ಎಂಎಲ್‌ಸಿ ಚುನಾವಣೆ: ಹಾಸನದಿಂದ ಸೂರಜ್ ರೇವಣ್ಣ – ತುಮಕೂರಿನಿಂದ ಅನಿಲ್ ಕುಮಾರ್ ಜೆಡಿಎಸ್‌ ಅಭ್ಯರ್ಥಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಜಾತ್ಯತೀತ ಜನತಾದಳ ಪಕ್ಷವು ಎರಡು ಕ್ಷೇತ್ರಗಳ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ತೀವ್ರ ಕುತೂಹಲ ಕೆರಳಿಸಿದ ಹಾಸನ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಡಾ. ಸೂರಜ್ ರೇವಣ್ಣ ಹೆಸರು ಅಂತಿಮಗೊಂಡಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್. ಆರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರು ತುಮಕೂರಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದ ಡಾ. ಸೂರಜ್ ರೇವಣ್ಣ ಈಗ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ. ನಾಳೆ(ನವೆಂಬರ್‌ 19) ನಾಮಪತ್ರ ಸಲ್ಲಿಸಿರುವ ಡಾ.ಸೂರಜ್‌ ರೇವಣ್ಣ ಈಗಾಗಲೇ ಧರ್ಮಸ್ಥಳಕ್ಕೆ ತೆರಳಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಹಾಸನ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದ್ದವು. ಕೆಲವು ದಿನಗಳ ಹಿಂದಷ್ಟೇ ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ಅಥವಾ ರೇವಣ್ಣ ಪತ್ನಿ ಭವಾನಿ ರೇವಣ್ಣ ಇಬ್ಬರಲ್ಲಿ ಒಬ್ಬರು ಸ್ಪರ್ಧಿಸಿವುದು ಖಚಿತವಾಗಿತ್ತು.

ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡರು ಅಭ್ಯರ್ಥಿ ಆಯ್ಕೆ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಸಭೆ ನಡೆಸಿದ್ದರು. ಕೆಲವು ಶಾಸಕರು ಸಹ ಡಾ. ಸೂರಜ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಅಂತಿಮವಾಗಿ ಜೆಡಿಎಸ್‌ ಪಕ್ಷದಿಂದ ಸೂರಜ್ ರೇವಣ್ಣ ಕಣಕ್ಕಿಳಿಯಲಿದ್ದಾರೆ.

ಕೆಎಎಸ್‌ ಅಧಿಕಾರಿ ರಾಜೀನಾಮೆ

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್. ಆರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜಕೀಯ ಪ್ರವೇಶಿಸಲಿದ್ದು, ತುಮಕೂರಿನಿಂದ ವಿಧಾನ ಪರಿಷತ್‌ ಚುನಾವಣೆ ಸ್ಪರ್ಧಿಸಲಿದ್ದಾರೆ.

ಅನಿಲ್ ಕುಮಾರ್ ಕೆಐಎಡಿಬಿ ವಿಶೇಷ ಭೂ ಸ್ವಾದೀನ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರಿಂದ ಸರ್ಕಾರ ಷರತ್ತುಬದ್ಧವಾಗಿ ರಾಜಿನಾಮೆ ಅಂಗೀಕಾರ ಮಾಡಲಾಗಿದೆ.  ಅವರ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳು ಬಾಕಿಯಿದ್ದು, ವಯಕ್ತಿಕ ಕಾರಣಗಳ ಆಧಾರದ ಮೇಲೆ ರಾಜಿನಾಮೆ ಅಂಗೀಕರಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಿದೆ.

2008 ರ ಕೆಎಎಸ್ ಅಧಿಕಾರಿಯಾಗಿರುವ ಅನಿಲ್ ಕುಮಾರ್ ಮೆಕ್ಯಾನಿಕಲ್ ಎಂಜಿನೀಯರಿಂಗ್ ಪದವೀಧರರಾದ ಅನಿಲ್‌ ಕುಮಾರ್‌ ಶನಿವಾರ ಔಪಚಾರಿಕವಾಗಿ ನಾಮಪತ್ರ ಸಲ್ಲಿಸಲಿದ್ದು, ಮಂಗಳವಾರ ಮತ್ತೆ ಹೆಚ್‌.ಡಿ.ಕುಮಾರಸ್ವಾಮಿ ಅವರ ಜೊತೆಗೂಡಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ.

Donate Janashakthi Media

Leave a Reply

Your email address will not be published. Required fields are marked *