ವೇದರಾಜ ಎನ್ ಕೆ
ಸತತ ಬೆಲೆಯೇರಿಕೆಗಳ ನಂತರ, ಅದೂ ಉಪಚುನಾವಣೆಗಳ ಫಲಿತಾಂಶಗಳ ಬೆನ್ನಲ್ಲೇ ಇದ್ದಕ್ಕಿದಂತೆ ಇಂಧನಗಳ ಮೇಲಿನ ಅಬಕಾರಿ ಸುಂಕದಲ್ಲಿ ತುಸು ಇಳಿಕೆಯ ಪ್ರಕಟಣೆ ಸಹಜವಾಗಿ ದೇಶದ ವ್ಯಂಗ್ಯಚಿತ್ರಕಾರರ ಗಮನ ಸೆಳೆದಿದೆ. ಇದಕ್ಕೆ ಮೊದಲು, ಸರಕಾರದ ಅಸಹಕಾರವನ್ನೂ ಮೀರಿ ಪೆಗಸಸ್ ಬೇಹುಗಾರಿಕಾ ತಂತ್ರಾಂಶದ ಸತ್ಯಶೋಧನೆಗೆ ಮುಂದಾದ ಸುಪ್ರಿಂ ಕೋರ್ಟ್‍ನ ಮಧ್ಯಂತರ ಆದೇಶ, ನಂತರ ಹವಾಮಾನ ಬದಲಾವಣೆ ಕುರಿತ ಜಗತ್ತಿನ ಮುಖಂಡರ ವೇದಿಕೆಯಲ್ಲಿ ಭಾರತದ ಘೋಷಣೆಗಳು ಮತ್ತು ದೇಶದೊಳಗಿನ ಪರಿಸರ ವಾಸ್ತವತೆಗಳು ನಮ್ಮ ವ್ಯಂಗ್ಯಚಿತ್ರಕಾರರ ಗಮನ ಸೆಳೆದವು. ಇವುಗಳ ಒಂದು ಇಣುಕು ನೋಟ:
ಅಕ್ಟೋಬರ್ 27ರಂದು ದೇಶದ ಸರ್ವೋಚ್ಚ ನ್ಯಾಯಾಲಯ ಪೆಗಸಸ್ ಬೇಹುಗಾರಿಕಾ ತಂತ್ರಾಂಶದಿಂದಾಗಿ ಎದ್ದಿರುವ ಮಹತ್ವದ ಪ್ರಶ್ನೆಗಳನ್ನು ಕುರಿತಂತೆ ಒಂದು ಸ್ವತಂತ್ರ ತನಿಖೆಗೆ ಪರಿಣತರ ಸಮಿತಿಯನ್ನು ರಚಿಸುವ ಮಧ್ಯಂತರ ತೀರ್ಪು ನೀಡಿತು. ಅದರಲ್ಲಿ ಎರಡೆರಡು ಬಾರಿ ಅವಕಾಶ ಕೊಟ್ಟರೂ ಕೇಂದ್ರ ಸರಕಾರ “ಸೀಮಿತ ಅಫಿಡವಿಟ್’ ಮಾತ್ರ ಸಲ್ಲಿಸಿದ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಲಾಯಿತು ಎಂದು ವರದಿಯಾಗಿದೆ.
“ಸತ್ಯಮೇವ ಜಯತೆ”
“ಛೆ!” (ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಕೇಂದ್ರ ಸರಕಾರ ಅರ್ಜಿದಾರರು ಎತ್ತಿದ ಪ್ರಶ್ಶ್ನೆ/ ಆಕ್ಷೇಪಗಳೆಲ್ಲವನ್ನೂ ನಿರಾಕರಿಸಿದರೂ, ಈ ಕುರಿತಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರೆ ತಾನು ಇಂತಹ ಆದೇಶವನ್ನು ನೀಡಬೇಕಾಗಿ ಬರುತ್ತಿರಲಿಲ್ಲ ಎಂದು ಸೂಚಿಸಿರುವ ಸುಪ್ರಿಂ ಕೋರ್ಟ್ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ತಟ್ಟುವ ವಿದೇಶಿ ಕಂಪನಿಯೊಂದರ ತಂತ್ರಾಂಶ ಕುರಿತಂತೆ ಕೇಂದ್ರ ಸರಕಾರ ಈ ಹಾದಿ ಹಿಡಿದಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಈ ಮಧ್ಯಂತರ ಆದೇಶದಲ್ಲಿ ಅಭಿಪ್ರಾಯ ಪಟ್ಟಿರುವುದಾಗಿಯೂ ಪರಿಣಿತರು ಗಮನಿಸಿದ್ದಾರೆ.
***
ಕೇಂದ್ರ ಸರಕಾರ ಸುಪ್ರಿಂ ಕೋರ್ಟ್ ಕೇಳಿರುವ ಮಾಹಿತಿಯನ್ನು ಕೊಡದಿರಲು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನೂ ಗಮನಿಸಿದ ನ್ಯಾಯಾಲಯ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಲ್ಲಿ ನ್ಯಾಯಾಂಗದ ಪರಾಮರ್ಶೆಗೆ ಮಿತಿಯಿದೆ ಎಂಬುದು ನಿಜವಾದರೂ , ಪ್ರತಿಬಾರಿಯೂ ರಾಷ್ಟ್ರೀಯ ಭದ್ರತೆಯ ಭೂತವನ್ನು ತೋರಿಸಿ ಸರಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸಾಕಷ್ಟು ಖಾರವಾಗಿಯೇ ಟಿಪ್ಪಣಿ ಮಾಡಿರುವುದು ಗಮನಾರ್ಹ ಎನ್ನುತ್ತಾರೆ ಕಾನೂನು ವೀಕ್ಷಕರು.
“ರಾಷ್ಟ್ರೀಯ ಭದ್ರತೆ’ ಯ ಬ್ಯಾಟ್ ಮತ್ತು ಸುಪ್ರಿಂ ಕೋರ್ಟ್‍ನ ಚೆಂಡು”
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
“ರಾಷ್ಟ್ರೀಯ ಭದ್ರತೆ” ಎಂಬ ಬ್ಯಾಟನ್ನು ಅಡ್ಡಹಿಡಿದು ಔಟ್ ಆಗುವುದನ್ನು ಸದಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!
ಇತ್ತೀಚಿನ ವರ್ಷಗಳಲ್ಲಿ, ಅದೂ ಈ ಹಿಂದಿನ ಇಬ್ಬರು ಮುಖ್ಯ ನ್ಯಾಯಾಧೀಶರುಗಳ ಅವಧಿಯಲ್ಲಿ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ವರ್ತನೆಯ ಸುಖಾನುಭವಗಳ ಹಿನ್ನೆಲೆಯಲ್ಲಿ ಸರಕಾರಕ್ಕೆ ಈ ಮಧ್ಯಂತರ ತೀರ್ಪು ಅನಿರೀಕ್ಷಿತವಾಗಿತ್ತೇ?
ಇಲ್ಲ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು.
“ಕೆಟ್ಟ ಸುದ್ದಿ ,ಸಾರ್ ! ಸುಪ್ರಿಂ ಕೋರ್ಟ್ ತನಿಖಾ ಸಮಿತಿಯನ್ನು ನೇಮಿಸಿದೆ”
“ಹೌದು, ನಮಗೆ ಗೊತ್ತಿತ್ತು” (ಮಂಜುಲ್, ನ್ಯೂಸ್9)
ಅಂದರೆ ಸುಪ್ರಿಂ ಕೋರ್ಟ್ ನೇಮಿತ ಪರಿಣತರ ಸಮಿತಿಗೂ, ಸತ್ಯವನ್ನು ಹೊರತರಲು ಸಾಧ್ಯವಾಗಲಿಕ್ಕಿಲ್ಲ ಎಂದರ್ಥವೇ
ಮನ್ಸೂರ್ ನಖ್ವಿ, ದೈನಿಕ ಭಾಸ್ಕರ್
ಬಹುಶಃ ಈ ಬಾರಿ ಅಷ್ಟೊಂದು ಸಂದೇಹಪಡಬೇಕಾಗಿಲ್ಲ ಎನ್ನುತ್ತಾರೆ ರಾಜಕೀಯ ವೀಕ್ಷಕರು. ಈ ಮಧ್ಯಂತರ ಆದೇಶವನ್ನು ಕೇವಲ ಕಾನೂನಿನ ಪರಿಧಿಯಲ್ಲಷ್ಟೇ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಬಹು ಆಯಾಮಗಳನ್ನು ಹೊಂದಿರುವ ಇದು ಪ್ರಜಾಪ್ರಭುತ್ವದ ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ತುಸು ತಂಗಾಳಿಯನ್ನು ತಂದಿದೆ ಎನ್ನುತ್ತಾರೆ ಅವರು.
ಸತ್ಯಶೋಧನೆಯಲ್ಲಿ ಸರಕಾರದ ಸಹಕಾರ ಸಿಗದಿದ್ದರೂ ‘ಸತ್ಯಮೇವ ಜಯತೆ’ ಎಂದು ಈ ತನಿಖಾ ಸಮಿತಿಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ವೀಕ್ಷಕರು ಹೇಳುತ್ತಿದ್ದಾರೆ.
***
ಪಂಚಾಮೃತ
‘ಸತ್ಯಮೇವ ಜಯತೆ’ಯ ಬಗ್ಗೆ ಆಶಾಭಾವನೆಯನ್ನು ಚಿಗುರಿಸಿರುವ ಈ ಮಧ್ಯಂತರ ತೀರ್ಪಿನ ಐದು ದಿನಗಳ ನಂತರ ಪ್ರಧಾನಿಗಳು ಹವಾಮಾನ ಬದಲಾವಣೆ ಕುರಿತ ಜಾಗತಿಕ ಸಮ್ಮೇಳನ ‘ಸಿಒಪಿ26’ರಲ್ಲಿ ಭಾರತದ ಪರವಾಗಿ ‘ಪಂಚಾಮೃತ’ವನ್ನು ಘೋಷಿಸಿದರು. ಮುಖ್ಯವಾಗಿ 2070ರ ವೇಳೆಗೆ ಭಾರತದ ಇಂಗಾಲ(ಕಾರ್ಬನ್) ವಿಸರ್ಜನೆಯನ್ನು ಸೊನ್ನೆಗೆ ಇಳಿಸಲಾಗುವುದು ಎಂದು ಸಾರಿದರು.
“2070ರಲ್ಲಿ ಭೂ ಗ್ರಹಕ್ಕೆ ಅಚ್ಛೇ ದಿನ್”
ಮಂಜುಲ್, ನ್ಯೂಸ್9
2030ರೊಳಗೆ ಒಂದು ಶತಕೋಟಿ ಟನ್ ಇಂಗಾಲ ವಿಸರ್ಜನೆಯನ್ನು ಕಡಿಮೆ ಮಾಡುವುದು, ನವೀಕರಿಸಬಹುದಾದ ಇಂಧನದ ಪ್ರಮಾಣವನ್ನು 50%ಕ್ಕೆ ಏರಿಸುವುದು, ಇಂತಹ ವಿದ್ಯುತ್ತಿನ ಉತ್ಪಾದನೆಯನ್ನು 500 ಗಿಗಾವಾಟ್‍ಗೆ ಏರಿಸುವುದು ಮತ್ತು ಇಂಗಾಲ ತೀವ್ರತೆಯನ್ನು 45%ದಷ್ಟು ಇಳಿಸುವುದು ಈ ‘ಪಂಚಾಮೃತ’ದ ಇತರ ‘ಅಮೃತಬಿಂದು’ಗಳು.
ಆದರೆ ಇವೆಲ್ಲ ಕಾರ್ಯಸಾಧ್ಯವಲ್ಲದ ಗುರಿಗಳು ಎಂದು ಕೆಲವರು ಹೇಳಿದರೆ, ಬೋಗಸ್ ಘೋಷಣೆಗಳು ಎಂದು ಇನ್ನು ಕೆಲವರು ಟೀಕಿಸಿದ್ದಾರೆ.
2070ರ ಘೋಷಣೆ ಭಾರತ ಸರಕಾರದ ಸಂಬಂಧಪಟ್ಟ ಇಲಾಖೆಗೂ ಆಶ್ಚರ್ಯ ಉಂಟುಮಾಡಿದೆ ಎನ್ನಲಾಗಿದೆ. ಆದರೆ ಎರಡು ಶತಮಾನಗಳಿಂದ ಸತತವಾಗಿ ಹವಾಮಾನ ಬದಲಾವಣೆಗೆ ‘ಕಾರಣರಾದ ಅಮೆರಿಕ ಮತ್ತು ಯುರೋಪಿನ ದೇಶಗಳು 2050ರ ಗಡುವನ್ನು ಮತ್ತು ಇತ್ತೀಚೆಗೆ ಇದರ ಪ್ರಮುಖ ‘ಆರೋಪಿ ಎಂಬ ಚಿತ್ರಣವನ್ನುಎದುರಿಸುತ್ತಿರುವ ಚೀನಾ 2060ರ ಗಡುವನ್ನು ಘೋಷಿಸಿರುವಾಗ, ನಮ್ಮ ಪ್ರಧಾನಿಗಳು ಹೇಗೆ ಹಿಂದುಳಿಯಲು ಸಾಧ್ಯ ಎಂದು ಇನ್ನು ಕೆಲವರು ವಿಶ್ಲೇಷಿಸುತ್ತಾರೆ.
***
ಅದಿರಲಿ, ಈ ಶೂನ್ಯ ವಿಸರ್ಜನೆಯ ಸಮಯಮಿತಿ ಎಂಬುದೇ ಅರ್ಥಹೀನ ಎಂದು ಪರಿಸರವಾದಿಗಳು ಹೇಳುತ್ತಾರೆ.
“ನಾವು, ಸರಕಾರಗಳು ಮತ್ತು ಕಾರ್ಪೊರೇಟ್ ಗಳು ಜಗತ್ತಿನಾದ್ಯಂತ ಜಾಗತಿಕ ತಾಪಮಾನ
ಏರಿಕೆಯನ್ನು ಬದಲಿಸುವ ಜ್ಷಾನ-ತಂತ್ರಜ್ಞಾನವನ್ನು ಹೊಂದಿದ್ದೇವೆ”
“ಆದರೆ ಅವರಿಗೆ ಧೈರ್ಯವಿಲ್ಲ!”
“ಸಿ ಒ.ಪಿ.26-ಗ್ಲಾಸ್ಗೊದಲ್ಲಿ ಸದ್ದೇ ಹೆಚ್ಚು, ಬೆಳಕು ಕಡಿಮೆ”
(ನಲ ಪೊನ್ನಪ್ಪ, ದಿ ಫೆಡರಲ್.ಕಾಂ)
ಧೈರ್ಯವಿಲ್ಲವೋ, ಆಸಕ್ತಿ ಇಲ್ಲವೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಇಂಗ್ಲೆಂಡಿನ ದಿ ಗಾರ್ಡಿಯನ್ ಪತ್ರಿಕೆ ಜಗತ್ತಿನಾದ್ಯಂತ ‘ಭೂಮಿಯನ್ನು ಉಳಿಸಿ’ ಚಳುವಳಿಯಲ್ಲಿ ತೊಡಗಿಕೊಂಡುದಕ್ಕಾಗಿ ಇವೇ ಸರಕಾರಗಳಿಂದ ಬಂಧನಕ್ಕೊಳಗಾದ 20 ಯುವಜನರ ಸಂದರ್ಶನವನ್ನು ಪ್ರಕಟಿಸಿದೆ. ಇವರಲ್ಲಿ ಭಾರತದ ದಿಶಾ ರವಿ ಕೂಡ ಒಬ್ಬರು.
***
ಭಾರತ ಸರಕಾರ ಪರಿಸರ ರಕ್ಷಣೆಯ, ಅರಣ್ಯ ರಕ್ಷಣೆಯ, ಅರಣ್ಯ ಹಕ್ಕುಗಳ ಕಾಯ್ದೆಗಳನ್ನು ಒಂದೊಂದಾಗಿ ‘ವಿಕಾಸ’ದ ಹೆಸರಲ್ಲಿ ಸಂಬಂಧಪಟ್ಟವರೊಂದಿಗೆ ಸಮಾಲೋಚನೆಗಳನ್ನು ನಡೆಸದೆಯೇ ಕಳಚಿ ಹಾಕುತ್ತಿರುವಾಗ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ಇದರಲ್ಲಿ ಕೈಜೋಡಿಸುವಂತೆ ಮಾಡುತ್ತಿರುವಾಗ ಈ 2030-2070ರ ಗುರಿಗಳು ಈಡೇರುವಂತವುಗಳೇ ಎಂದು ದಿಶಾ ರವಿ ಸೇರಿದಂತೆ ಹಲವರು ಪ್ರಶ್ನಿಸುತ್ತಿದ್ದಾರೆ.
“ಪ್ರಧಾನಿಗಳು ಒಂದು ಮಹತ್ವದ ಶೃಂಗಸಭೆಯಲ್ಲಿದ್ದಾರೆ…”
“ಹೌದು, ನಾವು ಕೂಡ ಅತ್ಯಂತ ಎಚ್ಚರದಲ್ಲಿರಬೇಕು!”
“ದಿಶಾ ರವಿಯಂತವರನ್ನೆಲ್ಲ ಹಿಡಿದು ಹಾಕೋಣವೇ?”
(ಮಂಜುಲ್, ವೈಬ್ಸ್ ಆಫ್ ಇಂಡಿಯಾ)
ಅಂದ ಹಾಗೆ, ದಿಶಾ ರವಿಯನ್ನು ಬಂಧಿಸಿ ಕರೆದೊಯ್ದ ದಿಲ್ಲಿ ಪೊಲೀಸ್ ಹಾಕಿದ ‘ಟೂಲ್‍ಕಿಟ್’ ಕೇಸನ್ನು ಅಗತ್ಯ ಪುರಾವೆಗಳನ್ನು ಸಲ್ಲಿಸಲಾಗಿಲ್ಲವಾದ್ದರಿಂದ ಮುಚ್ಚುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ದಿಶಾ ಈ ಹೊತ್ತಿನಲ್ಲಿ ಗ್ಲಾಸ್ಗೊದಲ್ಲಿ ಸಿಒಪಿ 26 ಸಮ್ಮೇಳನದಲ್ಲಿ ಇರಬೇಕಿತ್ತಂತೆ. ಇದಕ್ಕೆ ಬೆಂಗಳೂರಿನಿಂದ ವಿಮಾನ ಪ್ರಯಾಣಕ್ಕೆ ದಿಲ್ಲಿ ಹೈಕೋರ್ಟಿನ ಎನ್.ಒ.ಸಿ. ಕೂಡ ಸಿಕ್ಕಿತ್ತು. ಆದರೆ ಬೆಂಗಳೂರು ಪೊಲೀಸ್ ಆಕೆಯ ಪಾಸ್‍ಪೋರ್ಟ್ ಪರೀಕ್ಷಣಾ ಪ್ರಕ್ರಿಯೆಯನ್ನು ತಡೆಹಿಡಿದುದರಿಂದಾಗಿ ಆಕೆ ಹೋಗಲಾಗಲಿಲ್ಲ ಎಂದು ವರದಿಯಾಗಿದೆ(ಡೆಕ್ಕನ್ ಹೆರಾಲ್ಡ್, ನ.5).
***
ಅದೇನೇ ಇರಲಿ, ನವೀಕರಿಸಲಾಗದ, ಭೂಗರ್ಭದಿಂದ ತೆಗೆಯುವ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನ ಮೂಲಗಳ ಬಳಕೆಯನ್ನು ಕಡಿತ ಮಾಡುವಲ್ಲಿ ಭಾರತ ಸರಕಾರ ಪ್ರತಿದಿನವೆಂಬಂತೆ ಪ್ರಯತ್ನ ಮಾಡುತ್ತಿದೆ ಎಂದು ಪೆಟ್ರೋಲ್ ಬಂಕ್‍ಗಳ ರೇಟ್ ಬೋರ್ಡುಗಳು ಸಾರುತ್ತಿಲ್ಲವೇ? ಅಂದರೆ ಈ ಪಂಚಾಮೃತಗಳಲ್ಲಿ ಒಂದನ್ನು ಈಡೇರಿಸುವ ‘ಪ್ರಾಮಾಣಿಕ ಪ್ರಯತ್ನ’ ನಡೆಯುತ್ತಿದೆಯಲ್ಲವೇ ಎಂದು ಕೇಳುತ್ತಿದ್ದಾರೆ.
“ನಾವು ನಿಯಮಿತವಾಗಿ ಬೆಲೆಗಳ ಮೂಲಕ
ಭೂಗರ್ಭದಿಂದ ತೆಗೆಯುವ ಇಂಧನಗಳ
ಬಳಕೆಯನ್ನು ಕಡಿಮೆ ಮಾಡುತ್ತಿದ್ದೇವೆ.”
ಇ.ಪಿ.ಉನ್ನಿ, ಇಂಡಿಯನ್ ಎಕ್ಸ್‌ಪ್ರೆಸ್
***
ಆದರೆ, ಉಪಚುನಾವಣೆಗಳ ಫಲಿತಾಂಶಗಳು ಅದಕ್ಕೂ ‘ಕಂಟಕ ತಂದಿರು’ವಂತೆ ಕಾಣುತ್ತದೆ!
ಇಂಧನ ಬೆಲೆಗಳು… ಚುನಾವಣೆಗಳು ಎದುರಾದಾಗ
ಸುಭಾನಿ, ಡೆಕ್ಕನ್ ಕ್ರಾನಿಕಲ್
ವಿಧಾನಸಭಾ ಚುನಾವಣೆಗಳಿಗೆ ಸಿದ್ಧವಾಗುತ್ತಿರುವ ಉತ್ತರ ಪ್ರದೇಶದ ಆಳುವ ಪಕ್ಷದ ಒಬ್ಬ ಹಿರಿಯ ಮುಖಂಡರೂ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಸಬೇಕು ಎಂಬ ಸಾರ್ವತ್ರಿಕ ಕೂಗಿಗೆ ತಮ್ಮ ದನಿಗೂಡಿಸಿದರು ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಆದರೂ ನಿರೀಕ್ಷೆಯಂತೆ ಅಡಿಗೆ ಬಿದ್ದರೂ ಮೂಗು ಮೇಲೆ ಎಂಬ ಪ್ರಚಾರ ಕಸರತ್ತು ನಡೆಯುತ್ತಿದೆ.
“ಒಳ್ಳೆ ಸುದ್ದಿ! ನಾವು ಇಂಧನ ತೆರಿಗೆಗಳನ್ನು ಇಳಿಸಿದ್ದೇವೆ”
“ಬಹಳ ಒಳ್ಳೆದು! ಆದರೆ ನಾನು ಕಾರನ್ನು ಕಳೆದ ತಿಂಗಳೇ ಮಾರಿಬಿಟ್ಟೆ!”
(ಅಲೋಕ್ ನಿರಂತರ್, ಫೇಸ್ ಬುಕ್)
ಇವರು ತಮ್ಮ ಕಾರನ್ನೇ ಮಾರಿ ಪ್ರಧಾನಿಗಳ ‘ಪಂಚಾಮೃತ’ ಘೋಷಣೆಯ ಮೊದಲೇ ಅದರಲ್ಲಿ ಒಂದು ಅಮೃತ ಬಿಂದುವಿನ ಸಫಲತೆಗೆ ತಮ್ಮ ಕೊಡುಗೆ ನೀಡಿದ್ದಾರೆ.
***
ಒ.ಕೆ. ಆದರೆ ಪೆಟ್ರೋಲ್-ಡೀಸೆಲ್ ಬೆಲೆಗಳು ದಿನಂಪ್ರತಿ ಏರುತ್ತಿದ್ದಾಗ, ಅದರ ಮೇಲೆ ಹತೋಟಿ ಹಾಕಿ ಎಂದು ಅದರ ಹೊಡೆತಕ್ಕೊಳಗಾದ ಜನಗಳು ಕೇಳುತ್ತಿದ್ದಾಗ, ಈ ಬೆಲೆಗಳು ‘ನಮ್ಮ ಕೈಯಲಿಲ್ಲ’, ಮಾರುಕಟ್ಟೆ ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದ ಸರಕಾರ ಇದೇ ಅಲ್ಲವೇ?
ಈಗ ಉಪಚುನಾವಣೆಗಳ ಫಲಿತಾಂಶದ ಹೊಡೆತ ಬಿದ್ದಾಗ…..
“ಒ.ಕೆ.,ಒ.ಕೆ. 5ರೂ.ಕಡಿಮೆ ಮಾಡು!”
(ಸತೀಶ ಆಚಾರ್ಯ, ಫೇಸ್‌ಬುಕ್)
***
ಥ್ಯಾಂಕ್ಯೂ ಮೋದೀಜೀ!
ಆದರೂ ಯಾವುದೇ ಮುಲಾಜಿಲ್ಲದೆ ಪ್ರಚಾರ ಕಸರತ್ತಂತೂ ಮುಂದುವರೆದಿದೆ.
ಈ 5ರೂ./ 10ರೂ. ಕಡಿತದೊಂದಿಗೆ ಬಿಜೆಪಿ ಆಳ್ವಿಕೆಯ ರಾಜ್ಯಗಳು ತಮ್ಮ ತೆರಿಗೆಯ ದರಗಳನ್ನೂ ಇಳಿಸುವುದಾಗಿ ಪ್ರಕಟಿಸಿವೆ.
ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನಗಳಿಗೆ ಬಹು ಅಗತ್ಯವಾಗಿದ್ದ ಪರಿಹಾರವನ್ನು ಮತ್ತು ಅರ್ಥವ್ಯವಸ್ಥೆಗೆ ಇನ್ನಷ್ಟು ಉತ್ತೇಜನೆಯನ್ನು ಕೊಟ್ಟಿದ್ದಕ್ಕಾಗಿ ಪ್ರಧಾನ ಮಂತ್ರಿಗಳಿಗೆ ‘ಥ್ಯಾಂಕ್ಸ್’ ಹೇಳಬೇಕಾಗಿದೆ ಎಂದು ರಾಜ್ಯದ ಬಿಜೆಪಿ ಮುಖಂಡರು ಹೇಳಿರುವುದಾಗಿ ವರದಿಯಾಗಿದೆ.
ಅಂದರೆ, ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನಗಳಿಗೆ ಮತ್ತು ಆರ್ಥಿಕ ಉತ್ತೇಜನೆಗೆ ಅಬಕಾರಿ ಸುಂಕ ಕಡಿತ ಬಹಳ ಅಗತ್ಯವಾಗಿತ್ತು ಎಂಬುದನ್ನಂತೂ ಕೊನೆಗೂ ಆಳುವ ಮಂದಿ ಒಪ್ಪಿಕೊಂಡಿದ್ದಾರೆ.
ಆದರೆ ಮೋದಿ ಸರಕಾರ ಅಧಿಕಾರ ವಹಿಸಿಕೊಂಡಾಗ ಅಬಕಾರಿ ಸುಂಕ ದರ ಪೆಟ್ರೋಲ್ ಮೇಲೆ ರೂ.9.48 ಮತ್ತು ಡೀಸೆಲ್ ಮೇಲೆ ರೂ.3.56 ಇತ್ತು, ಕಳೆದ ವಾರ ಇದು ಅನುಕ್ರಮವಾಗಿ ರೂ.32.90 ಮತ್ತು ರೂ.31.80ಕ್ಕೆ ಏರಿದೆ.
ಅಂದರೆ “ಬಡ ಮತ್ತು ಮಧ್ಯಮ ವರ್ಗದ ಜನಗಳಿಗೆ ಪರಿಹಾರ ಮತ್ತು ಅರ್ಥ ವ್ಯವಸ್ಥೆಗೆ ಉತ್ತೇಜನೆ” ಅಗತ್ಯವಾಗಿದ್ದರೂ ಸಿಕ್ಕಿರುವುದು ಅತ್ಯಲ್ಪವೇ ಎಂಬುದು ಸ್ವಯಂವೇದ್ಯ.
ಅದೇನೇ ಇರಲಿ, ಈಗ ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಉತ್ತರಪ್ರದೇಶಕ್ಕೆ ಭೇಟಿ ಅಗ್ಗವಾಗಿದೆ.
“ಹ್ಯಾಪಿ ದಿವಾಲಿ”
ಮಿಕಾ ಅಝೀಝ್, ಫೇಸ್ ಬುಕ್
ಹೌದು, ಕೇಂದ್ರ ಗೃಹ ಮಂತ್ರಿಗಳು ಇದನ್ನು ‘ದೀಪಾವಳಿ ಉಡುಗೊರೆ’ ಎಂದು ವರ್ಣಿಸಿರುವುದಾಗಿಯೂ ವರದಿಯಾಗಿದೆ.
ಪಿ.ಮಹಮ್ಮದ್, ವಾರ್ತಾಭಾರತಿ
ಆದರೆ ವಿಧಾನಸಭಾ ಚುನಾವಣೆಗಳು ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಮಾತ್ರವಲ್ಲ, ಗೋವಾ ಮತ್ತು ಮಣಿಪುರದಲ್ಲಿಯೂ ನಡೆಯಲಿವೆ. ಅಲ್ಲಿಗೂ ಹೋಗಬೇಕಾಗಿದೆ. ಹಾಗಿದ್ದರೆ…..
“ದೀಪಾವಳಿ ಉಡುಗೊರೆಯ ನಂತರ
ಕ್ರಿಸ್‍ಮಸ್ ಉಡುಗೊರೆಯೂ ಬರಬೇಕು.”
ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್
***
ಕೊನೆಯದಾಗಿ, ಕಳೆದ ವಾರ ಕಂಡ ದ್ವೇಷದಾಟದ ಮುಂದಿನ ಭಾಗ. ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚಿನಲ್ಲಿ ಭಾರತದ ಸೋಲಿಗೆ ಕಾರಣ ಎಂದು ತಂಡದ ಯುವ ಆಟಗಾರ ಮಹಮ್ಮದ್ ಶಮಿಯವರನ್ನು ಟ್ರೋಲ್ ಮಾಡಿರುವುದನ್ನು ಕಂಡು ಖೇದಗೊಂಡ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ “ನನ್ನ ಮಟ್ಟಿಗೆ, ಯಾರ ಮೇಲಾದರೂ ಅವರ ಧರ್ಮದ ವಿಷಯದಲ್ಲಿ ಪ್ರಹಾರ ನಡೆಸುವುದು ಒಬ್ಬ ಮಾನವ ಜೀವಿ ಮಾಡಬಹುದಾದ ಅತ್ಯಂತ ಶೋಚನೀಯ ಕೆಲಸ” ಎಂದು ಕಟುವಾಗಿ ಟೀಕಿಸಿದ್ದಾರೆ. ಶಮಿಯವರು ಭಾರತದ ತಂಡದ ಯಶಸ್ಸಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ಈ ಶೋಚನೀಯ ಟ್ರೋಲಿಗರಿಗೆ ನೆನಪಿಸಿದ್ದಾರೆ.
ಪಿ.ಮಹಮ್ಮದ್, ವಾರ್ತಾಭಾರತಿ
“ನಾವು ಮೈದಾನದಲ್ಲಿ ಎಷ್ಟು ಶ್ರಮ ಹಾಕುತ್ತೇವೆ ಎಂಬ ಅರಿವು ಅವರಿಗಿಲ್ಲ. ಶಮಿಯಂತವರು ಕಳೆದ ಕೆಲವು ವರ್ಷಗಳಲ್ಲಿ ಭಾರತಕ್ಕೆ ಎಷ್ಟು ಮ್ಯಾಚ್ ಗೆದ್ದುಕೊಟ್ಟಿದ್ದಾರೆ ಎಂಬ ಸಂಗತಿ ಅವರಿಗೆ ತಿಳಿಯದು. ಕಳೆದ ಕೆಲವು ವರ್ಷಗಳಲ್ಲಿ ಆತ ಮತ್ತು ಜಸ್ಪ್ರೀತ್ ಬುಮ್ರಾ ಆಟದ ಮೇಲೆ ಪರಿಣಾಮ ಬೀರುವಲ್ಲಿ ನಮ್ಮ ಪ್ರಧಾನ ಬೌಲರುಗಳು. ಜನಗಳು ದೇಶದ ಬಗ್ಗೆ ಆತನ ಉತ್ಕಟ ಪ್ರೇಮವನ್ನು ನಿರ್ಲಕ್ಷಿಸುವುದಾದರೆ, ಪ್ರಾಮಾಣಿಕವಾಗಿ ಹೇಳುತ್ತೇನೆ,ಇಂತಹ ಜನಗಳಿಗೆ ನನ್ನ ಜೀವನದ ಒಂದು ನಿಮಿಷವನ್ನೂ ನಾನು, ಮತ್ತು ಶಮಿ ಕೂಡ, ಮತ್ತು ನಮ್ಮ ತಂಡದ ಯಾರೂ ವ್ಯರ್ಥಗೊಳಿಸ ಬಯಸುವುದಿಲ್ಲ. ನಾವು ಸಂಪೂರ್ಣವಾಗಿ ಆತನ ಬೆಂಬಲಕ್ಕೆ ನಿಲ್ಲುತ್ತೇವೆ. ಆತನನ್ನು 200% ಬೆಂಬಲಿಸುತ್ತೇವೆ. ಆತನ ಮೇಲೆ ದಾಳಿ ಮಾಡುವವರು ಬೇಕಾದರೆ ಎಷ್ಟೇ ಹೆಚ್ಚು ಬಲದೊಂದಿಗೆ ಬರಲಿ, ತಂಡದೊಳಗೆ ನಮ್ಮ ಸೋದರತ್ವವನ್ನು, ಗೆಳೆತನವನ್ನು ಯಾವುದೂ ಅಲುಗಾಡಿಸದು.”
ದೇಶವನ್ನು ವ್ಯಾಪಿಸಿರುವ ದ್ವೇಷದಾಟದ ವಾತಾವರಣದಲ್ಲಿ ನಮ್ಮ ಕ್ರಿಕೆಟ್ ಕ್ಯಾಪ್ಟನ್ನನ ಈ ನೇರ ನುಡಿ ಕ್ರಿಕೆಟ್ ಕ್ಷೇತ್ರದ ಆಚೆಗೂ ಮಹತ್ವ ಪಡೆದಿದೆ, ಅದು ಒಂದು ಮೌನವನ್ನು ಮುರಿದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ (ನ.1) ಹೇಳಿರುವುದು ಗಮನಾರ್ಹ. ಹಾಗೆಯೇ ಈ ವ್ಯಂಗ್ಯಚಿತ್ರ ಕೂಡ.
“ಯಾವ ಶೋಟನ್ನು ಯಾವಾಗ ಆರಿಸಿಕೊಳ್ಳಬೇಕು
ಎಂಬುದನ್ನು ನೀವು ಕೊಹ್ಲಿಯಿಂದ ಕಲಿಯಬೇಕು”
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
ಆದರೆ ಕೊಹ್ಲಿಯನ್ನೂ ಅತ್ಯಂತ ಹೊಲಸು ರೀತಿಯಲ್ಲಿ ಟ್ರಾಲ್ ಮಾಡಿದ ಮೇಲೂ ಸುಮ್ಮನಿರುವ ರಾಜಕೀಯದ ಉನ್ನತ ಸ್ಥಾನಗಳಲ್ಲಿರುವವರು ಈ ರೀತಿ ಮೌನ ಮುರಿಯಬಲ್ಲರೇ ಎಂಬುದು ಕೋಟಿ ಡಾಲರ್ ಪ್ರಶ್ನೆ
ಆದರೆ, ಈ ಕಸಬುದಾರ ಟ್ರಾಲಿಗರ ಮುಂದೆಯೂ ಈಗಿಂದಲೇ ಒಂದು ಗಹನವಾದ ಪ್ರಶ್ನೆಯಿದೆಯಂತೆ:
“ಹಿಂದೂ ರಾಷ್ಟ್ರದ ತಂಡವನ್ನು ಹೊಂದಿದಾಗ
ನಾವು ಯಾರನ್ನು ಟ್ರಾಲ್ ಮಾಡೋಣ?”
ಸತೀಶ ಆಚಾರ್ಯ, ಫೇಸ್‌ಬುಕ್