ನವದೆಹಲಿ: ದೆಹಲಿಯ ವಾಯುಗುಣಮಟ್ಟ ಕಲುಷಿತಗೊಳ್ಳುವುದಕ್ಕೂ, ಪಾಕಿಸ್ತಾನಕ್ಕೂ ಏನು ಸಂಬಂಧ? ಒಂದು ವೇಳೆ ಪಾಕಿಸ್ತಾನದಲ್ಲಿರುವ ಕೈಗಾರಿಕೆಗಳ ಮೇಲೆ ಕೋರ್ಟ್ ನಿಷೇಧ ಹೇರಬೇಕೆ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂಕೋರ್ಟ್ ಸಿಜೆಐ ಎನ್ ವಿ ರಮಣ ನೇತೃತ್ವದ ಪೀಠ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ ವಾಯುಗುಣಮಟ್ಟ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.
ಭಾರತದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ ಎಂದು ಆಪಾದಿಸುತ್ತಿರುವ ಉತ್ತರ ಪ್ರದೇಶ ಸರ್ಕಾರವು ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಉತ್ತರ ಪ್ರದೇಶದ ಕೈಗಾರಿಕೆಗಳು ಕಾರಣವಲ್ಲ. ಪಾಕಿಸ್ತಾನದಿಂದ ಬರುತ್ತಿರುವ ಕಲುಷಿತ ಗಾಳಿಯಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸುತ್ತಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ನೀವು, ಪಾಕಿಸ್ತಾನದ ಕೈಗಾರಿಕೆಗಳ ನಿಷೇಧವನ್ನು ಬಯಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದೆ.
ಉತ್ತರಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿ ಪಾಕಿಸ್ತಾನದಿಂದ ಬರುತ್ತಿರುವ ಮಾಲಿನ್ಯಕಾರಕ ಗಾಳಿಯು ದೆಹಲಿಯ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಉತ್ತರಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆಗಳು ನಿಯಂತ್ರಣ ಕ್ರಮ ತೆಗೆದುಕೊಂಡಿದ್ದು, ಉತ್ತರಪ್ರದೇಶದ ಕೈಗಾರಿಕೆಗಳಿಂದ ದೆಹಲಿಯ ವಾಯುಗುಣಮಟ್ಟದ ಮೇಲೆ ಪರಿಣಾಮ ಬೀರಿಲ್ಲ. ರಾಷ್ಟ್ರರಾಜಧಾನಿಯ ವಾಯು ಗುಣಮಟ್ಟ ಕಲುಷಿತಗೊಳ್ಳುವಲ್ಲಿ ರಾಜ್ಯದ ಯಾವುದೇ ಪಾತ್ರ ಇಲ್ಲ ಎಂದು ಅಫಿಡವಿತ್ ಸಲ್ಲಿಸಿದ್ದಾರೆ.
ಪರಿಸರ ಹೋರಾಟಗಾರ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್ ಬಂಕಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿ ವಲಯದ ರೈತರಿಗೆ ಹುಲ್ಲು ತೆಗೆಯುವ ಯಂತ್ರಗಳನ್ನು ಉಚಿತವಾಗಿ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ದುಬೆ ಅವರು ಸುಪ್ರೀಂಗೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಲಯವು ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮೇಲೆ ನಿರ್ಬಂಧ ವಿಧಿಸಿದ್ದರು ಕೂಡಾ, ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದೆ.