ಪ್ರಜಾಪ್ರಭುತ್ವದ ಹೆಸರಿನಲ್ಲಿ ಬಣ್ಣ-ಬಣ್ಣದ ಮಾತುಗಳಾಟ

ಪ್ರಕಾಶ್ ಕಾರಟ್‌

ಬೈಡೆನ್‌ರ ಶೃಂಗದಲ್ಲಿ ಭಾಗವಹಿಸಿದ್ದವರ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ, ಇದು ಸಮ್ಮೇಳನದ ಘೋಷಿತ ಉದ್ದೇಶದಂತೆ ‘ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ಸರ್ವಾಧಿಕಾರವನ್ನು ಎದುರಿಸುವುದು’ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಜಾಗತಿಕ ಪ್ರಜಾಪ್ರಭುತ್ವದ ಒಬ್ಬ ಯೋಧ ಎಂದು ಬಣ್ಣಬಣ್ಣದ ಮಾತನಾಡಿ ಪೋಸ್ ನೀಡುವ ಬದಲು ಅಮೆರಿಕದಲ್ಲಿ ಪ್ರಜಾಪ್ರಭುತ್ವಕ್ಕೆ ಏನಾಗುತ್ತಿದೆ ಎನ್ನುವುದರ ಮೇಲೆ ಅವರು ಗಮನಕೇಂದ್ರೀಕರಿಸಿದರೆ ಒಳ್ಳೆಯದಿತ್ತು.

 

ಅಮೆರಿಕ ಅಧ್ಯಕ್ಷ ಜೋಬೈಡೆನ್ ಡಿಸೆಂಬರ್ 9-10ರಂದು ಆಯೋಜಿಸಿದ್ದ ‘ಪ್ರಜಾಪ್ರಭುತ್ವಕ್ಕೆ ಶೃಂಗಸಭೆ’ ಜಗತ್ತಿನಾದ್ಯಂತ ಪ್ರಜಾಪ್ರಭುತ್ವವನ್ನು ಬಲಪಡಿಸುವ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ‘ನಿರಂಕುಶಾಧಿಕಾರಿಗಳ’ ಪ್ರಯತ್ನಗಳಿಂದ ರಕ್ಷಿಸುವ ಉದ್ದೇಶದ್ದು ಎನ್ನಲಾಗಿತ್ತು. ಅಮೆರಿಕದ ವಿದೇಶಾಂಗ ಇಲಾಖೆ ಹೇಳಿರುವ ಪ್ರಕಾರ ಶೃಂಗಸಭೆಯ ಮೂರುಮುಖ್ಯ ಚರ್ಚಾವಿಚಾರಗಳು ಹೀಗಿದ್ದವು: ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ಸರ್ವಾಧಿಕಾರವನ್ನು ಎದುರಿಸುವುದು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಮಾನವಹಕ್ಕುಗಳಿಗೆ ಗೌರವವನ್ನು ಉತ್ತೇಜಿಸುವುದು.

ಈ ಆನ್‌ಲೈನ್‌  ಶೃಂಗಸಭೆಗೆ ಒಟ್ಟು  100  ಸರ್ಕಾರಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ 89 ನಾಯಕರು ಸ್ಪಂದಿಸಿದರು.  ಶೃಂಗದಲ್ಲಿ ಭಾಗವಹಿಸಿದ್ದವರ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ, ಇದು ಸಮ್ಮೇಳನದ ಘೋಷಿತ ಉದ್ದೇಶದಂತೆ ‘ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ಸರ್ವಾಧಿಕಾರವನ್ನು ಎದುರಿಸುವುದಲ್ಲ’ಎನ್ನುವುದು ಸ್ಪಷ್ಟವಾಗುತ್ತದೆ. ಬದಲಿಗೆ, ಚೀನಾ ಮತ್ತು ರಷ್ಯಾ ಎದುರಿಸುವ ಕಾರ್ಯತಂತ್ರವನ್ನು ವಿಸ್ತರಿಸುವ ಹಾಗೂ ‘ಪ್ರಜಾಪ್ರಭುತ್ವ ಜಗತ್ತಿನ ’ಮೇಲೆ ತನ್ನ ಏಕಚಕ್ರಾಧಿಪತ್ಯ ಉಳಿಸಿಕೊಳ್ಳುವ ಅಮೆರಿಕದ ಯೋಜನೆಯನ್ನು ವಿಸ್ತರಿಸುವ ನಡೆ ಎಂಬುದು ಗೊತ್ತಾಗುತ್ತದೆ.

ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಜೋಬೈಡೆನ್ ‘ಸರ್ವಾಧಿಕಾರ ಶಾಹಿಯನ್ನು ಹಿಮ್ಮೆಟ್ಟಿಸುವ’ ಕುರಿತು ಮಾತನಾಡಿದ ನಂತರ ಸಮ್ಮೇಳನದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ಬೋಲ್ಸನಾರೊ, ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊಡುಟೆರ್ಟೆ ಮೊದಲಾದವರೊಂದಿಗೆ ಕುಳಿತಿದ್ದರು. ಈ ನಾಯಕರು ತಮ್ಮತಮ್ಮ ದೇಶದಲ್ಲಿ ಸರ್ವಾಧಿಕಾರಶಾಹಿಯನ್ನು ಸ್ಥಾಪಿಸಿದ ಚುನಾಯಿತ ನಾಯಕರಾಗಿದ್ದಾರೆ. ಬುಡಕಟ್ಟು ಜನರಹಕ್ಕುಗಳ ಉಲ್ಲಂಘನೆ, ಅಮೆಜಾನ್‌ ಮಳೆ, ಕಾಡುಗಳ ನಾಶ ಮತ್ತು ಕೊವಿಡ್ ಸೋಕಿನ ಅಪಾಯವನ್ನು ನಿರ್ಲಕ್ಷಿಸಿ ತನ್ನ ದೇಶದ ಜನರನ್ನು ದುರಂತಕ್ಕೆ ತಳ್ಳಿದ ನಾಯಕ ಬೋಲ್ಸನಾರೊ. ಡುಟೆರ್ಟೆ, ಮಾದಕ ದ್ರವ್ಯ ವಿರುದ್ಧದ ಹೋರಾಟದ ಹೆಸರಿನಲ್ಲಿ ಸಾವಿರಾರು ಜನರನ್ನು ಕಾನೂನು ಬಾಹಿರವಾಗಿ ಕೊಂದ ಹಾಗೂ ಪತ್ರಕರ್ತರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ ವ್ಯಾಪಕ ದಬ್ಬಾಳಿಕೆ ನಡೆಸಿದ ಕುಖ್ಯಾತಿ ಹೊಂದಿದ್ದಾರೆ.

ತೈವಾನ್ಪ್ರತ್ಯೇಕತಾವಾದಿ-ಹಾಂಕಾಂಗ್ ಪ್ರತ್ಯೇಕತಾವಾದಿ, -ಎನ್ಇಡಿ-ಚೀನಾ-ವಿರೋಧಿರಾಜಕಾರಣಿ ವ್ಯಂಗ್ಯಚಿತ್ರಕೃಪೆ: ಗ್ಲೋಬಲ್ ಟೈಮ್ಸ್

ಅಮೆರಿಕಾದ ಹಿತಾಸಕ್ತಿಗಳನ್ನು ಈಡೇರಿಸುವುದಕ್ಕಾಗಿ ಆಯ್ದ ಆಹ್ವಾನಿತರು ಅಲ್ಲಿದ್ದರು ಎಂಬುದು ತೈವಾನ್‌ಗೆ ಅಮೆರಿಕಾ ತನ್ನದೇ ‘ಒಂದುಚೀನಾ’ ನೀತಿಯನ್ನು ಉಲ್ಲಂಘಿಸಿ ಆಹ್ವಾನ ನೀಡಿದ್ದರಲ್ಲಿ, ಮತ್ತು ವೆನೆಜುವೆಲಾದ ತಥಾಕಥಿತ ಮಧ್ಯಂತರ ಅಧ್ಯಕ್ಷ ಜುವಾನ್ಗುಯಾಡೋ ಕೂಡ ಹಾಜರಿದ್ದುದರಲ್ಲಿ ಕಾಣುತ್ತಿತ್ತು. ಈತನನ್ನು ಅಮೆರಿಕಾ ಅಧ್ಯಕ್ಷ ಮಾದುರೊ ನೇತೃತ್ವದ ಕಾನೂನ ಬದ್ಧ ಸರ್ಕರವನ್ನು ಉರುಳಿಸುವ ಯತ್ನವಾಗಿ ಪೋಷಿಸುತ್ತಿದೆ. ದಕ್ಷಿಣ ಏಷ್ಯಾದ ಆಹ್ವಾನಿತ ಸರ್ಕಾರಗಳ ಪಟ್ಟಿನೋಡಿದರೆ ಕೂಡ ಅಮೆರಿಕದ ತಂತ್ರ ಸ್ಪಷ್ಟವಾಗುತ್ತದೆ. ಪಾಕಿಸ್ತಾನವನ್ನು ಆಹಾನಿಸಲಾಗಿತ್ತು (ಅದುಭಾಗವಹಿಸಲುನಿರಾಕರಿಸಿತು); ಆದರೆ ಬಾಂಗ್ಲಾದೇಶ ಅಥವಾ ಶ್ರೀಲಂಕಾವನ್ನು ಆಹ್ವಾನಿಸಿರಲಿಲ್ಲ. ಭಾರತ, ನೇಪಾಳ ಮತ್ತು ಮಾಲ್ದೀವ್ಸ್ ಆಹ್ವಾನಿತ ಇತರ ಹಲವು ದೇಶಗಳಾಗಿದ್ದವು.  ಬಾಂಗ್ಲಾದೇಶವು ಪಾಕಿಸ್ತಾನಕ್ಕಿಂತಲೂ ಕಡಿಮೆ ಪ್ರಜಾಪ್ರಭುತ್ವದೇಶವೇ? ಆಫ್ಘಾನಿಸ್ತಾನವನ್ನು ಒಳಗೊಳಿಸುವ ತುರ್ತು ಇದ್ದುದು ಪಾಕಿಸ್ತಾನವನ್ನು ಆಹ್ವಾನಿಸುವಲ್ಲಿ ನಿರ್ಣಾಯಕ ಅಂಶವಾಗಿತ್ತು.

ಮೋದಿ ಹೇಳಿಕೆ ಮತ್ತು ಅಮೆರಿಕಾದ ತಿರುಚಿದತರ್ಕ

ಶೃಂಗಸಭೆಗೆ ನೀಡಿದ ಹೇಳಿಕೆಯಲ್ಲಿ ಪ್ರಧಾನ ಮಂತ್ರಿಮೋದಿ, ತಾವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿದರು. ‘ಪ್ರಜಾಸತ್ತಾತ್ಮಕ ಚೇತನ ನಮ್ಮನಾಗರಿಕತೆಯ ವಿಲಕ್ಷಣತೆಯ ಅವಿಭಾಜ್ಯ ಅಂಗವಾಗಿದೆ’ ಎಂದೂ ಹೇಳಿದರು. ತನ್ನ ಬೆನ್ನನ್ನು ತಾನೇ ತಟ್ಟಿಕೊಂಡತಿದ್ದ ಭಾಷಣದಲ್ಲಿ ಮೋದಿ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಬೆದರಿಕೆಗಳು ಅಥವಾ ಸಮಸ್ಯೆಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ.

ಬೈಡೆನ್ ತಮ್ಮ ಆರಂಭಿಕ ಟಿಪ್ಪಣಿಗಳಲ್ಲಿ ‘ಫ್ರೀಡಂ ಹೌಸ್’ ಅನ್ನು ಉಲ್ಲೇಖಿಸಿದರು. ಅದೊಂದು ಅಮೆರಿಕ ಸರ್ಕಾರದಿಂದ ಹಣಕಾಸು ನೆರವು ಪಡೆಯುವ ಸರಕಾರೇತರ ಸಂಘಟನೆ. ಸತತ 15ನೇ ವರ್ಷವೂ ಜಾಗತಿಕ ಸ್ವಾತಂತ್ರ್ಯ ಹಿನ್ನಡೆ ಅನುಭವಿಸುತ್ತಿದೆ ಎಂದು 2020ರಲ್ಲಿ ಫ್ರೀಡಂ ಹೌಸ್ ತನ್ನ ವರದಿಯಲ್ಲಿ ಹೇಳಿತ್ತು. ಅದು 2021ರ ವರದಿಯಲ್ಲಿ ಭಾರತವನ್ನು ‘ಸ್ವತಂತ್ರ’ದಿಂದ ‘ಭಾಗಶಃ ಸ್ವತಂತ್ರ’ ದೇಶದ ಸ್ಥಾನಕ್ಕೆ ಇಳಿಸಿತ್ತು. ಪ್ರಜಾಪ್ರಭುತ್ವ ಕುಸಿಯುತ್ತಿರುವ ಬಗ್ಗೆ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಅಂಡ್ ಇಲೆಕ್ಟೋರಲ್ ಅಸಿಸ್ಟನ್ಸ್’ (ಅಂತರ‍್ರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ನೆರವಿನ ಸಂಸ್ಥೆ) ಮಾಡಿರುವ ಟಿಪ್ಪಣಿಯನ್ನೂ ಬೈಡೆನ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. “ಭಾರತ, ಇಂಡೋನೇಷ್ಯಾ, ಫಿಲಿಪ್ಪೀನ್ಸ್ ಮತ್ತು ಶ್ರೀ ಲಂಕಾದಲ್ಲಿ ಪ್ರಜಾಪ್ರಭುತ್ವದ ಅವನತಿಯಲ್ಲಿ ಒಂದು ಗಮನಾರ್ಹ ಮುಂದುವರಿಕೆ ದಾಖಲಾಗಿದೆ” ಎಂದು ‘ದಿ ಗ್ಲೋಬಲ್ ಸ್ಟೇಟಸ್ ಆಫ್ ಡೆಮಾಕ್ರಸಿ 2021’ ವರದಿಯಲ್ಲಿ ಈ ಸಂಸ್ಥೆ ಹೇಳಿದೆ.

ನಿಜ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಇಂತಹ ಪ್ರತಿಕೂಲ ವರದಿಗಳನ್ನು ಅಮೆರಿಕಾ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ, ಏಕೆಂದರೆ ಚೀನಾದ ಹೆಚ್ಚುತ್ತಿರುವ ಪ್ರಭಾವದ ವಿರುದ್ಧದ ಹೋರಾಟದಲ್ಲಿ ಭಾರತ ಒಂದು ಮೌಲ್ಯಯುತ ಪಾಲುದಾರ ಎಂದು ಅದು ಪರಿಗಣಿಸುತ್ತದೆ.

ಮೋದಿ ಸಾಂಸ್ಥೀಕರಿಸಿರುವ ಹಿಂದುತ್ವ ಸರ್ವಾಧಿಕಾರಶಾಹೀ ಆಳ್ವಿಕೆ ಮತ್ತು ನಾಗರಿಕರ ಹಕ್ಕುಗಳ ವ್ಯವಸ್ಥಿತ ದಮನ, ಅಲ್ಪಸಂಖ್ಯಾತರ ಮೇಲಿನ ದಾಳಿ, ಮಾಧ್ಯಮದ ದಮನ, ಯುಎಪಿಎಯಂಥ ಕಾನೂನುಗಳನ್ನು ರಾಜಕೀಯ ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಬಳಸುವುದು ಮುಂತಾದ ಎಲ್ಲ ಕ್ರಮಗಳನ್ನು ನಿರ್ಲಕ್ಷಿಸಬಹುದಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತದ ಪ್ರಧಾನಿ ಮೋದಿಗಿಂತ ಹೆಚ್ಚು ಸರ್ವಾಧಿಕಾರಶಾಹಿ ಎಂಬುದನ್ನು ಅಮೆರಿಕದ ವಿದೇಶಾಂಗ ಇಲಾಖೆಯ ತಿರುಚಿದ ತರ್ಕದಿಂದ ಮಾತ್ರವೇ ವಿವರಿಸಲು ಸಾಧ್ಯ.

ಶಬ್ದಗಳೊಡನೆ ಚಿನ್ನಾಟ

ಅಮೆರಿಕದ ಸರ್ಕಾರಗಳು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೆಸರಿನಲ್ಲಿ ಶಬ್ದಗಳ ಚಿನ್ನಾಟವನ್ನು ಸತತವಾಗಿ ಮುಂದುವರಿಸಿಕೊಂಡು ಬಂದಿವೆ. 1980ರ ದಶಕದಲ್ಲಿ ರೊನಾಲ್ಡ್ ರೇಗನ್ ಅಧ್ಯಕ್ಷರಾಗಿದ್ದಾಗ ‘ದಿ ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ’ಯನ್ನು (ಎನ್‌ಇಡಿ) ಸ್ಥಾಪಿಸಲಾಯಿತು. ‘ಮುಕ್ತ ಮಾರುಕಟ್ಟೆಗಳು ಪ್ರಜಾಪ್ರಭುತ್ವವನ್ನು ಪೋಷಿಸುತ್ತವೆ’ ಎನ್ನುವುದು ಎನ್‌ಇಡಿಯ ಗುರಿಯಾಗಿತ್ತು. ಅಮೆರಿಕಕ್ಕೆ ವಿರುದ್ಧವಾಗಿದೆಯೆನ್ನಲಾದ ಸರ್ಕಾರಗಳ ವಿರುದ್ಧ ಕೆಲಸ ಮಾಡಲು ಪ್ರತಿಪಕ್ಷಗಳಿಗೆ ಹಣಕಾಸು ಒದಗಿಸಲು ಅಮೆರಿಕ ಸರ್ಕಾರಕ್ಕೆ ಇದೊಂದು ಸಾಧನವಾಗಿತ್ತು.

ಬಿಲ್ ಕ್ಲಿಂಟನ್ ಆಡಳಿತ ‘ಕಮ್ಯುನಿಟಿ ಫಾರ್ ಡೆಮಾಕ್ರಸೀಸ್’ (ಸಿಒಡಿ) ಎಂಬ ವೇದಿಕೆಯನ್ನು ಹುಟ್ಟು ಹಾಕಿತು. 1990- 2000ದಲ್ಲಿ ಅಂದಿನ ವಾಜಪೇಯಿ ಸರ್ಕಾರ ಅತ್ಯುತ್ಸಾಹದಿಂದ ಸಿಒಡಿಯನ್ನು ಸೇರಿತು. 2000 ಜೂನ್‌ನಲ್ಲಿ ವಾರ್ಸಾದಲ್ಲಿ ಸಿಒಡಿಯ ಅಂತಾರಾಷ್ಟ್ರೀಯ ಸಮ್ಮೇಳನ ಪ್ರಾಯೋಜಿಸಿದ ಪ್ರಮುಖ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಜಾರ್ಜ್ ಬುಷ್ ಅಧಿಕಾರಕ್ಕೆ ಬಂದ ಮೇಲೆ ‘ಗ್ಲೋಬಲ್ ಡೆಮಾಕ್ರಸಿ ಇನಿಷಿಯೇಟಿವ್’ ಅನ್ನು ಭಾರತ ಸೇರಿತು. 2005ರಲ್ಲಿ ಬುಷ್ ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಂಟಿ ಹೇಳಿಕೆಯಲ್ಲಿ ಇದನ್ನು ಪ್ರಕಟಿಸಿದರು.

ಸರ್ಕಾರಗಳನ್ನು ಉರುಳಿಸುವ ಉದ್ಯಮ

1950ರ ದಶಕದಿಂದಲೂ ಅಮೆರಿಕದ ಪ್ರಜಾಪ್ರಭುತ್ವ ಉದ್ದಿಮೆಯೆಂದರೆ ಜಗತ್ತಿನಾದ್ಯಂತ ಜನಪ್ರಿಯ ಸರ್ಕಾರಗಳನ್ನು ಅಸ್ಥಿರಗೊಳಿಸುವುದು ಅಥವಾ ಉರುಳಿಸುವುದು. ಗ್ವಾಟೆಮಾಲಾ, ಬ್ರೆಜಿಲ್, ಚಿಲಿ, ಗ್ರೆನಡಾ, ಇರಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮುಂತಾದ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ ನಾವು ಇದನ್ನು ಕಂಡಿದ್ದೇವೆ. ದೇಶಗಳ ಮೇಲೆ ಮಿಲಿಟರಿ ದಾಳಿ ಮಾಡಿ ಅವುಗಳನ್ನು ವಶಪಡಿಸಿಕೊಂಡು ಅಲ್ಲಿ ‘ಪ್ರಜಾಪ್ರಭುತ್ವ ನೆಡಲು’ ಯತ್ನಿಸುವುದು ಇನ್ನೊಂದು ವಿಧಾನವಾಗಿದೆ. ಇರಾಕ್ ಮತ್ತು ಆಫ್ಘಾನಿಸ್ತಾನ ತೀರಾ ಈಚಿನ ಉದಾಹರಣೆಗಳಾಗಿವೆ.

ಶೃಂಗಸಭೆಯ ಸಮಾರೋಪದಲ್ಲಿ ಬೈಡೆನ್ ‘ಪ್ರಜಾಸತ್ತಾತ್ಮಕ ನವೀಕರಣ ಮತ್ತು ಪ್ರಜಾಪ್ರಭುತ್ವಕ್ಕೆ ಭಾಗೀದಾರಿಕೆ’ (ಫಂಡ್ ಫಾರ್ ಡೆಮಾಕ್ರಟಿಕ್ ರಿನ್ಯೂವಲ್ ಮತ್ತು ಪಾರ್ಟ್ನರ್‌ಷಿಪ್ ಫಾರ್ ಡೆಮಾಕ್ರಸಿ) ಕಾರ್ಯಕ್ರಮಗಳಿಗೆ 424 ಮಿಲಿಯ ಡಾಲರ್ ನಿಧಿ ಒದಗಿಸುವುದಾಗಿ ಪ್ರಕಟಿಸಿದರು. ವಿದೇಶಾಂಗ ಇಲಾಖೆ ಮತ್ತು ಯುಎಸ್‌ಎಐಡಿ ಅದನ್ನು ನಿರ್ವಹಿಸುತ್ತವೆ ಎಂದಿದ್ದಾರೆ. ಅಮೆರಿಕದ ಭಾಗೋಳಿಕ ರಾಜಕೀಯ ಹಿತಾಸಕ್ತಿಗಳನ್ನು ಮುಂದೊತ್ತಲು ಈ ಹಣವನ್ನು ಹೇಗೆ ಬಳಸಲಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಪರಿಶ್ರಮವೇನೂ ಬೇಕಿಲ್ಲ.

ಪೋಸ್ ಕೊಡುವುದು ಸಾಕು

ಜಾಗತಿಕ ಪ್ರಜಾಪ್ರಭುತ್ವದ ಒಬ್ಬ ಯೋಧ ಎಂದು ಪೋಸ್ ನೀಡುವ ಬದಲು ಅಮೆರಿಕದಲ್ಲಿ ಪ್ರಜಾಪ್ರಭುತ್ವಕ್ಕೆ ಏನಾಗುತ್ತಿದೆ ಎನ್ನುವುದರ ಮೇಲೆ ಬೈಡೆನ್ ಗಮನ ಕೇಂದ್ರೀಕರಿಸಿದರೆ ಒಳ್ಳೆಯದಿತ್ತು. ‘ಮತದಾನದ ಪವಿತ್ರ ಹಕ್ಕಿನ’ ಬಗ್ಗೆ ಮತ್ತು ಮುಕ್ತವಾಗಿ ಮತದಾನ ಮಾಡುವುದು ‘ಪ್ರಜಾಪ್ರಭುತ್ವಕ್ಕೆ ಸ್ವಾತಂತ್ರö್ಯದ ಹೊಸ್ತಿಲು” ಎಂದೆಲ್ಲಾ ಬೈಡೆನ್ ಸಮಾರೋಪ ಕಾರ್ಯಕ್ರಮದಲ್ಲಿ ಬಣ್ಣ ಬಣ್ಣದ ಮಾತನಾಡಿದ್ದಾರೆ. ಅಮೆರಿಕದಲ್ಲಿ ಈ ಮುಕ್ತ ಮತದಾನದ ಹಕ್ಕನ್ನೇ ದಮನಿಸಲಾಗುತ್ತಿದೆ. ಈ ವರ್ಷವೊಂದರಲ್ಲೇ, ರಿಪಬ್ಲಿಕನ್ನರು ಬಹುಮತದಲ್ಲಿರುವ 19 ರಾಜ್ಯ ಶಾಸನಸಭೆಗಳಲ್ಲಿ ಮತದಾರರನ್ನು ನಿಯಂತ್ರಿಸುವ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಅವುಗಳು ಕರಿಯರು ಮತ್ತು ಇತರ ವಂಚಿತ ಜನರ ಮತದಾನದ ಹಕ್ಕುಗಳಿಗೆ ಅಡ್ಡಿಯಾಗಿವೆ.

ಪ್ರಜಾಪ್ರಭುತ್ವ, ಭ್ರಷ್ಟಾಚಾರ ವಿರೋಧಿ ಹೋರಾಟ ಮತ್ತು ಮಾನವ ಹಕ್ಕುಗಳ ರಕ್ಷಣೆ  ಈ ಮೂರು ರಂಗಗಳಲ್ಲಿ ಆಗುವ ಪ್ರಗತಿಯ ಪರಿಶೀಲನೆಗೆ ಒಂದು ವರ್ಷದ ನಂತರ ಭೌತಿಕ ಸಭೆಯನ್ನು ಆಯೋಜಿಸುವುದಾಗಿ ಬೈಡೆನ್ ಭರವಸೆ ನೀಡಿದ್ದಾರೆ.ಶೃಂಗ ಸಭೆಯಲ್ಲಿ ಭಾಗವಹಿಸಿದ ಮುಖಂಡರು ಏನು ಪ್ರಗತಿ ಸಾಧಿಸಲಾಗಿದೆ ಎಂದು ವರದಿ ಮಾಡುವುದಾಗಿ ಅವರು ನಿರೀಕ್ಷಿಸುತ್ತಾರಂತೆ. ಇಂತಹ ಕಾರ್ಯನಿರ್ವಹಣೆಯ ವರದಿ ಸಲ್ಲಿಸುವ ಬಗ್ಗೆ ಮೋದಿ ಸರ್ಕಾರಕ್ಕೆ ಯಾವುದೇ ಚಿಂತೆ ಇಲ್ಲ. ಯಾಕೆಂದರೆ ಅಮೆರಿಕದೊಂದಿಗಿನ ಅದರ ಭಾಗೀದಾರಿಕೆ ಇನ್ನೇನನ್ನೋ ಸಾಧಿಸುವ ಉದ್ದೇಶದ್ದು ಎನ್ನುವುದು ಅದಕ್ಕೆ ಚೆನ್ನಾಗಿ ಗೊತ್ತಿದೆ.

ಅನು: ವಿಶ್ವ

 

Donate Janashakthi Media

Leave a Reply

Your email address will not be published. Required fields are marked *