ಹುಬ್ಬಳ್ಳಿ: ನೆನ್ನೆಯಷ್ಟೇ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻಈ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆʼ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ಹಾನಗಲ್, ಸಿಂದಗಿ ಫಲಿತಾಂಶ : ಕಾಂಗ್ರೆಸ್ಗೆ ಪ್ರತಿಷ್ಠೆ! ಬಿಜೆಪಿಗೆ ನಾಯಕತ್ವದ ನಿರ್ಧಾರ?
ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಬಿಜೆಪಿಗೆ ಸೋಲಾಗಿದೆ. ಸೋಲಿಗೆ ನಾನೊಬ್ಬನೇ ಕಾರಣನಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದರು.
ಮುಂದುವರೆದು ಮಾತನಾಡಿದ ಬಸವರಾಜ ಬೊಮ್ಮಾಯಿ ʻಮುಂಬರುವ ಚುನಾವಣಾ ನಾಯಕತ್ವದ ಬಗ್ಗೆ ಕೇಂದ್ರದ ನಾಯಕ ಅಮಿತ್ ಶಾ ನನ್ನ ಹೆಸರು ಪ್ರಸ್ತಾಪಿಸಿದ್ದಾಗಲೇ, ನಾನು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಉದಾಸಿ ಇದ್ದಾಗಲೂ ಒಮ್ಮೆ ಬಿಜೆಪಿ – ಒಮ್ಮೆ ಕಾಂಗ್ರೆಸ್ ಗೆದ್ದು ಬರುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರು ಕೋವಿಡ್ ಸಂದರ್ಭದಲ್ಲಿ ಮಾಡಿದ ಜನಪರ ಕೆಲಸಗಳನ್ನು ಜನರು ಬೆಂಬಲಿಸಿದ್ದಾರೆ. ಸೋಲಿನ ಪರಾಮರ್ಶೆ ಮಾಡಲಾಗುವುದುʼ ಎಂದರು.