ್‌ಎಸ್‌ಎಸ್‌ನ ಹಿಂದುತ್ವ ಅಜೆಂಡಾವನ್ನು ಹೆಚ್ಚು ಹುಮ್ಮಸ್ಸಿನಿಂದ ಜಾರಿಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬರ್ಖಾಸ್ತುಗೊಳಿಸಿದ ಹಾಗೂ ಅದರ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ರಾಜ್ಯದ ಅಸ್ಮಿತೆ ಮತ್ತು ಜನಸಂಖ್ಯೆ ಹಾಗೂ ರಾಜಕೀಯ ಸಂಯೋಜನೆಯನ್ನು ಬದಲಾಯಿಸಲು ಸರ್ಕಾರ ಹೊರಟಿದೆ. ಕಾಶ್ಮೀರ ಕಣಿವೆಯ ಸ್ಥಾನಮಾನ ಹಾಗೂ ಅದರ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಸೆಂಬ್ಲಿ ಸೀಟುಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಮರುವಿಂಗಡಣೆ, ಚುನಾವಣೆ ಹಾಗೂ ಅದರ ನಂತರವೇ ರಾಜ್ಯ ಸ್ಥಾನಮಾನ ಎಂಬ ವೇಳಾಪಟ್ಟಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ರೂಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಮಗ್ರತೆಯನ್ನು ನಾಶ ಮಾಡಿ ಮೊಟಕುಗೊಳಿಸಿದ ರಾಜ್ಯ ಸ್ಥಾನಮಾನ ಕೊಡುವ ಹುನ್ನಾರ ಇದಾಗಿದೆ.
ಈ ನಡುವೆ, ಅಲ್ಲಿ ನಾಗರಿಕ ಹಕ್ಕುಗಳ ದಮನ ಸತತವಾಗಿ ಮುಂದುವರಿದಿದೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳೇ ಆಡಳಿತ ನಡೆಸಿದರೆ ಈಶಾನ್ಯ ರಾಜ್ಯಗಳಲ್ಲಿ ಕೂಡ ಅದೇ ಅನ್ವಯವಾಗಿದೆ. ನಾಗಾಲ್ಯಾಂಡ್‌ನಲ್ಲಿ 13 ಮುಗ್ಧ ಜನರನ್ನು ಭಾರತೀಯ ಸೇನೆ ಗುಂಡಿಟ್ಟು ಕೊಂದು ಹಾಕಿದ್ದು ನೋಡಿದರೆ ಮುಂದೆ ಬರಲಿರುವ ರಾಷ್ಟ್ರೀಯ ಭದ್ರತೆಯ ಆಡಳಿತ ಹೇಗಿದ್ದೀತು ಎನ್ನುವುದನ್ನು ಕಲ್ಪಿಸಿಕೊಳ್ಳುವಂತಿದೆ.
ಬಾಹ್ಯ ಹಾಗೂ ಆಂತರಿಕ ಶತ್ರುಗಳ ವಿರುದ್ಧ ಹೋರಾಡಲು ಬಲಿಷ್ಠ ಭದ್ರತಾ ಖಯಾಲಿಯ ಪ್ರಭುತ್ವ ಸ್ಥಾಪಿಸುವುದು ಹಿಂದುತ್ವ ಆಡಳಿತಗಾರರಿಗೆ ಅಗತ್ಯವಿದೆ. ಆಂತರಿಕವಾಗಿ, ಮುಸ್ಲಿಮರೇ ಅದರ ಶತ್ರು ಎನ್ನುವುದು ಸ್ಪಷ್ಟ. ನಿರಂತರವಾಗಿ ದ್ವೇಷಭಾಷಣ, ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬಿಜೆಪಿ ನಾಯಕರು ಛೂಬಿಡುತ್ತಿರುವುದು ನಡೆದೇ ಇದೆ. ಇದರ ಫಲವಾಗಿ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಸರಣಿ ಕಾನೂನುಗಳು ಅಂಗೀಕಾರವಾಗಿವೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ತೀರಾ ಈಚೆಗೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಅಂಗೀಕರಿಸಲಾಗಿದೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ “ಲವ್ ಜಿಹಾದ್’ಅನ್ನು ಗುರಿ ಮಾಡಿವೆ, ಅಂತರ್‌ಧರ್ಮೀಯ ಮದುವೆ ಕಾರಣಕ್ಕೆ ಮುಸ್ಲಿಂ ಯುವಜನರನ್ನು ಬಂಧಿಸಲಾಗಿದೆ. ಕರ್ನಾಟಕದಲ್ಲಿ ಕ್ರೈಸ್ತರ ವಿರುದ್ಧ ಗಮನ ಕೇಂದ್ರೀಕರಿಸಲಾಗಿದೆ.
ಜೀವನೋಪಾಯದ ಮೇಲೆ ದಾಳಿ
ಮುಸ್ಲಿಮರು ಹಾಗೂ ಅವರ ಜೀವನೋಪಾಯದ ಮೇಲಿನ ದಾಳಿ ಅವ್ಯಾಹತವಾಗಿರುವ ನಡುವೆ ಈ ವರ್ಷ ಕ್ರೈಸ್ತರು ಹಾಗೂ ಅವರ ಪೂಜಾ ಸ್ಥಳಗಳ ಮೇಲಿನ ದಾಳಿಗಳಲ್ಲಿ ತೀವ್ರ ಏರಿಕೆಯಾಗಿದೆ. ಕ್ರಿಸ್ಮಸ್ ದಿನದಂದೂ ಇಂಥ ಆಕ್ರಮಣ ನಡೆದಿವೆ. ಮದರ್ ಥೆರೆಸಾರ ಮಿಷನರೀಸ್ ಆಫ್ ಚಾರಿಟೀಸ್‌ನ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ) ಅನುಮತಿಯನ್ನು ತಿರಸ್ಕರಿಸಲಾಗಿದೆ.
ಒಟ್ಟಾರೆ ಹೇಳಬೇಕೆಂದರೆ, ಈ ಇಡೀ ವರ್ಷ ಕೋವಿಡ್ ಮಹಾಸೋಂಕನ್ನು ಸರ್ಕಾರ ಕೆಟ್ಟದಾಗಿ ನಿರ್ವಹಿಸಿದ್ದು, ನಿರುದ್ಯೋಗ ಹಾಗೂ ಬೆಲೆಯೇರಿಕೆಗಳಿಂದ ಜನತೆಯ ಮೇಲಿನ ಅಪಾರ ಹೊರೆ ಹಾಗೂ ಅಲ್ಪಸಂಖ್ಯಾತರ ಮೇಲೆ ಎಲ್ಲ ಬಗೆಯ ದಾಳಿಗಳನ್ನು ಕಂಡಿದ್ದೇವೆ.
ಪ್ರತಿರೋಧ ಆರಂಭವಾಗಿದೆ
ಈ ಎಲ್ಲ ಸಂಕಟಗಳ ನಡುವೆಯೇ ಜನರು ಅವುಗಳನ್ನು ಎದುರಿಸಿ ಪ್ರತಿರೋಧಿಸಲು ಆರಂಭಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಐದು ರಾಜ್ಯ ವಿಧಾನಸಭೆಗಳಲ್ಲಿ -ಬಂಗಾಳ, ತಮಿಳುನಾಡು ಮತ್ತು ಕೇರಳ- ಬಿಜೆಪಿ ಹಿನ್ನಡೆ ಅನುಭವಿಸಿದೆ. ಅಸ್ಸಾಂ ರಾಜ್ಯದಲ್ಲಿ ಮಾತ್ರವೇ ತುಂಬಾ ಕಡಿಮೆ ಅಂತರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿದೆ. 2021ರ ಕೊನೆಯ ಚುನಾವಣೆ ಎಂದು ಹೇಳಬಹುದಾದ ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ಎಲ್ಲ ಸಂಪನ್ಮೂಲ ಬಳಸಿದ್ದರೂ ಹಾಗೂ ಹಿಂದುತ್ವ-ಕೇಂದ್ರಿತ ಪ್ರಚಾರ ನಡೆಸಿದರೂ ಅದಕ್ಕೆ ಗೆಲುವು ಸಾಧ್ಯವಾಗಲಿಲ್ಲ. ಅಲ್ಲಿ ಆಮ್ ಆದ್ಮಿ ಪಕ್ಷ (ಆಪ್) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಿಜೆಪಿ ಪರಾಭವಗೊಂಡಿದೆ.
ಹೋರಾಟಗಳು ಹಾಗೂ ಸಾಮೂಹಿಕ ಪ್ರತಿಭಟನೆಗಳ ಪರ್ವದ ನಡುವೆ ಈ ಚುನಾವಣಾ ಹಿನ್ನಡೆಗಳು ದಾಖಲಾಗಿವೆ. 2021ರ ವರ್ಷ ಭಾರತದ ಸಾಮೂಹಿಕ ಹೋರಾಟಗಳ ಇತಿಹಾಸದಲ್ಲಿ ರೈತರ ಧೀರೋದಾತ್ತ ಹೋರಾಟ ಪ್ರಮುಖವಾಗಿ ದಾಖಲಾದ ವರ್ಷ. ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತ ಹಲವು ಸ್ಥಳಗಳಲ್ಲಿ ಹತ್ತಾರು ಸಾವಿರ ರೈತರು ಒಂದು ವರ್ಷದಿಂದ ನಡೆಸಿದ ನಿರಂತರ ಹೋರಾಟಕ್ಕೆ ಮೋದಿ ಸರ್ಕಾರ ಮಣಿದು ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದಿದೆ. ರೈತ ಸಮುದಾಯದ ರಾಜಿರಹಿತ ಐಕ್ಯ ಹೋರಾಟ ಹಾಗೂ ದೃಢಸಂಕಲ್ಪದ ಮುಂದೆ ಸರ್ಕಾರ ತಲೆಬಾಗಲೇ ಬೇಕಾಯಿತು. ‘ಸಂಘಟಿತರಾಗಿ ಹೋರಾಡಿದರೆ ಗೆಲುವು ನಮ್ಮದೇ’ ಎಂಬ ಸ್ಪಷ್ಟ ಸಂದೇಶವನ್ನು ಈ ವಿಜಯ ದೇಶದ ದುಡಿಯುವ ವರ್ಗಕ್ಕೆ ರವಾನಿಸಿದೆ.
ಕಿಸಾನ್ ಚಳವಳಿಯು ಜಂಟಿ ಹೋರಾಟಗಳಲ್ಲಿ ಕಾರ್ಮಿಕರು ಮತ್ತು ರೈತರ ಬೆಳೆಯುತ್ತಿರುವ ಒಗ್ಗಟ್ಟನ್ನು ತೋರಿಸಿಕೊಟ್ಟಿದೆ. ಭವಿಷ್ಯದಲ್ಲಿ ಹಿಂದುತ್ವ-ಕಾರ್ಪೊರೇಟ್ ಆಡಳಿತದ ವಿರುದ್ಧದ ಹೋರಾಟ ಹಾಗೂ ಚಳವಳಿಗಳಿಗೆ ಅದು ಭದ್ರ ಬುನಾದಿ ಇರಿಸಲಿದೆ. ಈ ಶುಭ ಶಕುನದೊಂದಿಗೆ ಹೊಸ ವರ್ಷ ಆರಂಭವಾಗಿದೆ.
* ಅನು: ವಿಶ್ವ