ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪವನ್ನು ತಯಾರಿಸುವ ಗೋಡೌನ್ ನಗರದ ಹೊರವಲಯದಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ಪತ್ತೆಯಾಗಿದೆ. ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡೌನ್ ಮೇಲೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದೆ.
ಭಾರೀ ಪ್ರಮಾಣದಲ್ಲಿ ನಕಲಿ ತುಪ್ಪವನ್ನು ತಯಾರಿಸಿ ಮೈಸೂರು ನಗರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮೈಸೂರಿನ ಹೊಸಹುಂಡಿಯಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿತ್ತು. ಈ ಘಟಕದಲ್ಲಿ ಡಾಲ್ಡಾ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಿ ಗೋಡೋನ್ನಲ್ಲಿ ಶೇಖರಿಸಿಡಲಾಗುತ್ತಿತ್ತು. ಈ ಬಗ್ಗೆ ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಶಾಂತ ಎನ್ನುವವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೆ ಎಂ ಎಫ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಿನಿ ತುಪ್ಪದಂತೆ ಕಾಣಲು ಅದಕ್ಕೆ ಡಾಲ್ಡಾ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು. ನಕಲಿ ನಂದಿನಿ ತುಪ್ಪ ತಯಾರಿಸಿ ಲೋಡ್ ಮಾಡಿ ಮೈಸೂರು ನಗರದಾದ್ಯಂತ ವಿತರಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೊಸಹುಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಹೊಸಹುಂಡಿಯಲ್ಲಿ ಈ ದಂದೆ ನಡೆಯುತ್ತಿದ್ದು, ಇದೀಗ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪವನ್ನು ಮಾರಟಮಾಡುತ್ತಿದ್ದ ಜಾಲ ಪೊಲೀಸರ ಬಲೆಗೆ ಬಿದ್ದಿದೆ.
ರಾಜ್ಯದಲ್ಲಿ ನಕಲಿ ತುಪ್ಪ ಮಾರಾಟ ಮಾಡುವ ಜಾಲ ಹೆಚ್ಚಾಗಿದೆ. ಬ್ರಾಂಡ್ಗಳ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡಿ ಹಣ ಮಾಡುವ ದಂಧೆ ರಾಜ್ಯದ ಹಲೆವೆಡೆ ತೆಲೆ ಎತ್ತಿವೆ. ಇದೀಗ ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರುವುದು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಒಟ್ಟಿನಲ್ಲಿ ಈ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಂದಿನಿ ತುಪ್ಪವನ್ನು ಪ್ರೀತಿಸುವ ಮತ್ತು ಸೇವಿಸುವವರ ಕಣ್ಣಿಗೆ ನಿದ್ದೆ ಹತ್ತದಂತಾಗಿದೆ.