ಸಮಾನ ವೇತನ ಮತ್ತು ಕೆಲಸ ಕಾಯಂಗೆ ಆಗ್ರಹಿಸಿ ಮುನ್ಸಿಪಲ್ ಕಾರ್ಮಿಕರ ಪ್ರತಿಭಟನೆ

ಬೆಳಗಾವಿ: ಕೆಲಸ ಕಾಯಂಗೊಳಿಸಬೇಕು ಮತ್ತು ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಸಿಐಟಿಯು ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಸಮೀಪ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ CITU ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಮಾತನಾಡಿ, ಮುನ್ಸಿಪಲ್ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಅವರಿಗೆ ತಿಂಗಳಿಗೆ ಕನಿಷ್ಠ ₹  24ಸಾವಿರ ಕನಿಷ್ಠ ಕೂಲಿ ನೀಡಬೇಕು. ಸಮಾನ ಕೆಲಸಕ್ಕೆ-ಸಮಾನ ವೇತನ ಕೊಡಬೇಕು. 6 ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ನೀಡಬೇಕು. ಸೇವಾ ಹಿರಿತನ‌ ಆಧರಿಸಿ ಕನಿಷ್ಠ ವೇತನ‌ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಕೆಲಸದಲ್ಲಿರುವಾಗ ಮೃತರಾದ ಕಾರ್ಮಿಕರ ಅವಲಂಬಿತರಿಗೆ ಕೆಲಸ ನೀಡಬೇಕು. ಕೆಲಸ ಕಾಯಂಗೊಳಿಸುವವರೆಗೆ ಎಲ್ಲ ಕಾರ್ಮಿಕರಿಗೂ ನೇರ ಪಾವತಿಯಡಿಯಲ್ಲಿ ಸಂಬಳ ಕೊಡಬೇಕು. ಎಲ್ಲ ಕಾರ್ಮಿಕರಿಗೆ ವಾರದಲ್ಲಿ ಸಂಬಳ‌ಸಹಿತ ರಜೆ, ಹಬ್ಬಗಳ ರಜೆ‌ ಒದಗಿಸಬೇಕು’ ಎಂದು ಮೀನಾಕ್ಷಿಸುಂದರಂ ಆಗ್ರಹಿಸಿದರು.

ಮುನ್ಸಿಪಲ್ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ‘ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲೂ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಹೀಗಾಗಿ, ನಮ್ಮನ್ನೂ ಕೊರೊನಾ ಯೋಧರು ಎಂದು ಪರಿಗಣಿಸಿ ₹  50 ಲಕ್ಷ ವಿಮಾ ಸೌಲಭ್ಯ ‌ಒದಗಿಸಬೇಕು. ಕೋವಿಡ್ ಲಾಕ್‌ಡೌನ್‌ ಹಾಗೂ ಸೀಲ್ ಡೌನ್ ನಡುವೆಯೂ‌ ಕೆಲಸ ಮಾಡಿದ್ದೇವೆ. ಆಗ 60ಕ್ಕೂ ಹೆಚ್ಚು ಮಂದಿ‌ ಸಾವಿಗೀಡಾಗಿದ್ದಾರೆ. ಆ ಕುಟುಂಬದವರಿಗೆ ನೆರವಾಗಬೇಕು’ ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಸೈಯದ್ ಮಜೀಬ್ ಮಾತನಾಡಿ, ‘ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರ ನಡೆಸುವವರು ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳುವುದಕ್ಕೆ ಆಗುತ್ತದೆ. ನಮಗೆ ಸೌಲಭ್ಯ ಕೊಡಿಸಲು ಆಗಿಲ್ಲ. ಶಾಸಕರು ನಮ್ಮ ಪರ ದನಿ ಎತ್ತುತ್ತಿಲ್ಲ. ನಮ್ಮದು ಅಗತ್ಯ ಸೇವೆಯಾದರೂ ಕೆಲಸ ಕಾಯಂಗೊಳಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ತ್ಯಾಜ್ಯ ವಿಲೇವಾರಿ ಮಾಡಲಿಲ್ಲವಾದರೆ ನಗರಗಳು ಹಾಗೂ ಪಟ್ಟಣಗಳು ಸ್ವಚ್ಛವಾಗಿರುವುದಿಲ್ಲ. ಆದರೂ‌ ಮನ್ನಣೆ ಸಿಗುತ್ತಿಲ್ಲ. ಯಾರೂ ಮಾಡಲು ಮುಂದೆ ಬಾರದಿರುವ ಕೆಲಸವನ್ನು ನಾವು ನಿರ್ವಹಿಸುತ್ತೇವೆ‌. ಕಾಯಂ ಸ್ವರೂಪದ ಈ ಕೆಲಸವನ್ನು ಗುತ್ತಿಗೆ ಆಧಾರದ ಮೇಲೆ ಮಾಡಿಸುವಂತಿಲ್ಲ ಎನ್ನುವ ಕಾನೂನನ್ನೂ ಸರ್ಕಾರ ಪಾಲಿಸುತ್ತಿಲ್ಲ’ ಎಂದು ಪ್ರತಿಭಟನೆಯಲ್ಲಿದ್ದ ಕಾರ್ಮಿಕರು ಆರೋಪಿಸಿದರು.

‘ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ವರ್ಷದ ಫೆ.23, 24ಕ್ಕೆ ಸಂಪೂರ್ಣ ಕೆಲಸ ನಿಲ್ಲಿಸಿ ಮುಷ್ಕರ ನಡೆಸಲಾಗುವುದು’ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಮುನ್ಸಿಪಲ್ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *