ಅತಿಥಿ ಉಪನ್ಯಾಸಕರ ಜೊತೆಯಲ್ಲಿ ಮಾತುಕತೆ ನಡೆಸಿ ಅವರ ಹಕ್ಕೊತ್ತಾಯಗಳನ್ನು ಪರಿಹರಿಸಲು ಸಿಪಿಐಎಂ ಒತ್ತಾಯ

ಬೆಂಗಳೂರು : ರಾಜ್ಯದಾದ್ಯಂತ ಸರಕಾರಿ ಕಾಲೇಜುಗಳಲ್ಲಿ ಸುಮಾರು 14,800 ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು, ಕಳೆದ 20 ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಧರಣಿಯನ್ನು ನಡೆಸುತ್ತಿರುವುದು ತಮಗೆ ತಿಳಿದಿದೆಯೆಂದು ಭಾವಿಸುವೆವು. ತಮ್ಮ ಸರಕಾರ ಅವರ ಹಕ್ಕೊತ್ತಾಯಗಳ ಕುರಿತು ದಿವ್ಯ ಮೌನ ತೋರಿಸುತ್ತಾ ಉಪೇಕ್ಷೆ ಸುತ್ತಿರುವುದು ತೀವ್ರ ಖಂಡನೀಯ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 15-20 ವರ್ಷಗಳಿಂದ ಯುಜಿಸಿ ಮಾರ್ಗ ಸೂಚಿಯಂತೆ ಆಯ್ಕೆಗೊಂಡು ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಖಾಯಂಗೊಳಿಸದೇ ಅತಿಥಿ ಹೆಸರಿನಲ್ಲಿ ಸರಕಾರವು ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಲ್ಲಾ, ಕನಿಷ್ಠ ವೇತನವನ್ನು ನಿಗದಿಸದೇ, ಕೇವಲ ಗೌರವದ ಅತ್ಯಂತ ಕಡಿಮೆ ಭತ್ಯೆಯಲ್ಲಿ ದುಡಿಸಿಕೊಂಡು ಈ ಉಪನ್ಯಾಸಕರ ದುಡಿಮೆಯನ್ನು ದೋಚುತ್ತಿರುವುದು ಖೇದಕರವಾಗಿದೆ.

ರಾಜ್ಯ ಸರಕಾರ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ತುಂಬದೇ ಇರುವ ಮತ್ತು ಬೆಳೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹುದ್ದೆಗಳನ್ನು ಹೆಚ್ಚಿಸದೇ ಇರುವ ಸರಕಾರದ ಜನವಿರೋಧಿ ನೀತಿಗಳ ಪರಿಣಾಮವಿದಾಗಿದೆ. ಈ ರೀತಿ, ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳನ್ನು ಅತಿಥಿಗಳೆಂಬ ವಂಚಕ ಹೆಸರಿನಲ್ಲಿ ಗೌರವದ ಭತ್ಯೆ ಎಂಬ ನಿಕೃಷ್ಠ ಭತ್ಯೆಯ ಹೆಸರಿನಲ್ಲಿ ಶೋಷಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಸರಕಾರವು ಇವರ ಜೊತೆ ಮಾತುಕತೆ ನಡೆಸಿ ಬೇಗನೇ ಇತ್ಯರ್ಥ ಪಡಿಸದೇ ಹೋದುದರಿಂದ ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಉಪನ್ಯಾಸಗಳಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆಲ್ಲಾ ತಮ್ಮ ಸರಕಾರವೇ ಹೊಣೆಗಾರನಾಗಿದೆ. ಆದ್ದರಿಂದ, ತಕ್ಷಣವೇ ಅವರ ಜೊತೆ ಮಾತುಕತೆ ನಡೆಸಿ ಅವರ ಹಕ್ಕೊತ್ತಾಯಗಳನ್ನು ಪರಿಹರಿಸಿ, ವಿದ್ಯಾರ್ಥಿಗಳಿಗೆ ಉಪನ್ಯಾಸಗಳು ದೊರೆಯುವಂತೆ  ಮಾಡಲು ಮುಂದಾಗಬೇಕು ಎಂದು ಯು. ಬಸವರಾಜ ಆಗ್ರಹಿಸಿದ್ದಾರೆ.  

 

Donate Janashakthi Media

Leave a Reply

Your email address will not be published. Required fields are marked *