ನವದೆಹಲಿ: ದಿ ವೈರ್ ಸುದ್ದಿ ವೆಬ್ತಾಣದಲ್ಲಿ ಪತ್ರಕರ್ತೆಯಾಗಿರುವ ಇಸ್ಮತ್ ಇರಾ ಅವರಿಗೆ “ವೆಬ್ ತನಿಖಾ ವರದಿ” ವಿಭಾಗದಲ್ಲಿ ನೀಡಲಾಗುವ ಲಾಡ್ಲಿ ಪ್ರಶಸ್ತಿ ಲಭಿಸಿದೆ.
ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಸಂಬಂಧಿಸಿದ ಸಮಗ್ರ ವರದಿಗೆ ಸಂಬಂಧಿಸಿದ ಸೂಕ್ಷ್ಮತೆಗಳ ಕುರಿತಾಗಿ ಆಕೆ ಬರೆದಿರುವ “ಆಲಿಘರ್ ಹಾಸ್ಪಿಟಲ್ ಎಂಎಲ್ಸಿ ರಿಪೋರ್ಟ್ ಆನ್ ಹತ್ರಸ್ ವಿಕ್ಟಿಮ್ ಶ್ಯಾಟರ್ಸ್ ಯುಪಿ ಪೊಲೀಸ್ಸ್ ನೋ ರೇಪ್ ಕ್ಲೇಮ್” ಎಂಬ ವರದಿಗೆ ಈ ಪ್ರಶಸ್ತಿ ಸಿಕ್ಕಿದೆ.
ಇದನ್ನು ಓದಿ: ಉತ್ತರ ಪ್ರದೇಶ: ಅನಾಗರಿಕ ಪ್ರಪಾತಕ್ಕೆ ಇಳಿದಿದೆ
ಇಸ್ಮತ್ ಇರಾ ಅವರೊಂದಿಗೆ ವೆಬ್ ಬ್ಲಾಗ್ ವಿಭಾಗದಲ್ಲಿ ಸುಭಿಕ್ಷಾ ಮನೋಜ್ ಮತ್ತು ಭಾರತಿ ಕಣ್ಣನ್ ಅವರಿಗೂ ಪ್ರಶಸ್ತಿ ಲಭಿಸಿದೆ. ಕೋವಿಡ್ ಸಾಂಕ್ರಾಮಿಕದ ನಡುವೆ ಋತುಚಕ್ರ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಕುರಿತಾದ ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದ್ದು ಲೇಖನಗಳು ಲೈವ್ವೈರ್ ನಲ್ಲಿ ಪ್ರಕಟವಾಗಿದ್ದವು.
ಸುಭಿಕ್ಷಾ ಮನೋಜ್ ಅವರ ಲೇಖನ “ಕೋಪಿಂಗ್ ವಿದ್ ಪ್ಯಾಂಡಮಿಕ್ ಸ್ಟ್ರೆಸ್, ಮೆಂಟಲ್ ಹೆಲ್ತ್ ಎಂಡ್ ಮೆಂಟಲ್ ಡಿಸಾಡರ್ಸ್ ಇನ್ 2020” ಅನ್ನು ಬೂಂಧ್ ಸಹಯೋಗದೊಂದಿಗೆ ಬರೆಯಲಾಗಿತ್ತು.
ಮಾಧ್ಯಮ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿನ ಮಂದಿಗೆ ನೀಡುವ ಲಾಡ್ಲಿ ಪ್ರಶಸ್ತಿಗಳನ್ನು ಪಾಪ್ಯುಲೇಶನ್ ಫಸ್ಟ್ ಎಂಬ ಸಂಸ್ಥೆ 2007ರಿಂದ ನೀಡುತ್ತಿದ್ದು ಲಿಂಗಾಧರಿತ ಸಂವೇದಿತನವನ್ನು ತಮ್ಮ ಕರ್ತವ್ಯದ ಅವಿಭಾಜ್ಯ ಅಂಗವನ್ನಾಗಿಸುವ ಮಾಧ್ಯಮ ಮಂದಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ.
ಇದನ್ನು ಓದಿ: ಹತ್ರಾಸ್ ಪ್ರಕರಣದ ಸಿಬಿಐ ಮೇಲ್ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ನಿರ್ವಹಿಸಲಿ; ಸುಪ್ರೀಂ ಆದೇಶ
ಉತ್ತರ ಪ್ರದೇಶ ರಾಜ್ಯದ ಹತ್ರಾಸ್ನ ಬೂಲ್ಗರ್ಹಿ ಗ್ರಾಮದಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ‘ಮೇಲ್ವರ್ಗದ’ ಠಾಕೂರ್ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಬಗ್ಗೆ ಪತ್ರಕರ್ತೆ ಇಸ್ಮತ್ ಇರಾ ಅವರ ವರದಿಯನ್ನು ಪ್ರಕಟಿಸಿದರು. ಸಂತ್ರಸ್ತೆ ಅಂತಿಮವಾಗಿ ಬಲಿಯಾದಳು. ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ವರದಿಯು ಯಾವುದೇ ಅತ್ಯಾಚಾರ ನಡೆದಿಲ್ಲ ಎಂಬ ಉತ್ತರ ಪ್ರದೇಶ ಪೊಲೀಸರ ಹೇಳಿಕೆಯನ್ನು ಪ್ರಶ್ನಿಸುವ ತನಿಖಾ ವರದಿಯಾಗಿತ್ತು.
ಇಸ್ಮತ್ ಇರಾ ಅವರ ವರದಿ ಪ್ರಕಟವಾದ ತಿಂಗಳುಗಳ ನಂತರ, ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರ ಮೇಲೆ ಆರೋಪಗಳು ದಾಖಲಾದವು.
ಇಸ್ಮತ್ ಇರಾ ಅವರ ಕೆಲಸವು “ಸೂಕ್ಷ್ಮ ಪರೀಕ್ಷೆಯ” ಫಲಿತಾಂಶವಾಗಿದೆ ಮತ್ತು “ಅತ್ಯಂತ ಪರಿಣಾಮಕಾರಿಯಾಗಿರುವ ತನಿಖಾ ವರದಿ” ಎಂದು ಲಾಡ್ಲಿ ಪ್ರಶಸ್ತಿ ಉಲ್ಲೇಖವು ಗಮನಿಸುತ್ತದೆ.