ಹುಬ್ಬಳ್ಳಿ: ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿ ಎಂಬ ಬೇಡಿಕೆ ಹಲವು ದಿನಗಳಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಭತ್ತ ಬೆಳೆಯುವ ರಾಯಚೂರು, ಕೊಪ್ಪಳ ಭಾಗದ ರೈತರಂತೂ ಈ ಬಗ್ಗೆ ಪದೇ ಪದೇ ಮನವಿ ಮಾಡಿದ್ದರು. ಹೀಗಾಗಿ ಎಂಎಸ್.ಪಿ. ದರದಲ್ಲಿ ಭಕ್ತ ಖರೀದಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೀಪಾವಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ʻಭತ್ತ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬೆಂಬಲ ಬೆಲೆಯೊಂದಿಗೆ ಶೀಘ್ರವೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದರು.
ದೀಪಾವಳಿ ಮುಗಿದ ತಕ್ಷಣ ಭತ್ತ ಖರೀದಿ ಆರಂಭವಾಗುತ್ತದೆ. ಭತ್ತ ಖರೀದಿ ನೇರವಾಗಿ ಸರ್ಕಾರವೇ ಮಾಡಲಿದೆ. ಜತೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ 100 ದಿನಗಳಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಒಂದು ವರ್ಷದಂತೆ ಪ್ರಮುಖ ಘಟ್ಟವೇನಲ್ಲ. ಆದರೆ, 100 ದಿನದಲ್ಲಿ ಸರ್ಕಾರದ ದಿಕ್ಕು, ಭರವಸೆ, ಸಮಸ್ಯೆಗಳನ್ನು ಎದುರಿಸಿದ ರೀತಿ, ಇವುಗಳ ಸ್ಥೂಲವಾಗಿ ಮಾಹಿತಿ ನೀಡಲಾಗುವುದು” ಎಂದರು.
ಬಿಟ್ ಕಾಯಿನ್ ವಿಚಾರ
ಬಿಟ್ ಕಾಯಿನ್ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ನಾವೇ ಅವರನ್ನು ಬಂಧಿಸಿ, ಕೇಸ್ ದಾಖಲಿಸಿದ್ದೇವೆ. ವಿಚಾರಣೆಗೆ ‘ಇಡಿ’ಗೆ ಶಿಫಾರಸು ಮಾಡಿದ್ದೇವೆ. ಇದರಲ್ಲಿ ಅಂತರರಾಷ್ಟ್ರೀಯ ವಹಿವಾಟು ನಡೆದಿರುವುದರಿಂದ ಸಿಬಿಐ ಇಂಟರ್ ಪೋಲ್ ಗೆ ವಹಿಸಿಬೇಕಾಗಿ ಬಂದಿದೆ. ಸಿಬಿಐ ತನಿಖೆಗೆ ವಹಿಸಿದ್ದೇವೆ, ನಾವೇ ತನಿಖೆ ನಡೆಸುತ್ತಿದ್ದೇವೆ ಎಂದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಮುಂಬರುವ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಯಲಿದೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻನವೆಂಬರ್ 08 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ಅಂತಿಮಗೊಳ್ಳಲಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸೋಕೆ ಈಗಾಗಲೇ ತೀರ್ಮಾನಿಸಲಾಗಿದೆ. ದಿನಾಂಕ ನಿಗದಿಗೆ ಸಂಬಂಧಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಮೂರು ದಿನ ಹುಬ್ಬಳ್ಳಿಯಲ್ಲಿ ವಾಸ್ತವ್ಯ
ದೀಪಾವಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನು ಮೂರು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರಿನ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಅವರು ಆಗಮಿಸಿದರು.