ಸಾರ್ವಜನಿಕರ ಉತ್ತಮ ಸ್ಪಂದನೆಯಿಂದ ಮಕ್ಕಳ ಆನ್‌ಲೈನ್‌ ಶಿಕ್ಷಣದಲ್ಲಿ ಪ್ರಥಮ ಸ್ಥಾನ: ಪಿಣರಾಯಿ

ತಿರುವನಂತಪುರಂ: ಕೋವಿಡ್‌ ಸಾಂಕ್ರಾಮಿಕತೆಯಿಂದಾಗಿ ಎಲ್ಲಡೆ ಆವರಿಸಿದ ಅತೀವ ಬಿಕ್ಕಟ್ಟಿನ ಪರಿಣಾಮವಾಗಿ ಎಲ್ಲವೂ ಒಂದು ರೀತಿಯಲ್ಲಿ ಸ್ಥಗಿತತೆಗೆ ಒಳಗೊಂಡಿತು. ಮುಖ್ಯವಾಗಿ ಶಾಲೆಗಳನ್ನು ಸಂಪೂರ್ಣ ಮುಚ್ಚಿ-ಅಧ್ಯಯನ ಸ್ಥಗಿತಗೊಂಡಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಕೇರಳ ರಾಜ್ಯದ ಎಡರಂಗ ಸರ್ಕಾರ ಆನ್‌ಲೈನ್‌ ಶಿಕ್ಷಣ ನೀಡುವಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನು ಓದಿ: ದೇಶದಲ್ಲೇ ಅತ್ಯುತ್ತಮ ಆಡಳಿತವಿರುವ ರಾಜ್ಯಗಳಲ್ಲಿ ಕೇರಳಕ್ಕೆ ಪ್ರಥಮ ಸ್ಥಾನ: ಮುಖ್ಯಮಂತ್ರಿ ಪಿಣರಾಯಿ

ಕೇರಳದ ಈ ಸಾಧನೆಯ ಬಗ್ಗೆ ವಾರ್ಷಿಕ ಶಿಕ್ಷಣ ವರದಿ- 2021ರ ವರದಿಯು ಒತ್ತಿ ಹೇಳುತ್ತದೆ. ಸಮೀಕ್ಷೆಯ ಪ್ರಕಾರ, ಕೇರಳದ ಶೇಕಡಾ 91 ರಷ್ಟು ಗ್ರಾಮೀಣ ಮಕ್ಕಳು ಕೋವಿಡ್ ಅವಧಿಯಲ್ಲಿ ಆನ್‌ಲೈನ್ ಶಿಕ್ಷಣವನ್ನು ಪಡೆಯಲು ಸಮರ್ಥರಾದರು. ದೇಶದಲ್ಲಿ ಒಟ್ಟು ಶೇ 24.2ರಷ್ಟು ಮಕ್ಕಳು ಆನ್‌ಲೈನ್‌ ಶಿಕ್ಷಣವನ್ನು ಪಡೆದುಕೊಂಡಿದ್ದರೆ, ಕೇರಳ ರಾಜ್ಯದಲ್ಲಿ ಶೇಕಡಾ 91ರಷ್ಟು ಗ್ರಾಮೀಣ ಮಕ್ಕಳು ಶಿಕ್ಷಣ ವಂಚಿತತೆಯಿಂದ ತಪ್ಪಿಸಿಕೊಂಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಕೇರಳ ರಾಜ್ಯವು ತನ್ನ ಮಕ್ಕಳ ಶಿಕ್ಷಣವನ್ನು ಖಾತ್ರಿಪಡಿಸುವ ಸಂಕಲ್ಪದೊಂದಿಗೆ ಸವಾಲನ್ನು ಸ್ವೀಕರಿಸಿತು. ಇದಕ್ಕಾಗಿ ಪರಿಣಾಮಕಾರಿಯಾಗಿ ಕ್ಷೀಪ್ರಗತಿಯಲ್ಲಿ ತೊಡಗಿಸಿಕೊಂಡ ಕೇರಳದ ಎಡರಂಗ ಸರ್ಕಾರ ದಾಖಲೆಯ ಸಾಧನೆಯನ್ನು ಸಾಧಿಸಿದೆ.

ಆನ್‌ಲೈನ್‌ ಶಿಕ್ಷಣದ ಬಗ್ಗೆ ಕೇರಳಕ್ಕೆ ಪ್ರಥಮ ಸ್ಥಾನ ಲಭಿಸಿರುವ ಬಗ್ಗೆ ಹರ್ಷವ್ಯಕ್ತಪಡಿಸಿರುವ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಈ ಗುರಿಯನ್ನು ಸಾಧಿಸಲು ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರು ಅವಿರತವಾಗಿ ಶ್ರಮಿಸಿದ್ದಾರೆ. ಸರ್ಕಾರವು ಸಹ ಆನ್‌ಲೈನ್‌ ಶೈಕ್ಷಣಿಕ ಚಟುವಟಿಕೆಗಳಿಗೆ ಅಚಲವಾದ ನಾಯಕತ್ವವನ್ನು ನೀಡಲು ಮತ್ತು ನವೀನ ಯೋಜನೆಗಳ ಮೂಲಕ ಸವಾಲುಗಳನ್ನು ಜಯಿಸಲು ಸರ್ಕಾರಕ್ಕೆ ಸಾಧ್ಯವಾಯಿತು. ವಿದ್ಯಾಕಿರಣಂ ಯೋಜನೆಯು ಡಿಜಿಟಲ್ ವಿಭಜನೆಯ ಪ್ರಮುಖ ಸಮಸ್ಯೆಯನ್ನು ನಿವಾರಿಸಲು ಒಂದು ಜನಪ್ರಿಯ ಉಪಕ್ರಮವಾಗಿತ್ತು. ಸಾರ್ವಜನಿಕರು ಎಲ್ಲಾ ಹಂತಗಳಲ್ಲಿಯೂ ಸಂಪೂರ್ಣ ಬೆಂಬಲದೊಂದಿಗೆ ಸರ್ಕಾರದ ಪರವಾಗಿ ನಿಂತಿದ್ದಕ್ಕೆ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ದೇಶದ ಇತರ ರಾಜ್ಯಗಳಿಗಿಂತ ಕೇರಳ ಮೊದಲ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

ಇದನ್ನು ಓದಿ: ಕೇರಳ: ಕೋವಿಡ್‌ ಎರಡನೇ ಅಲೆ ಎದುರಿಸಲು ರೂ.20 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ

ಆದರೂ ಸಹ ಇನ್ನು ಸಾಕಷ್ಟು ಕೊರತೆಗಳನ್ನು ನೀಗಿಸಲು ಶ್ರಮಿಸಿಬೇಕಾಗಿರುವ ಅನಿವಾರ್ಯತೆಯಿದೆ ಎಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ʻಈ ನಿಟ್ಟಿನಲ್ಲಿ ನಾವು ಇನ್ನೂ ಮುನ್ನಡೆಯಬೇಕಾಗಿದೆ. ಡಿಜಿಟಲ್ ವಿಭಜನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಅಗತ್ಯವಿರುವ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಶೇ.100ರಷ್ಟು ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಸಾಧ್ಯವಾಗುವುದು ಆದಷ್ಟು ಬೇಗ ನಿಜವಾಗಲಿದೆ ಎಂದು ತಿಳಿಸಿದ್ದಾರೆ.

ಆನ್‌ಲೈನ್‌ ಶಿಕ್ಷಣದಲ್ಲಿ ಶೇಕಡಾ 100ರಷ್ಟು ಗುರಿಗಾಗಿ ನಾವು ಇಲ್ಲಿಯವರೆಗೆ ಮಾಡಿದ ಕೆಲಸವನ್ನು ಮುಂದುವರಿಸಲು ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *