ತ್ರಿಪುರಾದ ಇಬ್ಬರು ಪತ್ರಕರ್ತೆಯರ ಬಂಧನಕ್ಕೆ ಸಂಪಾದಕರ ಒಕ್ಕೂಟ ಖಂಡನೆ

ನವದೆಹಲಿ: ‘ರಾಜ್ಯ ಸರ್ಕಾರದ ವರ್ಚಸ್ಸಿಗೆ ಹಾನಿ ತರುವಂತಹ ವರದಿ ಪ್ರಕಟಿಸಿದ್ದಾರೆಂಬ ದೂರಿನ ಮೇಲೆ ತ್ರಿಪುರಾದ ಇಬ್ಬರು ಪತ್ರಕರ್ತೆಯರ ಮೇಲೆ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿರುವ ಅಸ್ಸಾಂ ಪೊಲೀಸರ ಕ್ರಮವನ್ನು ಭಾರತೀಯ ಸಂಪಾದಕರ ಒಕ್ಕೂಟ (ಎಡಿಟರ್ಸ್‌ ಗಿಲ್ಡ್‌ ಆಫ್ ಇಂಡಿಯಾ), ಇಂಡಿಯನ್ ವುಮೆನ್ಸ್‌ ಪ್ರೆಸ್‌ ಕಾರ್ಪ್ಸ್‌(ಐಡಬ್ಲ್ಯುಪಿಸಿ) ಮತ್ತು ಪತ್ರಕರ್ತರ ಅಧ್ಯಯನ ಕೇಂದ್ರ ಖಂಡಿಸಿದೆ.

ಈ ಬಗ್ಗೆ ನೆನ್ನೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಒಕ್ಕೂಟ ‘ಪೊಲೀಸರ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಖಂಡಿಸುತ್ತದೆ. ಬಂಧಿಸಿರುವ ಪತ್ರಕರ್ತೆಯರನ್ನು ತಕ್ಷಣವೇ ಬಿಡುಗಡೆ ಮಾಡಿ, ಅವರ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಐಡಬ್ಲ್ಯುಪಿಸಿ ಕೂಡ ಪೊಲೀಸರ ಕ್ರಮವನ್ನು ಖಂಡಿಸಿದೆ. ‘ಬಂಧಿತ ಪತ್ರಕರ್ತೆಯರನ್ನು ವಿಚಾರಣೆಗಾಗಿ ತ್ರಿಪುರಾಕ್ಕೆ ಕರೆತರುತ್ತಾರೆಂದು ತಿಳಿದಿದ್ದೇವೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪತ್ರಕರ್ತೆಯರಿಗೆ ತಮ್ಮ ಕೆಲಸವನ್ನು ನಿರ್ಭೀತವಾಗಿ ಮಾಡಲು ಅವಕಾಶ ನೀಡಬೇಕು’ ಎಂದು ಸಂಘಟನೆ ಒತ್ತಾಯಿಸಿದೆ.

ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಗಳ ಕುರಿತು ಮಾಡಿದ ವರದಿಯಲ್ಲಿ ಸರ್ಕಾರದ ಗೌರವಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಎಚ್‌ಡಬ್ಲ್ಯು ನ್ಯೂಸ್‌ ನೆಟ್‌ವರ್ಕ್‌ನ ಪತ್ರಕರ್ತೆಯರಾದ ಸಮೃದ್ಧಿ ಸುಕುನಿಯಾ ಮತ್ತು ಸ್ವರ್ಣಾ ಝಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಆಧರಿಸಿ, ತ್ರಿಪುರಾಕ್ಕೆ ತೆರಳುತ್ತಿದ್ದ ಇವರನ್ನು ಕರೀಂಗಂಜ್‌ನ ನೀಲಂಬಜಾರ್‌ನಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಇದನ್ನು ಎರಡೂ ರಾಜ್ಯಗಳ ಪೊಲೀಸರು ಖಚಿತಪಡಿಸಿದ್ದಾರೆ. ‌

ಪತ್ರಕರ್ತೆಯರ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಬೆಂಬಲಿಗ ಕಾಂಚನ್ ದಾಸ್ ಎಂಬ ವ್ಯಕ್ತಿ ನೀಡಿದ ದೂರಿನ ಮೇಲೆ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನು ಆಧರಿಸಿ, ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಸರ್ಕಾರ ನಡೆಸುವ ಆಶ್ರಯ ಮನೆಯಲ್ಲಿ ರಾತ್ರಿ ಇರಿಸಲಾಗಿದ್ದು, ಇಂದು ತ್ರಿಪುರಾ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಸ್ಸಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರನ್ನು ಸಿಲ್ಚಾರ್‌ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. ʼತ್ರಿಪುರಾ ಪೊಲೀಸರು, ಇವರನ್ನು ಬಂಧಿಸುವಂತೆ ತಮಗೆ ಸೂಚಿಸಿದ್ದರುʼ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಸ್ವತಂತ್ರ ಸುದ್ದಿ ಸಂಸ್ಥೆ ದೆಹಲಿ ಮೂಲದ ವರದಿಗಾರರಾದ 21 ವರ್ಷದ ಸಮೃದ್ಧಿ ಸಕುನಿಯಾ ಮತ್ತು 25 ವರ್ಷದ ಸ್ವರ್ಣ ಝಾ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ (ಕ್ರಿಮಿನಲ್ ಪಿತೂರಿ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 504 ಸೆಕ್ಷನ್ ಅಡಿಗಳಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮುನ್ನ ಸುಕುನಿಯಾ ಅವರು, ‘ನಮ್ಮನ್ನು ಅಸ್ಸಾಂನ ಕರಿಂಗಂಜ್‌ನ ನೀಲಂಬಜಾರ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಗೋಮತಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇಲೆ ನಮ್ಮನ್ನು ಬಂಧಿಸಿರುವುದಾಗಿ ನೀಲಂಬಜಾರ್‌ ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದರು’ ಎಂದು ಟ್ವೀಟ್‌ ಮಾಡಿದ್ದರು.

ಸುಕುನಿಯಾ ತಮ್ಮ ಟ್ವೀಟ್‌ನಲ್ಲಿ “ನಾವು ತ್ರಿಪುರ ರಾಜಧಾನಿ ಅಗರ್ತಲಾಗೆ ಹೊರಡಬೇಕಿತ್ತು. ಆದರೆ ಸಂಪೂರ್ಣ ಸಹಕಾರದ ಹೊರತಾಗಿಯೂ ನಾವು ತೆರಳಲು ಅವಕಾಶ ನೀಡಲಿಲ್ಲ. ನಮ್ಮ ಹೋಟೆಲ್ ಹೊರಗೆ ಸುಮಾರು 16-17 ಪೊಲೀಸರನ್ನು ನಿಯೋಜಿಸಲಾಗಿದೆ” ಎಂದು ಬರೆದಿದ್ದಾರೆ.

ಸುಕುನಿಯಾ ಮತ್ತು ಸ್ವರ್ಣಾ ಝಾ ಅವರು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಮಸೀದಿಯ ಬಗ್ಗೆ ನವೆಂಬರ್ 12 ರಂದು ವರದಿ ಮಾಡಿದ್ದರು. ಕಳೆದ ಶನಿವಾರ ಇಬ್ಬರು ವರದಿಗಾರರು ಇಲ್ಲಿ ಇನ್ನೊಂದು ಮಸೀದಿ ಮತ್ತು ಮುಸ್ಲಿಮರ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿ ಮಾಡಲು ಧರ್ಮನಗರಕ್ಕೆ ಬಂದಿದ್ದರು. ತ್ರಿಪುರಾದಲ್ಲಿ ಅಕ್ಟೋಬರ್ 26 ರಂದು ನಡೆದ ವಿಎಚ್‌ಪಿ ರ್‍ಯಾಲಿ ಬಳಿಕ ಹಿಂಸಾಚಾರ ಆರಂಭವಾಗಿದೆ. ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *