ಅಡ್ಡಂಡ ಕಾರ್ಯಪ್ಪ ವರ್ತನೆಗೆ ವ್ಯಾಪಕ ವಿರೋಧ

ಬೆಂಗಳೂರು : ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರವರ ಅತಿರೇಕದ ವರ್ತನೆಯ ವಿರುದ್ಧ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.

ಸಮುದಾಯ ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ “ರಾಜ್ಯ ಮಟ್ಟದ ಆನ್ ಲೈನ್ ಪ್ರತಿರೋಧ ಕಾರ್ಯಕ್ರಮ” ನಡೆಸಲಾಯಿತು.

ರಾಜ್ಯದ ಬಹುತೇಕ ಜಿಲ್ಲೆಗಳನ್ನು ಪ್ರತಿನಿಧಿಸಿದ ರಂಗಕರ್ಮಿಗಳು, ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಜನರು ಪಾಲ್ಗೊಂಡಿದ್ದರು. ರಂಗಾಯಣ ದಂಥಹ ಒಂದು ಸಾಂಸ್ಕೃತಿಕ ಸಂಸ್ಥೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಮಾಡಲು ಹೊರಟ ಅಡ್ಡಂಡ ಕಾರ್ಯಪ್ಪರವರು ಆ ಸ್ಥಾನ ತ್ಯಜಿಸುವುದೆ ಮೇಲು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಿರಿಯ ಸಾಹಿತಿ ಪ್ರೊ.ಎಸ್.ಜಿ‌.ಸಿದ್ದರಾಮಯ್ಯ ಮಾತನಾಡಿ ಅಡ್ಡಂಡ ಕಾರ್ಯಪ್ಪ ರವರನ್ನು ರಂಗಾಯಣದ ನಿರ್ದೇಶಕ ರನ್ನಾಗಿ ಮಾಡಿದಾಗ ಯಾರೂ ವಿರೋಧಿಸಿರಲಿಲ್ಲ. ಆದರೆ ಅವರು ರಂಗಾಯಣದ ನಿರ್ದೇಶಕರಾಗಿ‌ ಕಾರ್ಯ ನಿರ್ವಹಿಸುವ ಬದಲು ಸಂಘದ ನಿರ್ದೇಶನದಂತೆ ನಡೆದುಕೊಳ್ಳುತ್ತಿರುವುದು ಸಹಿಸಲಾರದ ಸಂಗತಿ ಎಂದರು.

ರಂಗಾಯಣದ ಮಾಜಿ‌ ನಿರ್ದೇಶಕ ರಾದ ಚಿದಂಬರ್‌ ರಾವ್‌ ಜಂಬೆ ಮಾತನಾಡಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆಗಳಲ್ಲೊಂದು “ಮೈಸೂರು ರಂಗಾಯಣ”. ಎಷ್ಟೋ ಜನ ಧೀಮಂತರ, ಕಲಾವಿದರ, ಅಭಿಮಾನಿಗಳ ಆಶೋತ್ತರಗಳಿಂದ ಬೆಳೆದುಬಂದ ಸಂಸ್ಥೆ. ಎಷ್ಟೋ ಜನರ, ಎಷ್ಟೋ ವರ್ಷಗಳ ಪರಿಶ್ರಮದಿಂದ ತಲೆಎತ್ತಿ ನಿಂತ ಸಂಸ್ಥೆ. ಇಷ್ಟೊಂದು ಘನತೆವುಳ್ಳ ಸಂಸ್ಥೆಯ ನಿರ್ದೇಶಕರಾಗುವವರು ಆ ಭಾರವನ್ನ ಧಾರಣೆಮಾಡುವ ಮತ್ತು ಸಂಸ್ಥೆಯ ಘನತೆಗೆ ತಕ್ಕಂತೆ ಅಂತ:ಸತ್ವ ಉಳ್ಳವರಾಗಿರಬೇಕು.
ಇತ್ತೀಚಿನ ಉಪದ್ವ್ಯಾಪಗಳನ್ನ ನೋಡುವಾಗ ಸಂಸ್ಥೆಯ ಘನತೆ ಮರ್ಯಾದೆಗಳನ್ನ ಹರಾಜಿಗಿಟ್ಟಹಾಗನಿಸುತ್ತಿದೆ.
ಒಂದು ವ್ಯಕ್ತಿಯ ರಾಗ ದ್ವೇಷಗಳು, ಸಂಸ್ಥೆಯ ರಾಗದ್ವೇಷಗಳಾಗಬಾರದು. ಅದು ಅಪಾಯ. ಒಬ್ಬ ವ್ಯಕ್ತಿಯ ನಿಲುವುಗಳೇ ಬೇರೆ, ಸಂಸ್ಥೆಯ ನಿಲುವುಗಳೇ ಬೇರೆ. ಅದೊಂದು ಖಾಸಗೀ ಸಂಸ್ಥೆಯಾದರೆ ಅವರು ಏನೂ ಅಂದುಕೊಳ್ಳಲಿ, ಸರ್ಕಾರದ ಸಾಂಸ್ಕೃತಿಕ ಮುಖವಾಣಿಯಾದ ರಂಗಾಯಣದ ನಿರ್ದೇಶಕರಾಗಿ ಮಾತಾಡುವಎಚ್ಚರವಿರಬೇಕು ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು. ನಾವೆಲ್ಲ ಕರ್ನಾಟಕದ ಸಾಂಸ್ಕೃತಿಕ ಜಗತ್ತಿಗೆ ಹೊಣೆಗಾರರಾಗಿರಬೇಕು. ಆ ದೃಷ್ಠಿಯಿಂದ ಮೈಸೂರು ರಂಗಾಯಣದ ನಿರ್ದೇಶಕರು ತಪ್ಪು ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಮಾಜಿ ನಿರ್ದೇಶಕ ಜನಾರ್ಧನ ಜನಾರ್ದನ (ಜನ್ನಿ) ಯವರು ಮಾತನಾಡಿ ರಂಗಾಯಣದಲ್ಲಿ ತನ್ನ ರಾಜಕೀಯ ವನ್ನು ಮಾಡುತ್ತಿರುವ ಅಡ್ಡಂಡ ಕಾರ್ಯಪ್ಪ ರಾಜಕೀಯ ಆಸಕ್ತಿ ಯಿಂದ‌ ಕೆಲಸ ಮಾಡುತ್ತಿದ್ದಾರೆ. ಸಂಘ ಪರಿವಾರದಿಂದಲೆ ಬಂದಿದ್ದೇನೆ ಏನೀಗ ಎಂಬ ಮಾತುಗಳನ್ನು ಇದುವರೆಗೆ ರಂಗಾಯಣದಲ್ಲಿ ಯಾರೂ ಮಾತಾಡಿರಲಿಲ್ಲ. ಅವರ ಆಯ್ಕೆಯೇ ಪ್ರಶ್ನಾರ್ಹವಾಗಿದೆ. ರಂಗ ಸಮಾಜವನ್ನೂ ಕಡೆಗಣಿಸಿ ಕೆಲಸ ಮಾಡುತ್ತಿರುವವರು ಆ ಸ್ಥಾನದಲ್ಲಿ ಮುಂದುವರೆಯಬಾರದು ಎಂದರು.

ಮಾಜಿ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮಾತನಾಡಿ, ಅಡ್ಡಂಡ ಕಾರ್ಯಪ್ಪ,ಅವರ ಪತ್ನಿ ನಮ್ಮ ಸ್ನೇಹಿತರಾಗಿದ್ದವರು. ಆದರೆ ಈ ಸಮಯದಲ್ಲಿ ನನ್ನ ವೈಯಕ್ತಿಕ ವಿಷಯಗಳನ್ನೆತ್ತಿಕೊಂಡು ಆಡಿದ ಮಾತುಗಳು ತೀರಾ ನೋವು ಕೊಟ್ಟಿತು. ಒಳ್ಳೆಯ ಬದುಕು ನಡೆಸುತ್ತಿರುವ ನನ್ನ ಕುಟುಂಬದ ವಿಷಯವನ್ನೆತ್ತಿ ಅದನ್ನು ನಾನು ನಿರ್ದೇಶಕಳಾಗಿದ್ದಾಗ ನಡೆಸಿದ ಬಹುರೂಪಿ ಉತ್ಸವದ ‘ ವಲಸೆ’ ವಿಷಯಕ್ಕೆ ಜೋಡಿಸಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು .

ಚಿಂತಕರಾದ ಪ.ಮಲ್ಲೇಶ್, ಎಸ್.ಆರ್.ರಮೇಶ್, ಎಲ್.ಜಗನ್ನಾಥ, ಕೆ.ಆರ್.ಸುಮತಿ, ಡಾ.ರತಿ ರಾವ್, ಡಾ‌.ಲಕ್ಷಿನಾರಾಯಣ್, ಮಲ್ಲಿಕಾರ್ಜುನ ಕಡಕೋಳ, ಆರ್.ಕೆ.ಹುಡ್ಗಿ, ಡಾ.ಪ್ರಭು ಖಾನಾಪುರೆ, ಕೆ.ಎಸ್ . ವಿಮಲಾ, ನೀಲಾ.ಕೆ,  ಲಕ್ಷ್ಮಣ ಕೊಪ್ಪಳ, ಲಕ್ಷ್ಮಿ ಚಂದ್ರಶೇಖರ್, ಶಶಿಕಾಂತ ಯಡಹಳ್ಳಿ, ಟಿ.ಸುರೇಂದ್ರ ರಾವ್, ಜೆ.ಸಿ.ಶಶಿಧರ್, ಹೇಮಲತಾ, ಸುಷ್ಮಾ, ವೆಂಕಟೇಶ್ ಪ್ರಸಾದ್‌ ,ಲವನಿಕಾ, ಫೈರೋಜ್, ಶ್ರೀಪಾದ ಭಟ್, ವಾಸುದೇವ ಉಚ್ಚಿಲ್,ಮನೋಜ್ ವಾಮಂಜೂರು‌, ಕೆ.ಪ್ರಭಾಕರನ್ ಶಿವಮೊಗ್ಗ, ಬಿ.ಐ.ಇಳಿಗೇರ್, ಜಗದೀಶ್ ನಾಯಕ್, ಫ್ಲೋರಾ ಅಚ್ಯುತ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *