ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್; ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಕನ್ನಡಪರ ಸಂಘಟನೆಗಳ ಆಗ್ರಹ

ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್​ ಮತ್ತು ಶಿವಸೇನೆ ವಿರುದ್ಧ ಕನ್ನಡಿಗರು ಕಹಳೆ ಮೊಳಗಿಸಿದ್ದಾರೆ. ಡಿ.29ರೊಳಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಎಂಇಎಸ್​ ಅನ್ನು ನಿಷೇಧ ಮಾಡಬೇಕು ಎಂದು ಗಡುವು ವಿಧಿಸಿರುವ ಕನ್ನಡಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು, ಡಿ.31ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ.

ಬುಧವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಕನ್ನಡಪರ ಸಂಘಟನೆಗಳು, ಎಂಇಎಸ್​ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಡೆಡ್​ಲೈನ್​ ವಿಧಿಸಿವೆ. ಬೆಂಗಳೂರಿನ ಟೌನ್ ಹಾಲ್​ನಿಂದ ಕನ್ನಡಿಗರ ಶಕ್ತಿ ಪ್ರದರ್ಶನಗೊಳ್ಳಲಿದೆ. ಇಲ್ಲಿ ಯಾವುದೇ ನೈತಿಕ ಬೆಂಬಲ ಅನ್ನೋದು ಬೇಡ. ಎಲ್ಲರೂ ಒಟ್ಟಾಗಿ ಕರ್ನಾಟಕ ಬಂದ್‌ ಬೆಂಬಲಿಸಬೇಕು. ಇಡೀ ರಾಜ್ಯವೇ ಒಂದಾಗಬೇಕು. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದರು.

ಇದನ್ನೂ ಓದಿಎಂಇಎಸ್ ಪುಂಡಾಟಿಕೆ: ರಾಜ್ಯದ ಸಂಸದರನ್ನು ಹರಾಜು ಹಾಕಿ ಪ್ರತಿಭಟನೆ

ಅಧಿಕಾರ ಶಾಶ್ವತವಲ್ಲ, ಬಿಜೆಪಿ ನೇತೃತ್ವದ ಸರ್ಕಾರ ಈ ಸಂದರ್ಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಕರ್ನಾಟಕದಲ್ಲಿ ಸರ್ಕಾರ, ಪೊಲೀಸರು ಇದ್ದಾರೆಯೇ? 70 ವರ್ಷದಿಂದ ಎಂಇಎಸ್​ನವರಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಕನ್ನಡ ಉಳಿದಿದ್ರೆ ಕನ್ನಡ ಪರ ಹೋರಾಟಗಾರರಿಂದ ಮಾತ್ರ. ಉದ್ಧವ್ ಠಾಕ್ರೆ ಸರ್ಕಾರವನ್ನು ರಾಷ್ಟ್ರಪತಿ ವಜಾ ಮಾಡಬೇಕು. ಉದ್ಧವ್ ಠಾಕ್ರೆ ದಬ್ಬಾಳಿಕೆ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಬೆಳಗಾವಿಯ ರಾಜಕಾರಣಿಗಳೇ ಎಂಇಎಸ್ ಸಂಘಟನೆಗಳ ಕಾರ್ಯಕರ್ತರ ಏಜೆಂಟ್. ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟರೆ ಕನ್ನಡಿಗರಿಗೆ ಬೆಂಕಿ ಇಟ್ಟ ಹಾಗೆ ಎಂದು ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸಾ ರಾ ಗೋವಿಂದ್, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವ್ಯಾಪಕ ಬೆಂಬಲ : ಕನ್ನಡಪರ ಸಂಘಟನೆಗಳು ಬಂದ್‌ ಗೆ ಘೋಷಣೆ ಮಾಡುತ್ತಿದ್ದಂತೆ 35 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಟ್ಯಾಕ್ಸಿ ಮಾಲೀಕರು, ಹೋಟೆಲ್ ಮಾಲೀಕರು, ಶಿಕ್ಷಣ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ಕೈಗಾರಿಕಾ, ಬೀದಿಬದಿ ವ್ಯಾಪರಿಗಳು, ಸಾರಿಗೆ ನೌಕರರು, ಸಿನಿಮಾ, ಅಂಗಡಿ ಮಾಲೀಕರು, ಗಾರ್ಮೆಂಟ್ಸ್ ನೌಕರರು, ಸರ್ಕಾರಿ ನೌಕರರು, ಅಖಿಲ ಭಾರತ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಬೆಂಬಲಕ್ಕೆ ಸಾಥ್ ನೀಡುವ ಸಾಧ್ಯತೆ ಹೆಚ್ಚಿದೆ

Donate Janashakthi Media

Leave a Reply

Your email address will not be published. Required fields are marked *