ಮಂಗಳೂರು : ಕೇಂದ್ರದಲ್ಲಿ ಹೆಸರಿಗೆ ಮಾತ್ರ ಬಿಜೆಪಿ ನೇತೃತ್ವದ ಸರಕಾರವಿದೆ. ಆದರೆ ಆಡಳಿತ ನಡೆಸುವುದು ಸಂಘ ಪರಿವಾರವಾಗಿದೆ. ಈ ಸಂಘ ಪರಿವಾರ ಮತ್ತು ಬಿಜೆಪಿ ಭಕ್ತಿಯ ಹೆಸರಲ್ಲಿ ಜನರಿಗೆ ಮೋಸಮಾಡುತ್ತಿದೆ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವುದು ಮೋದಿ ಮತ್ತು ಸಂಘಪರಿವಾರದ ಉದ್ದೇಶವಾಗಿದೆ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ, ಶಾಸಕಿ ಕೆ.ಕೆ ಶೈಲಜಾ ಟೀಚರ್ ಆರೋಪಿಸಿದ್ದಾರೆ.
ಗುರುಪುರ ಕೈಕಂಬದ ಖಾಸಗಿ ಸಭಾಗೃಹದ ಮೈದಾನದಲ್ಲಿ ನಡೆದ ಸಿಪಿಎಂ ಪಕ್ಷದ ದ.ಕ. ಜಿಲ್ಲಾ 23ನೆ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ಪಕ್ಷದ ನೀತಿಗಳು ಕಾರ್ಪೊರೇಟ್ ಪರವಾದ ನೀತಿಗಳಾಗಿವೆ. ದೇಶದಲ್ಲಿ ಧರ್ಮಗಳ ಮಧ್ಯೆ ವೈಷಮ್ಯ ತಂದು ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಕೇವಲ ಹಿಂದೂಗಳು ಮಾತ್ರ ಇದ್ದರೆ ಸಾಕು ಎಂದು ಮೋದಿ, ಅಮಿತ್ ಶಾ, ಸಂಘಪರಿವಾರದ ಮುಖಂಡರು ಹೇಳುತ್ತಾರೆ. ಹಿಂದೂ ಹೆಸರಲ್ಲಿ ಮೇಲ್ಜಾತಿಯವರು ಅಭಿವೃದ್ಧಿ ಹೊಂದಿದರೆ, ಇತರರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಿಂದೆ ಗುಜರಾತ್‌ನಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಭಾವ ಇರಲಿಲ್ಲ, ಕರಸೇವೆಯ ಹೆಸರಲ್ಲಿ ಜನಾಂಗೀಯ ಹತ್ಯೆ ಮಾಡಲಾಗಿದೆ. ಬಿಜೆಪಿಯ ಒಡೆದಾಳುವ ಈ ನೀತಿಯ ವಿರುದ್ಧ ಹೋರಾಟ ತೀವ್ರಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗುವ ಅಪಾಯವಿದೆ ಎಂದು ಶೈಲಜಾ ಟೀಚರ್ ಎಚ್ಚರಿಸಿದರು.
ಬಿಜೆಪಿಯು ಕೇರಳದಲ್ಲೂ ತಳವೂರಲು ಯತ್ನಿಸುತ್ತಿದೆ. ಆದರೆ ಸಿಪಿಎಂ ಹಾಗೂ ಕೇರಳದ ಜನ ಅದಕ್ಕೆ ಎಂದೂ ಅವಕಾಶ ಕೊಡುವುದಿಲ್ಲ ಎಂದರು. ಕಳೆದ 5 ವರ್ಷದಲ್ಲಿ ಕೇರಳ ಸರಕಾರ ಜನಪಯೋಗಿ ಕೆಲಸ ಮಾಡಿದೆ. ಹೃದಯಂ, ಕಾರುಣ್ಯ ಸ್ಕೀಮ್ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಸಾಧನೆ ಸಾಕಷ್ಟಿದೆ. ಜನರ ಆಶೋತ್ತರಗಳಿಗೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದರು.
ಬಹಿರಂಗ ಸಭೆಯಲ್ಲಿ ಪಕ್ಷದ ಜಿಲ್ಲಾ ಮುಖಂಡ ವಸಂತ ಆಚಾರಿ, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಕೆ.ಎಸ್.ಶ್ರೀಯಾನ್, ಯುಬಿ ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಸಂತೋಷ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.