ಬೆಳಗಾವಿ : ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ಕಲಾಪವನ್ನು ಸಾರ್ವಜನಿಕರೂ ವೀಕ್ಷಿಸಲು ಅನುಕೂಲವಾಗುವಂತೆ ಮೊದಲ ಬಾರಿ ವೆಬ್ ಕ್ಯಾಸ್ಟಿಂಗ್ ಮೂಲಕ ನೇರಪ್ರಸಾರ ವ್ಯವಸ್ಥೆ ಮಾಡಲಾಗುವುದು ಎಂದು ವಿಧಾನಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ ತಿಳಿಸಿದರು.
ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ನೇರಪ್ರಸಾರ ಮಾಡುವ ಕುರಿತು ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು. ವೆಬ್ ಕ್ಯಾಸ್ಟಿಂಗ್ ಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಯೊಂದು ಇಲಾಖೆಯ ಕಚೇರಿಯಲ್ಲಿ ಇ-ಆಫೀಸ್ ಬಳಕೆ ಮಾಡುತ್ತಿರುವುದರಿಂದ ಇಂಟರ್ನೆಟ್ ಸೇರಿದಂತೆ ಎಲ್ಲ ಸಮರ್ಪಕ ಸೌಲಭ್ಯಗಳನ್ನು ಒಂದು ವಾರದೊಳಗೆ ಒದಗಿಸುವಂತೆ ತಿಳಿಸಿದರು.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರು ವಿಧಾನಮಂಡಲ ಅಧಿವೇಶನದ ಕಲಾಪವನ್ನು ನೇರವಾಗಿ ವೀಕ್ಷಿಸಲು ಅನುಕೂಲ ಕಲ್ಪಿಸಲು ಏನೆಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಅವೆಲ್ಲವನ್ನೂ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಕ ನೀಡಿದರು.
ಅಧಿವೇಶನ ಎಲ್ಲ ರೀತಿಯಿಂದ ಸುಗಮವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕೆಲಸಕಾರ್ಯಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದರು.
ಇದಕ್ಕೂ ಮುಂಚೆ ಪರಿಷತ್ತಿನ ಸಭಾಂಗಣವನ್ನು ಪರಿಶೀಲಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಬೆಳಗಾವಿಯಲ್ಲಿ ಮೊದಲ ಅಧಿವೇಶನ ಆರಂಭಗೊಂಡ ಹಿನ್ನೆಲೆಯನ್ನು ವಿವರಿಸಿದರು.
ವಿಧಾನ ಮಂಡಳದ ಕಲಾಪವನ್ನು ನೇರಪ್ರಸಾರ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರತಿಯೊಂದು ವಿಷಯವನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಅದೇ ರೀತಿ ಡಿಸೆಂಬರ್ ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕೂಡ ಇದೇ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಭಾಪತಿ ತಿಳಿಸಿದರು.
ಅಧಿವೇಶನದ ಸಿದ್ಧತೆ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಂಜೀವಕುಮಾರ್ ಹುಲಕಾಯಿ, ಎನ್.ಐ.ಸಿ. ಅಧಿಕಾರಿ ಸಂಜೀವಕುಮಾರ್ ಕ್ಷೀರಸಾಗರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ಇ-ಗವರ್ನನ್ಸ್, ಎನ್.ಐ.ಸಿ., ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಅರ್ಜುನ್