ಬೆಳಗಾವಿ ಕಾಂಗ್ರೆಸ್‌ ಗೆಲುವು – ಎರಡನೇ ಪ್ರಾಶಸ್ತ್ಯದಲ್ಲಿ ಲಖನ್‌ಗೆ ಗೆಲುವು ಬಿಜೆಪಿಗೆ ಮುಖಭಂಗ

ಬೆಳಗಾವಿ : ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಜಯಗಳಿಸಿದ್ದಾರೆ.

ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೋಳಿ ತಮ್ಮ ಮೊದಲ ಪ್ರಯತ್ನದಲ್ಲೇ ಅದ್ಭುತ ಜಯದೊಂದಿಗೆ ವಿಧಾನಪರಿಷತ್ ಪರಿಷತ್ ಮೆಟ್ಟಿಲು ಹತ್ತಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ರಾಜಕೀಯ ಗುದ್ದಾಟಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ಜಿಲ್ಲೆಯ ಫಲಿತಾಂಶ ಎಲ್ಲಾ ಕ್ಷೇತ್ರಗಳಿಗಿಂತ ಅತಿ ಹೆಚ್ಚು ಮಹತ್ವ ಪಡೆದಿತ್ತು.

ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂಬ ಉದ್ದೇಶದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಹೊರತಾಗಿಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿಯನ್ನು ಎರಡನೇ ಪ್ರಾಶಸ್ತ್ಯ ಮತಕ್ಕಾಗಿ ಕಣಕ್ಕಿಳಿಸಿದ್ದರು. ನಾವು ಲಖನ್‌ಗೆ ಬಿಜೆಪಿ ಟಿಕೆಟ್ ಕೇಳಿಲ್ಲ. ನಮ್ಮ ಮೊದಲ ಆದ್ಯತೆ ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಎರಡನೇಯದು ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಏನೇನು ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಚುನಾವಣಾ ಪೂರ್ವದಲ್ಲಿ ಹೇಳಿದ್ದರು.

ಆದರೆ ಈಗ ಸಹೋದರ ಲಖನ್ ಜಾರಕಿಹೊಳಿ ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕ ಗೆದ್ದಿದ್ದು, ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮೂರನೇ ಸ್ಥಾನಕ್ಕೆ ಕುಸಿತ ಕಂಡು ಮುಖಭಂಗ ಅನುಭವಿಸಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿಯೂ ಹಿನ್ನಡೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *