ಮಡಿಕೇರಿ: ಕೆಲಸದ ಒತ್ತಡ ಕಡಿಮೆ ಮಾಡಿ ಗೌರವಧನವನ್ನು ಹೆಚ್ಚಳ ಮಾಡಬೇಕೆಂದು ನೂರಾರು ಆಶಾ ಕಾರ್ಯಕರ್ತೆಯರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಮಡಿಕೇರಿಯ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತೆಯರು ಕಛೇರಿ ಮುಂಭಾಗ ಧರಣಿ ನಡೆಸಿದರು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಆಶಾ ಕಾರ್ಯಕರ್ತೆಯರು ಒಂದು ಸಾವಿರ ಜನಸಂಖ್ಯೆ ಇರುವ ವಸತಿ ಪ್ರದೇಶಕ್ಕೆ ಎಂಬಂತೆ ಒಬ್ಬರಂತೆ ನಮ್ಮನ್ನು ಕೆಲಸ ತೆಗೆದುಕೊಂಡು ಈಗ ಕೋವಿಡ್ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಪೂರ್ಣಿ ಬಸಪ್ಪ ʻʻಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು, ಕೊರೊನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ʻಕೋವಿಡ್ ಪ್ರೋತ್ಸಾಹ ಧನʼವೆಂದು ಘೋಷಿಸಿ, ಎರಡು ಸಾವಿರ ನಿಗದಿಪಡಿಸಿರುವ ಸರ್ಕಾರ ಆ ಹಣವನ್ನು ಇಂದಿಗೂ ಕೊಟ್ಟಿಲ್ಲ. ಕೂಡಲೇ ತಮ್ಮ ಗೌರವಧನವನ್ನು 12 ಸಾವಿರಕ್ಕೆ ಏರಿಸಬೇಕು. ಆಶಾ ಕಾರ್ಯಕರ್ತೆಯರಿಂದ ಮಾಡಿಸುತ್ತಿರುವ ಎನ್ ಸಿಡಿ ಕೆಲಸವನ್ನು ಕೈಬಿಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ರಾಜ್ಯಮಟ್ಟದಲ್ಲಿ ತೀವ್ರಗೊಳ್ಳುವುದುʼʼ ಎಂದು ಎಚ್ಚರಿಸಿದರು.
ಆಶಾ ಕಾರ್ಯಕರ್ತೆಯರ ಪ್ರಮುಖ ಹಕ್ಕೊತ್ತಾಯಗಳು
ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹಧನ ಆಶಾಗಳಿಗೆ ದೊರೆಯಬೇಕು.
ಆಶಾ ಕಾರ್ಯಕರ್ತೆಯರಿಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡಲು ಅವಕಾಶವಿರಬೇಕು. ಬೇರೆ ಪ್ರದೇಶಗಳಿಗೆ ನಿಯೋಜಿಸಬಾರದು ಎನ್ನುವ ಆದೇಶ ಪಾಲಿಸಲು ಕ್ರಮವಹಿಸಬೇಕು.
ಇಲಾಖೆಯ ಆದೇಶಗಳಂತೆ ಎನ್ಸಿಡಿ ಸರ್ವೆ, ಕ್ವಾರಂಟೈನ್ ಅಪ್ ಮೂಲಕ ಕೆಲಸ, ಈ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಮಾಡಿಸುತ್ತಿರುವುದನ್ನು ಕೈಬಿಡಬೇಕು.
ಆಶಾ ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳು ನಿಗದಿತ ಸಂಖ್ಯೆಗಿಂತ ಹೆಚ್ಚಿನ ವ್ಯಾಪ್ತಿಗೆ ವಿಸ್ತರಣೆ ಮಾಡಬಾರದು.
ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘಟಿಸುವುದರ ಬಗ್ಗೆ ಆದೇಶವಿದ್ದು, ಅದರ ಬಗ್ಗೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು.
ಕೋವಿಡ್ ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ಒತ್ತಡದ ಕೆಲಸಗಳನ್ನು ಕೈಬಿಡಬೇಕು.
ಎಂಬ ಇನ್ನೂ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.