ಕರ್ನಾಟಕದಲ್ಲಿ ರಾಜ್ಯ ಮಟ್ಟದ ನೂತನ ಡಿಜಿಟಲ್ ಮೀಡಿಯಾ ಫೋರಂ ಸ್ಥಾಪನೆ

ಬೆಂಗಳೂರು: ಮಾಧ್ಯಮ‌ ಲೋಕದಲ್ಲಿ‌ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅದರಲ್ಲೂ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಿತ್ರರು ಸೇರಿಕೊಂಡು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅನ್ನು ಸ್ಥಾಪನೆ ಮಾಡಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ ಫೋರಂ ಉದ್ಘಾಟನೆಗೊಂಡಿದೆ.

ಈ ಮೀಡಿಯಾ ಫೊರಂ ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಬೆಲಗೂರು ಒಮ್ಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಸುನೀಲ್ ಮತ್ತು ವಸಂತ ಬಿ ಈಶ್ವರಗೆರೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಮತ್ತು ಜಂಟಿ ಕಾರ್ಯದರ್ಶಿಗಳಾಗಿ ರಜನಿ ಹಾಗೂ ಮಲತೇಶ್ ಅರಸ್ ಹರ್ತಿಕೋಟೆ ಮತ್ತು ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ರಾಘವೇಂದ್ರ, ಗೌರೀಶ್ ಅಕ್ಕಿ, ವಿಜಯ್ ಭರಮಸಾಗರ, ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಅಮರ್ ಪ್ರಸಾದ್, ಅಂಕಿತಾ, ಹರೀಶ್ ಅರಸು ಇವರುಗಳು ಆಯ್ಕೆಯಾಗಿದ್ದಾರೆ.

ಪತ್ರಿಕೋದ್ಯಮ ಹಾಗು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎರಡು ದಶಕಗಳ ಅನುಭವ ಇರುವಂತಹ ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಸ್ಟೇಟ್ ಡಿಜಿಟಲ್ ಮಿಡಿಯಾ ಫೋರಮ್ ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಡಿಜಿಟಲ್ ಮಾಧ್ಯಮ ಮಿತ್ರರನ್ನೂ ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಸಮೀವುಲ್ಲಾ ಮಾತನಾಡಿ ಡಿಜಿಟಲ್ ಮೀಡಿಯಾ ಎಂಬುದು ಪ್ರತಿಯೊಬ್ಬರಿಗೂ ನವಯುಗಕ್ಕೆ ಅವಶ್ಯಕವಾಗಿದ್ದು, ಪ್ರಿಂಟ್ ಹಾಗೂ ಟಿವಿ ಮಾಧ್ಯಮಗಳಿಗಿಂತಲೂ ಪರಿಣಾಮಕಾರಿಯಾಗಿದೆ. ವೀಕ್ಷಕರು ಮತ್ತು ಓದುಗರನ್ನು ಹೆಚ್ಚು ತಲುಪಲು ತನ್ನದೇ ಆದ ಸಾಮರ್ಥ್ಯ ಹೊಂದಿದೆ.  ಹೀಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಿವೆ.

ಪಕ್ಕದ ರಾಜ್ಯಗಳಾದ ಆಂದ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ಒಕ್ಕೂಟ ಅಸ್ಥಿತ್ವದಲ್ಲಿವೆ. ಕರ್ನಾಟಕದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಸಂಘಟನೆ ಮಾಧ್ಯಮ ಲೋಕದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಮ್ ನೂತನವಾಗಿ ಅಸ್ಥಿತ್ವಕ್ಕೆ ಬಂದಿದ್ದು, ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.

ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ನೂರಾರು ಡಿಜಿಟಲ್ ಮಾದ್ಯಮ ಪತ್ರಕರ್ತರು , ತಂತ್ರಜ್ಞರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *