ಪಿ.ಆರ್.ವೆಂಕಟೇಶ್
ಇತಿಹಾಸದ ಪುಟಕ್ಕೆ
ಸೇರಲಿದೆ ಹೊಸ ಹಾಡು
ಸೊಕ್ಕಿದೆದೆ ಸೀಳಿದ
ನೇಗಿಲ ಕುಳದ ಕೂಗು.
ದೆಹಲಿಯ ಗಡಿಯಲ್ಲಿ
ಎಷ್ಟೊಂದು ಗುಲಾಬಿಗಳು
ಮುಗಿಲಿಗೆ ರಕ್ತ ರಂಗೋಲಿಯ ಚೆಲುವು
ಬೆವರೂದಿದ ಕಹಳೆಗೆ
ನೂರಾರು ಸಾವುಗಳ ಕಸುವು.
ಅಧಿಕಾರದ ಅಮಲುಂಡವನ ಸುತ್ತ ಹೋರಾಟದ ಹುತ್ತ
ಕುರ್ಚಿಯ ಕಾಲು ನಡುಗಿ
ದೇಶಭಕ್ತನ ವೇಷ ಕರಗಿ.
ಬೆತ್ತಲಾಗಿದೆ ಕೋಟೆ.
ಲಾಠಿಗಳು ಬೂಟುಗಳು
ಜಲಫಿರಂಗಿ ಆಟಗಳು
ಮುಳ್ಳಿನ ಕೂಟಗಳು
ಅನ್ನ ಕೆಣಕಿ ಮಣ್ಣು ತಿಂದು
ಬಸವಳಿದ ಬಾಳೆಯಂತೆ ಬಾಗಿವೆ. .
ದಾಖಲಿಸುತ್ತೇನೆ ಜಯವನ್ನು
ಎದೆಯ ರಕ್ತವ ಬಸಿದು
ಕೋಟೆ ಗೋಡೆಯ ಮೈಗೆ
ಅಕ್ಷರಗಳ ಮುದ್ರಿಸಿ
ನೆಡುತ್ತೇನೆ ನೆತ್ತರು ಮೆತ್ತಿದ ಬಾವುಟ
ಕೋಟೆಯ ನೆತ್ತಿಗೆ.
ನೆಪ್ಪಿಟ್ಟೊ ದೊರೆಯೆ
ನಾವು ಸರಕಲ್ಲ
ಸುರಸುರನೆ ಸುಡುವ ಬೆವರು
ಕತಕತ ಕುದಿವ ನೆತ್ತರು
ಬೇಕಾದಾಗ ಮುದ್ರಿಸುವ
ನೋಟಲ್ಲ ನಾವು
ಮುರಿಯಲಾದ ರೊಟ್ಟಿ ನಾವು
ನೆಲದ ಮಣ್ಣ ಘಮ ನಾವು
ಧರೆಯೊಡಲ ನಗೆ ನಾವು.