ನವದೆಹಲಿ: ಸುಮಾರು 7ತಿಂಗಳ ಹಿಂದೆ, ದಿಲ್ಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಯುವ ಇಂಜಿನಿಯರ್ ಕೆ.ನಾಗರಾಜ್ ತನ್ನ ಕೆಲಸವನ್ನು ಬದಿಗಿಟ್ಟು ಕರ್ನಾಟಕದಿಂದ ದಿಲ್ಲಿಯತ್ತ ಪಾದಯಾತ್ರೆ ಆರಂಭಿಸಿದರು. 185 ದಿನ 5100ಕಿ.ಮಿ. ನಡೆದು ಅವರು ದಿಲ್ಲಿ ತಲುಪಿದ್ದು ನವಂಬರ್ 19ರಂದು- ಪ್ರಧಾನ ಮಂತ್ರಿಗಳು ರೈತರ ಹೋರಾಟಕ್ಕೆ ಶರಣಾಗಿ ಮೂರೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ತನ್ನ ಸರಕಾರದ ನಿರ್ಧಾರವನ್ನು ಪ್ರಕಟಿಸಿದ ದಿನವೇ.
ಇದನ್ನು ಓದಿ: ಎಂಎಸ್‌ಪಿ ಖಾತರಿಗೆ ಆಗ್ರಹ: ದೆಹಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ ರೈತರು
ಪಾದಯಾತ್ರೆ ನಡೆಸುತ್ತ ದಾರಿಯಲ್ಲಿ ಅವರು ಅಸಂಖ್ಯ ಸಭೆಗಳಲ್ಲಿ ಭಾಗವಹಿಸಿದರು. ಹಲವು ರೈತ ಮತ್ತು ಕಾರ್ಮಿಕ ಸಂಘಟನೆಗಳು ಇದರಲ್ಲಿ ಅವರಿಗೆ ಬೆಂಬಲ ನೀಡಿ ನೆರವಾದವು. ನಡುವೆ ಅವರ ತಾಯಿ ತೀರಿಕೊಂಡರು. ಅವರ ಅಂತಿಮ ಸಂಸ್ಕಾರಕ್ಕೆ ಮನೆಗೆ ಹೋದ ನಾಗರಾಜ್, ಮತ್ತೆ ತಾನು ಊರಿಗೆ ಮರಳಿದ ಜಾಗದಿಂದಲೇ ದಿಲ್ಲಿಯತ್ತ ಪಾದಯಾತ್ರೆ ಮುಂದುವರೆಸಿದರು.
ಅವರು ದಿಲ್ಲಿ ತಲುಪಿದಾಗ ನವಂಬರ್ 21ರಂದು ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಡಾ. ಅಶೋಕ ಧವಳೆ, ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಹರ‍್ಯಾಣ ರಾಜ್ಯ ಕಾರ್ಯದರ್ಶಿ ಸುಮಿತ್ ಮತ್ತು ಉಪಾಧ್ಯಕ್ಷ ಇಂದರ್ಜಿತ್ ಸಿಂಗ್ ಸಿಂಘು ಗಡಿಯಲ್ಲಿ ಭೇಟಿಯಾಗಿ ಅವರನ್ನು ಅಭಿನಂದಿಸಿದರು ಮತ್ತು ಅವರ ಊಟ-ವಸತಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟರು.