ನವದೆಹಲಿ : ಐಕ್ಯ ರೈತ ಚಳುವಳಿಯ ಎದುರು ಅವಮಾನಕಾರೀ ಸೋಲು ಅನುಭವಿಸಿರುವ ಬಿಜೆಪಿ ಕೇಂದ್ರ ಸರಕಾರ ತನ್ನ ಮುಖ ಮುಚ್ಚಿಕೊಳ್ಳಲು ಸತತವಾಗಿ ಸುಳ್ಳುಗಳನ್ನು ಹೇಳುತ್ತಿದೆ. ಯಾವುದೇ ಚರ್ಚೆಯಿಲ್ಲದೆ ಮೂರು ಕೃಷಿ ಕಾಯ್ದೆಗಳನ್ನು ನಾಲ್ಕೇ ನಿಮಿಷದಲ್ಲಿ ಪಾಸು ಮಾಡಿಸಿಕೊಂಡಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಖೇದ ವ್ಯಕ್ತಪಡಿಸಿದೆ.
ಈ ಹೋರಾಟದ ವೇಳೆಯಲ್ಲಿ ಪ್ರಾಣ ಕಳಕೊಂಡ ರೈತರ ದಾಖಲೆ ಸರಕಾರದ ಬಳಿ ಇಲ್ಲ, ಆದ್ದರಿಂದ ಅವರ ಕುಟುಂಬಗಳಿಗೆ ಪರಿಹಾರ ಕೊಡಲಾಗುವುದಿಲ್ಲ ಎಂದು ಕೃಷಿ ಮಂತ್ರಿ ನರೇಂದ್ರ ತೋಮರ್ ಹೇಳಿದ್ದಾರೆ. ಅಂದರೆ ಈ ಸರಕಾರದ ಅಮಾನವೀಯ ಮತ್ತು ದುರಹಂಕಾರದ ನಿಲುವು ಮುಂದುವರೆಯುತ್ತಿದೆ, 700ಕ್ಕೂ ಹೆಚ್ಚು ರೈತರ ಸಾವಿನ ಬಗ್ಗೆ ಅದಕ್ಕೆ ತುಸುವಾದರೂ ಪಶ್ಚಾತ್ತಾಪ ಇಲ್ಲ.
ಬಿಜೆಪಿ ಸರಕಾರ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಅದು ಮುಂದಿಟ್ಟಿರುವ ರೈತರ ಆರು ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸುವ ಬದಲು ಕೆಲವು ಸಂಘಟನೆಗಳೊಂದಿಗೆ ಅಧಿಕಾರಶಾಹಿಗಳ ಅನೌಪಚಾರಿಕ ಮಾತುಕತೆಗಳ ಮೂಲಕ ರೈತರ ಐಕ್ಯತೆಯನ್ನು ಒಡೆಯುವ ಹುನ್ನಾರ ನಡೆಸಿದೆ. ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಸರಕಾರ ಇದರಲ್ಲಿ ರಾಜಕೀಯ ಆಟ ಆಡುವುದನ್ನು ನಿಲ್ಲಿಸಬೇಕು, ಎಸ್‌ಕೆಎಂನೊಂದಿಗೆ ಈ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಬೇಕು ಎಂದು ಎಐಕೆಎಸ್ ಆಗ್ರಹಿಸಿದೆ. ಎಂಎಸ್‌ಪಿ ಖಾತ್ರಿ ಶಾಸನ ರಚಿಸಲು ಒಪ್ಪದೆ ಆ ಕುರಿತು ಇನ್ನೊಂದು ಸಮಿತಿಯನ್ನು ರಚಿಸುವುದರಿಂದ ಏನೂ ಪ್ರಯೋಜನವಿಲ್ಲ, ಅದನ್ನು ರೈತರು ಒಪ್ಪುವುದಿಲ್ಲ ಎಂದು ಎಐಕೆಎಸ್ ಹೇಳಿದೆ.
ಸಂಯುಕ್ತ ಕಿಸಾನ್ ಮೋರ್ಚಾವನ್ನು ಬಲಪಡಿಸಲು ಮತ್ತು ಕಾರ್ಮಿಕ ವರ್ಗದ ಸಕ್ರಿಯ ಬೆಂಬಲದೊಂದಿಗೆ ಅದಕ್ಕೆ ಬೆಂಬಲವನ್ನು ವಿಶಾಲಗೊಳಿಸಲು ಸರ್ವ ಪ್ರಯತ್ನ ನಡೆಸುವುದಾಗಿ ಹೇಳಿರುವ ಎಐಕೆಎಸ್ ನರೇಂದ್ರ ಮೋದಿ ಸರಕಾರ ತನ್ನ ರೈತ-ವಿರೋಧಿ, ಕಾರ್ಪೊರೇಟ್-ಪರ ನಿಲುವನ್ನೇ ಮುಂದುವರೆಸಿದರೆ ತೀಕ್ಷ್ಣಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.