ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಹಾಗೂ ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಆತಂಕದ ವಾತಾವರಣ ಸೃಷ್ಟಿಸುವ ಮತೀಯ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ, ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಸುವ್ಯವಸ್ಥೆ) ಹರಿರಾಮ್ ಶಂಕರ್ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಳೆದ 4-5 ತಿಂಗಳುಗಳಿಂದ ಜಿಲ್ಲೆಯಾದ್ಯಂತ ಅನೈತಿಕ ಪೊಲೀಸ್ ಗಿರಿ ಹೆಚ್ಚುತಿದ್ದು ಇದೀಗ ಕಾಲೇಜು ಕ್ಯಾಂಪಸ್ ಗಳಲ್ಲೂ ಕೂಡ ಅನೈತಿಕ ಪೊಲೀಸ್ ಗಿರಿ ನಡೆಸಿ ವಿದ್ಯಾರ್ಥಿ ಗಳಿಗೆ ತೊಂದರೆ ಕೊಡುತ್ತಿದ್ದಾರೆ. “ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ” ಎಂದು ನಾಡಗೀತೆ ಹಾಡಿ ಪ್ರಾರಂಭಿಸುವ ವಿದ್ಯಾಲಯದಲ್ಲಿಯೇ ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಿಭಜನೆ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು SFI ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್ ಆರೋಪಿಸಿದರು.
ಧರ್ಮಾಧಾರಿತ ಮೂಲಭೂತವಾದಿ ಸಂಘಟನೆಗಳು ವಿದ್ಯಾರ್ಥಿಗಳನ್ನು ತರಗತಿ ಮಟ್ಟದಲ್ಲಿ ವಿಭಜನೆ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮೇಲೆ ಕ್ಯಾಂಪಸ್ ಗಳಲ್ಲಿ ದಾಳಿಗಳು ಹೆಚ್ಚುತ್ತಿವೆ. ಇಂತಹ ದಾಳಿಗಳನ್ನು ಆಧರಿಸಿ ಅಲ್ಪಸಂಖ್ಯಾತ ಮತೀಯವಾದಿ ಸಂಘಟನೆಗಳು ಆ ಸಮುದಾಯದ ವಿದ್ಯಾರ್ಥಿಗಳನ್ನು ಧರ್ಮಾಧರಿತವಾಗಿ ಒಟ್ಟುಗೂಡಿಸಲು ಯತ್ನಿಸುತ್ತಿವೆ. ಈ ಎಲ್ಲಾ ಅಹಿತಕರ ಘಟನೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಸೌಹಾರ್ದತೆಗೆ ಅಡೆತಡೆ ಆಗಿದೆ ಎಂದು ಕಾರ್ಯದರ್ಶಿ ವಿಕಾಸ್ ಕುತ್ತಾರೆ ತಿಳಿಸಿದರು.
ಇತ್ತೀಚೆಗೆ ಪುತ್ತೂರಿನ ಕಾಲೇಜೊಂದರಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆಯಾದರೂ ಜಿಲ್ಲೆಯಲ್ಲಿ ಇನ್ನೆಷ್ಟೋ ವಿದ್ಯಾಲಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಮುನ್ನಲೆಗೆ ಬರುತ್ತಿಲ್ಲ. ಕಾಲೇಜು ಆಡಳಿತ ಮಂಡಳಿಯ ವೈಫಲ್ಯವೂ ಇದಕ್ಕೆ ಕಾರಣವಾಗಿದೆ. ಹಾಗಾಗಿ ಜಿಲ್ಲೆಯ ಹಿತಕ್ಕಾಗಿ ಹಾಗೂ ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ-ಕಾಲೇಜು ಕ್ಯಾಂಪಸುಗಳಲ್ಲಿ ಮತೀಯವಾದಿ ವಿದ್ಯಾರ್ಥಿ ಸಂಘಟನೆಗಳಿಗೆ ಕಡಿವಾಣ ಹಾಕಬೇಕೆಂದು ಹಾಗೂ ಮತೀಯ ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ( SFI ) ಆಗ್ರಹಿಸಿದೆ.
ನಿಯೋಗದಲ್ಲಿ ಜಿಲ್ಲಾಧ್ಯಕ್ಷರು ಮಾಧುರಿ ಬೋಳಾರ್, ಕಾರ್ಯದರ್ಶಿ ವಿಕಾಸ್ ಕುತ್ತಾರ್, ಜಿಲ್ಲಾ ಸಮಿತಿ ಸದಸ್ಯರಾದ ತಿಲಕ್ ರಾಜ್ ಕುತ್ತಾರ್, ಸಿನಾನ್ ಬೆಂಗ್ರೆ, ಜಿಲ್ಲಾ ಮುಖಂಡರುಗಳಾದ ವಿನೀತ್ ದೇವಾಡಿಗ, ಕೀರ್ತಿ ಕುತ್ತಾರ್, ಅನಾಸ್ ಬೆಂಗ್ರೆ, ಅನೀಶ್, ಭಾಷಿಮ್ ವಿಟ್ಲ , ಫಾಯಿಸ್ ಉಳ್ಳಾಲ್ ಬೈಲ್, ಫೈರುಜ್, ಜವಾರ್, ಮುನೀರ್, ಶಫಿಕ್, ಉಪಸ್ಥಿತರಿದ್ದರು.