ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ದೂರಿನ ವಿಚಾರಣೆಗೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಹಂಸಲೇಖ ಅವರೊಂದಿಗೆ ಅವರ ಪರ ವಕೀಲ ಸಿ.ಎಸ್.ದ್ವಾರಕಾನಾಥ್ ಠಾಣೆಗೆ ಆಗಮಿಸಿದ್ದರು.
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ “ಅಸ್ಪೃಶ್ಯತೆ ದೇಶಕ್ಕಂಟಿದ ಶಾಪ. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಮಾಡಿಕೊಟ್ಟರೆ ತಿನ್ನುತ್ತಿದ್ದರೇನು? ಎಂದು ಪ್ರಶ್ನೆ ಮಾಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು.
ಇದನ್ನು ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ ಎದುರಾಗಿದೆ: ಪ್ರೊ. ಎಸ್.ಜಿ.ಸಿದ್ದರಾಮಯ್ಯ
ಹಂಸಲೇಖ ಅವರ ಮೇಲೆ ಪ್ರಕರಣ ದಾಖಲಾದ್ದ ಸಂದರ್ಭದಲ್ಲಿ ”ಹಂಸಲೇಖ ಪೊಲೀಸ್ ಠಾಣೆಗೆ ಹಾಜರಾದರೆ ಅವರೊಟ್ಟಿಗೆ ನಾನು ಸಹ ಠಾಣೆಗೆ ಬರುತ್ತೇನೆ” ಎಂದು ನಟ ಚೇತನ್ ಅಹಿಂಸಾ ಹೇಳಿಕೆ ನೀಡಿದ್ದರು. ಅದರಂತೆ ಅವರೂ ಸಹ ಹಂಸಲೇಖ ಅವರೊಟ್ಟಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಪೊಲೀಸರು ಅವರನ್ನು ಠಾಣೆಯ ಹೊರಭಾಗದಲ್ಲಿಯೇ ತಡೆದರು.
ದೂರು ದಾಖಲಾಗುತ್ತಿದ್ದಂತೆಯೇ ಹಂಸಲೇಖ ಅವರು ವಿಚಾರಣೆಗೆ ಹಾಜರಾಗುವಂತೆ ಬಸವನಗುಡಿ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಹಂಸಲೇಖ ಬೆಂಗಳೂರಿನಲ್ಲಿ ಇರದಿದ್ದ ಕಾರಣ ವಿಚಾರಣೆಗೆ ಬಂದಿರಲಿಲ್ಲ. ಇದರಿಂದ ಪೊಲೀಸರು ಅವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ಆ ನೋಟಿಸ್ನಂತೆ ಇಂದು ಅವರು ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ವಿಚಾರಣೆಯ ವೇಳೆ ತನಿಖಾಧಿಕಾರಿಗಳು ಹಂಸಲೇಖ ಅವರಿಗೆ 29 ಪ್ರಶ್ನೆಗಳನ್ನು ಕೇಳಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ಹಂಸಲೇಖ ಸಾವಧಾನವಾಗಿ ಉತ್ತರಿಸಿದರು. ಈ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಿರುವ ತನಿಖಾಧಿಕಾರಿಗಳು, ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ದಲಿತರ ಮನೆಗೆ ಹೋಗುವುದು ದೊಡ್ಡದಲ್ಲ-ಚಿಕನ್ ಕೊಟ್ಟರೆ ತಿನ್ನುತ್ತಾರೆಯೇ: ಹಂಸಲೇಖ ಪ್ರಶ್ನೆ
ಹಂಸಲೇಖ ಹೇಳಿಕೆ ಸಂಬಂಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿದರು. ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದರು. ನ್ಯಾಯಾಲಯಕ್ಕೆ ನಾವು ಉತ್ತರದಾಯಿಗಳು. ಪ್ರಶ್ನೆಗಳಿಗೆ ಉತ್ತರ ಪಡೆದಿದ್ದೇವೆ. ಕಾನೂನು ಪ್ರಕಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುತ್ತೇವೆ ಎಂದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಹೇಳಿದರು.
ಚೇತನ್ ಅಹಿಂಸಾ ಮಾತನಾಡಿ “ದೇಶದಲ್ಲಿ ಪ್ರತಿಯೊಬ್ಬರಿಗೂ ವಾಕ್ಸ್ವಾತಂತ್ರ್ಯವಿದೆ. ಹಂಸಲೇಖ ಅವರು ತಾವು ಏನು ಹೇಳಿಕೆ ನೀಡಿದ್ದಾರೋ ಅದಕ್ಕೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ಆದರೆ, ಬ್ರಾಹ್ಮಣ್ಯವನ್ನು ಪ್ರತಿಪಾದಿಸುವ ಕೆಲ ಸಂಘಟನೆಗಳು ಅನಗತ್ಯವಾಗಿ ತೊಂದರೆ ನೀಡುತ್ತಿವೆ. ಇದನ್ನು ವಿರೋಧಿಸಿ ನಾವು ಹಂಸಲೇಖ ಅವರಿಗೆ ನೈತಿಕ ಬೆಂಬಲ ನೀಡಬೇಕು” ಎಂದು ಹೇಳಿದರು.
ಹಂಸಲೇಖ ಪರವಾಗಿ ಚೇತನ್ ಅವರು ಸೇರಿದಂತೆ ಕೆಲವು ಕನ್ನಡಪರ ಸಂಘಟನೆಗಳು ಮತ್ತು ವಿರುದ್ಧವಾಗಿ ಭಜರಂಗದಳ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರಿಂದ ಠಾಣೆ ಎದುರು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಠಾಣೆ ಮುಂದೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಇದನ್ನು ಓದಿ: ಹಂಸಲೇಖ ಹೇಳಿದ್ದು ಸರಿ… : ಸತ್ಯ ಹೇಳಿದವರು ಕ್ಷಮೆ ಕೇಳುವ, ಹಸಿ ಸುಳ್ಳು ಹೇಳಿದವರು ಪದ್ಮಪ್ರಶಸ್ತಿ ಪಡೆಯುವ ದುಸ್ಥಿತಿ ಸರಿಯಲ್ಲ
ಠಾಣೆಯ ಎದುರು ಭಜರಂಗದಳ ಹಾಗೂ ಹಂಸಲೇಖ ಪರ ಬಂದವರ ನಡುವೆ ವಾಗ್ವಾದ ಉಂಟಾಗಿ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು. ನಟ ಚೇತನ್ ಅಹಿಂಸಾ ಕೂಡ ಠಾಣೆಗೆ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವರು ʻಚೇತನ್ ಬಂದರೆ ನಾವು ಠಾಣೆ ಬಳಿ ಬಿಡುವುದಿಲ್ಲʼ ಎಂದು ಭಜರಂಗ ದಳ ಸಂಘಟನೆಗಳು ಆಕ್ರೋಶಗೊಂಡರು. ಇದೇ ವೇಳೆ ಎರಡು ಗುಂಪುಗಳು ರಸ್ತೆಯಲ್ಲಿ ಪರಸ್ಪರ ಪ್ರತಿಭಟನಾ ಧರಣಿ ನಡೆಸಿವೆ.
ಹಂಸಲೇಖ ಅವರೊಂದಿಗೆ ವಕೀಲರೂ ಸಹ ಜೊತೆಗಿದ್ದರು. ಕಾರಿನಲ್ಲಿ ನೇರವಾಗಿ ಠಾಣೆಯ ಮುಂದೆ ಬಂದಿಳಿದ ಹಂಸಲೇಖ ಅವರನ್ನು ಪೊಲೀಸರು ಒಳಗೆ ಕರೆದೊಯ್ದು ಅವರ ಮೈಸೂರಿನ ಭಾಷಣ ಕುರಿತು ಹೇಳಿಕೆಯನ್ನು ಪಡೆದರು.
ಭಜರಂಗದಳದ ತೇಜಸ್ ಮಾತನಾಡಿ ”ಹಂಸಲೇಖ ಅವರ ಕ್ಷಮೆಯಿಂದ ತೃಪ್ತಿಯಾಗಿಲ್ಲ. ಹಂಸಲೇಖ ಬೇಷರತ್ತು ಕ್ಷಮೆಯಾಚಿಸಬೇಕು. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ಪ್ರಜೆ ಅಲ್ಲ. ಚೇತನ್ ಸಸ್ಯಾಹಾರಿ ಹಾಗೂ ಮಾಂಸಹಾರಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಚೇತನ್ ಅವರನ್ನು ಬಿಡಬಾರದು. ಚೇತನ್ ಠಾಣೆಗೆ ಆಗಮಿಸಿದರೆ ಅವರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸತ್ತೇವೆ” ಎಂದಿದ್ದಾರೆ.