‘ಇದು ಸಂಭ್ರಮಿಸುವ ಸಮಯ ಹೌದು! ಮುಂದಿನ ಸವಾಲಿಗೆ ತಯಾರಿಯ ಸಮಯವೂ ಹೌದು!!’
ಮೂಲ: ವಿ ಶ್ರೀಧರ್, ಕೃಪೆ: ದಿ ಫೆಡೆರಲ್
ಭಾರತದಂತಹ ದೊಡ್ಡ ಸಂಕೀರ್ಣ ದೇಶದಲ್ಲಿ 100 ಕೋಟಿ ಲಸಿಕೆಗಳನ್ನು ಪೂರೈಸಿರುವುದು ಒಂದು ಸಾಧನೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಕುರಿತು ಈ ‘ಸಾಧನೆ’ ಮುಂದಿರುವ ಅಗಾಧ ಸವಾಲನ್ನು ಎದುರಿಸಲು ತಯಾರಿಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕು. ಆ ಸವಾಲುಗಳೇನು ಎಂದು ಈ ಲೇಖನ ವಿವರಿಸುತ್ತದೆ. ಈ ಸವಾಲುಗಳು ಸ್ಥೂಲವಾಗಿ ಹೀಗಿವೆ : ನಾವು ಕೇವಲ ಶೇ. 53ರಷ್ಟು ಗುರಿ ಸಾಧಿಸಿದ್ದೇವೆ. ಪ್ರಸ್ತುತ ದೈನಂದಿನ ‘ರನ್ ರೇಟ್’ ಆಗಸ್ಟ್ನಲ್ಲಿ ಸಾಧಿಸಿದ ದರಗಳಿಗಿಂತ ಕಡಿಮೆಯಾಗಿದೆ. ಪ್ರಸ್ತುತ ದರದಲ್ಲಿ ಲಸಿಕೆಯನ್ನು ನೀಡಿದರೆ ಎಲ್ಲಾ ವಯಸ್ಕರಿಗೆ ಏಪ್ರಿಲ್ 2022 ರ ವೇಳೆಗೆ ಮಾತ್ರ ಸಂಪೂರ್ಣವಾಗಿ ಲಸಿಕೆಯನ್ನು ನೀಡಲು ಸಾಧ್ಯ. ವ್ಯಾಕ್ಸೀನ್ ತೆಗೆದುಕೊಳ್ಳಬೇಕಾದ ಜನಸಂಖ್ಯೆಯ ವಿಭಾಗದ ಕೊನೆಯ 20-30 ಪ್ರತಿಶತ ಜನರನ್ನು ತಲುಪುವುದು ಮತ್ತು ಮನವರಿಕೆ ಮಾಡುವುದು ಕಷ್ಟ. ಭಾರತದ ‘ಟ್ರಂಪ್ ಕಾರ್ಡ್’ ಎಂದು ಹೇಳಲಾದ ಕೋವಾಕ್ಸಿನ್ ಫ್ಲಾಪ್ ಶೋ ಆಗಿದೆ. ಕೋವಿಡ್ ಶೀಲ್ಟ್ ಪೂರೈಕೆಯು ಸಹ ಎಸ್ಐಐಯ ಘೋಷಿತ ಸಾಮರ್ಥ್ಯದ ಕನಿಷ್ಠ ಮಿತಿಯ ಮೂರನೇ ಎರಡರಷ್ಟು ಮಾತ್ರವಿದೆ. ವಿಶ್ವಸಂಸ್ಥೆಯ ಕೊವ್ಯಾಕ್ಸ್ ಕಾರ್ಯಕ್ರಮಕ್ಕೆ ರಫ್ತು ಬಾಧ್ಯತೆಗಳಿಂದಾಗಿ ಎಸ್ಐಐ ಪೂರೈಕೆಯಲ್ಲೂ ತೊಡಕುಗಳಾಗಬಹುದು. ಶಾಲೆಗಳು ಪುನರಾರಂಭಗೊಂಡ ನಂತರ ಆ ಮಕ್ಕಳ ಮನೆಗಳಲ್ಲಿನ ವಯಸ್ಸಾದವರಿಗೆ ದುರ್ಬಲರಿಗೆ ಆದ್ಯತೆ ಹಾಗೂ ‘ಉಪ-ರಾಷ್ಟ್ರೀಯ ಅಲೆ”ಯ ಪ್ರದೇಶಗಳಿಗೆ ಆದ್ಯತೆ ಮುಂತಾದ ಆದ್ಯತೆಗಳಲ್ಲಿನ ಸೂಕ್ಷ್ಮ ಮತ್ತು ತುರ್ತಿನ ಬದಲಾವಣೆಗಳನ್ನು ನಿಭಾಯಿಸುವ ದಕ್ಷತೆ ಲಸಿಕಾ ಕಾರ್ಯಕ್ರಮಕ್ಕೆ ಇದ್ದಂತೆ ಕಾಣುವುದಿಲ್ಲ. ಈ ವರೆಗಿನ ವೈಫಲ್ಯಗಳಿಂದ ಅದು ಪಾಠವನ್ನೂ ಕಲಿತಂತಿಲ್ಲ. ರಾಜಕೀಯ ಪ್ರಚಾರಕ್ಕೆ ಆದ್ಯತೆ ಮುಂದುವರೆದಿದೆ ಎಂದು ಲೇಖನ ವಾದಿಸುತ್ತದೆ.
ಭಾರತದಷ್ಟು ವಿಶಾಲವಾದ ಮತ್ತು ಸಂಕೀರ್ಣವಾದ ದೇಶದಲ್ಲಿ 100 ಕೋಟಿ ಲಸಿಕೆಗಳನ್ನು ಪೂರೈಸಿರುವುದು ಒಂದು ಸಾಧನೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಭಿಮಾನಿಗಳಂತೆ ಕೊಚ್ಚಿಕೊಳ್ಳುವ ಬದಲು, ಈ ‘ಸಾಧನೆ’ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕು. ಈ ವರ್ಷದ ಆರಂಭದಲ್ಲಿ ಕೊವಿಡ್-19 ಮಹಾಸಾಂಕ್ರಾಮಿಕದ ಬೃಹತ್ ಎರಡನೇ ಅಲೆಯ ಸ್ವಲ್ಪವೇ ಮೊದಲು, ಸರ್ಕಾರದೊಳಗಿನ ವಿಜಯೋತ್ಸವವನ್ನು ನೆನಪಿಸಿಕೊಳ್ಳಬೇಕು.
ಮೊದಲನೆಯದಾಗಿ, ಬರಿಯ ಸಂಖ್ಯೆಗಳು ನಮಗೆ ಸಂಪೂರ್ಣ ಚಿತ್ರಣ ನೀಡುವುದಿಲ್ಲ. ಭಾರತವು 100 ಕೋಟಿ (1 ಬಿಲಿಯನ್) ಲಸಿಕೆಗಳನ್ನು ವಿತರಿಸಿದೆ, ಆದರೆ ಇಡೀ ವಯಸ್ಕ ಜನಸಂಖ್ಯೆಗೆ ಎರಡು ಬಾರಿ ಲಸಿಕೆ ಹಾಕಲು ನಮಗೆ 187.8 ಕೋಟಿ ಡೋಸ್ಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನಾವು ಕೇವಲ ಶೇ 53ರಷ್ಟು ಗುರಿ ಸಾಧಿಸಿದ್ದೇವೆ. ಜನಸಂಖ್ಯೆಯ ಸುಮಾರು 75 ಪ್ರತಿಶತದಷ್ಟು ಜನರು ಒಂದು ಡೋಸ್ನೊಂದಿಗೆ ಲಸಿಕೆಯನ್ನು ಹೊಂದಿದ್ದಾರೆ; ಮತ್ತು ಶೇ.31 ರಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. ಇದರರ್ಥ ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ.
ತಿಂಗಳು | ಪ್ರತಿದಿನ ಸರಾಸರಿ (ಲಕ್ಷಗಳಲ್ಲಿ) | ತಿಂಗಳ ಹೆಚ್ಚಳ (ಶೇಕಡಾ ಗಳಲ್ಲಿ) |
ಜನವರಿ 2021 | 2.1 | |
ಫೆಬ್ರುವರಿ 2021 | 4.0 | 95.61 |
ಮಾರ್ಚ್ 2021 | 18.3 | 381.29 |
ಎಪ್ರಿಲ್ 2021 | 29.4 | 60.47 |
ಮೇ 2021 | 19.3 | -34.31 |
ಜೂನ್ (1-21) | 39.6 | 59.60 |
ಜುಲೈ 2021 | 42.8 | 8.08 |
ಅಗಸ್ಟ್ 2021 | 61.3 | 43.22 |
ಸೆಪ್ಟೆಂಬರ್ 2021 | 78.8 | 28.55 |
ಅಕ್ಟೋಬರ್ (1-20) | 55.5 | -29.57 |
ದೈನಿಕ ಸರಾಸರಿ ವ್ಯಾಕ್ಸಿನೇಶನ್ ( ಮೂಲ : CoWin)
ಮೋದಿ “ಹುಟ್ಟುಹಬ್ಬದ ಪರಿಣಾಮ“
ಎರಡನೆಯದಾಗಿ, ಕಳೆದ ಕೆಲವು ತಿಂಗಳುಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಏರಿದ್ದರೂ, ವಿಶೇಷವಾಗಿ ಮೇ ತಿಂಗಳಲ್ಲಿ ಈ ಪ್ರಮಾಣ ಕುಸಿದಾಗಿನಿಂದ, ಗಂಭೀರ ಅಸಮತೋಲನಗಳು ಮತ್ತು ಲಸಿಕೆ ವಿತರಣಾ ಸಂಖ್ಯೆಯಲ್ಲಿನ ಏರುಪೇರು ಆತಂಕಕ್ಕೆ ಕಾರಣವಾಗಿದೆ. ಉದಾಹರಣೆಗೆ, ಕೆಳಗಿನ ಚಾರ್ಟ್ ವಿವರಿಸಿದಂತೆ, ಭಾರತೀಯ ಲಸಿಕೆ ಅಭಿಯಾನಕ್ಕೆ ಸೆಪ್ಟೆಂಬರ್ ಉತ್ತಮ ತಿಂಗಳಾಗಿತ್ತು. ಸೆಪ್ಟೆಂಬರ್ 17 ರಂದು, ಮೋದಿಯವರ ಜನ್ಮದಿನದಂದು, 2.67 ಕೋಟಿ ಡೋಸ್ಗಳನ್ನು ವಿತರಿಸಲಾಯಿತು. ಆದರೆ ನಾವು “ಮೋದಿ ಹುಟ್ಟುಹಬ್ಬದ ಪರಿಣಾಮ” ವನ್ನು ತೆಗೆದುಹಾಕಿದರೆ, ಸೆಪ್ಟೆಂಬರ್ನ ಒಟ್ಟಾರೆ ದರವು ಸಾಧಾರಣವಾಗಿಯೇ ಕಂಡುಬರುತ್ತದೆ.
ವಾಸ್ತವವಾಗಿ, ನಾವು ಸೆಪ್ಟೆಂಬರ್ನ 30 ದಿನಗಳನ್ನು ಮೂರು ಸಮಾನ ಭಾಗಗಳಾಗಿ ವಿಭಜಿಸಿದರೆ, ಮೂರು ಹಂತಗಳಲ್ಲಿ ಸರಾಸರಿ ದೈನಂದಿನ ದರಗಳು ಹೀಗಿವೆ: ದಿನಕ್ಕೆ 76.7, 87.9 ಮತ್ತು 71.9 ಲಕ್ಷ ಡೋಸ್ಗಳು.
ಸೆಪ್ಟೆಂಬರ್ ಮಧ್ಯದಲ್ಲಿನ ಭಾರೀ ಸಾಂದ್ರತೆಯು “ಮೋದಿ ಹುಟ್ಟುಹಬ್ಬದ ಪರಿಣಾಮ” ಎಂದು ಹೇಳಬಹುದು.
ಹಿಂದಿನ ಸೀಮಿತ ಅವಧಿಯ ಉಬ್ಬರವೂ ಸಹ ಸರ್ಕಾರದ ಇಮೇಜ್ ಅನ್ನು ಹೆಚ್ಚಿಸುವ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನದ ಕಾರಣದಿಂದಾಗಿರಬಹುದು.
ಹೆಚ್ಚು ಆತಂಕಕಾರಿಯಾದ ಅಂಶವೆಂದರೆ, ಸೆಪ್ಟೆಂಬರ್ನಲ್ಲಿನ ದರಗಳಿಗೆ ಹೋಲಿಸಿದರೆ ಅಕ್ಟೋಬರ್ನ ಮೊದಲ ಮೂರು ವಾರಗಳಲ್ಲಿ ಸರಾಸರಿ ದೈನಂದಿನ ದರಗಳು ಸುಮಾರು 30 ಪ್ರತಿಶತದಷ್ಟು ಕುಸಿದಿದೆ.
ವಾಸ್ತವವಾಗಿ, ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವುದಾದರೆ ಪ್ರಸ್ತುತ ದೈನಂದಿನ ‘ರನ್ ರೇಟ್’ ಆಗಸ್ಟ್ನಲ್ಲಿ ಸಾಧಿಸಿದ ದರಗಳಿಗಿಂತ ಕಡಿಮೆಯಾಗಿದೆ. ಲಸಿಕೆ ಸಂಖ್ಯೆಗಳ ಏರುಪೇರು, ಭಾರತೀಯ ವಯಸ್ಕ ಜನಸಂಖ್ಯೆಗೆ ಅಗತ್ಯವಿರುವ ಸುಮಾರು ಅರ್ಧದಷ್ಟು ಲಸಿಕೆಗಳನ್ನು ಮಾತ್ರ ವಿತರಿಸಲಾಗಿದೆ ಎಂಬ ಮೊದಲ ಸಮಸ್ಯೆಯೊಂದಿಗೆ ಸೇರಿಕೊಂಡರೆ – ಇನ್ನೂ ಮಾಡಬೇಕಾದ ಕೆಲಸವು ಬಹಳ ಇದೆ ಎಂದು ಸೂಚಿಸುತ್ತದೆ.
ಸರಳವಾಗಿ ಹೇಳುವುದಾದರೆ, ಸಂಖ್ಯೆಗಳ ಆಧಾರದಲ್ಲಿ, ಇನ್ನೂ 87.8 ಕೋಟಿ ಡೋಸ್ ಅನ್ನು ಪೂರೈಸಬೇಕಾಗಿದೆ. ಅಕ್ಟೋಬರ್ನಲ್ಲಿನ ಪ್ರಸ್ತುತ ದರದಲ್ಲಿ (ದಿನಕ್ಕೆ 55.5 ಕೋಟಿ ಡೋಸ್ಗಳು), ಉಳಿದ ಡೋಸ್ಗಳನ್ನು ವಿತರಿಸಲು ಸುಮಾರು 160 ದಿನಗಳು ಬೇಕಾಗಬಹುದು. ಇದರರ್ಥ ಭಾರತವು ಪ್ರಸ್ತುತ ದರದಲ್ಲಿ ಲಸಿಕೆಯನ್ನು ನೀಡಿದರೆ ಎಲ್ಲಾ ವಯಸ್ಕರಿಗೆ ಏಪ್ರಿಲ್ 2022 ರ ವೇಳೆಗೆ ಮಾತ್ರ ಸಂಪೂರ್ಣವಾಗಿ ಲಸಿಕೆಯನ್ನು ನೀಡಲು ಸಾಧ್ಯ.
ಸುಲಭಸಾಧ್ಯ ಗುರಿಗಳನ್ನು ಈಗಾಗಲೇ ಸಾಧಿಸಲಾಗಿದೆ
ಆದರೆ ಹಲವಾರು ಇತರ ಅಂಶಗಳು ಈ ಚಿತ್ರವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ. ಸುಲಭಸಾಧ್ಯ ಗುರಿಗಳನ್ನು ಈಗಾಗಲೇ ಸಾಧಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ; ಲಸಿಕೆಗಳನ್ನು ವಿತರಿಸುವಲ್ಲಿ ಹೆಚ್ಚಿನ ಪ್ರಗತಿಯು, ವಿಶೇಷವಾಗಿ ಎರಡನೇ ಡೋಸ್ ವಿತರಣೆಯು, ಹೆಚ್ಚು ಹೆಚ್ಚು ಕಷ್ಟಕರವಾಗಿರುತ್ತದೆ. ಭಾರತದ ಅಗ್ರಗಣ್ಯ ಮತ್ತು ಗೌರವಾನ್ವಿತ ಲಸಿಕೆ ತಜ್ಞ ಡಾ.ಗಗನ್ದೀಪ್ ಕಾಂಗ್ ಅವರು ಇತ್ತೀಚಿನ ಒಂದು ಸಭೆಯಲ್ಲಿ ಹೇಳಿರುವಂತೆ, ವ್ಯಾಕ್ಸೀನ್ ತೆಗೆದುಕೊಳ್ಳಬೇಕಾದ ಜನಸಂಖ್ಯೆಯ ವಿಭಾಗದ ಕೊನೆಯ 20-30 ಪ್ರತಿಶತ ಜನರನ್ನು ತಲುಪುವುದು ಮತ್ತು ಮನವರಿಕೆ ಮಾಡುವುದು ಕಷ್ಟ. “ಇದು ಸಂಭ್ರಮಿಸುವ ಸಮಯ ಹೌದು, ಆದರೆ ಮುಂದೆ ಏನಾಗಲಿದೆಯೋ ಅದಕ್ಕೆ ತಯಾರಿ ಮಾಡುವ ಸಮಯವೂ ಆಗಿದೆ” ಎಂದು ಡಾ ಕಾಂಗ್ ಹೇಳಿದ್ದಾರೆ.
ಕಾಂಗ್ನಂತಹ ಕೆಲವು ತಜ್ಞರು ಈಗಾಗಲೇ ಸಾಂಕ್ರಾಮಿಕ ರೋಗವೆಂದು ನಿರೂಪಿಸಿರುವ ಈ ಸಾಂಕ್ರಾಮಿಕದ ಸ್ವರೂಪವು ಭಾರತದ ಲಸಿಕೆ ಆಂದೋಲನದ ಮೇಲೆ ಪರಿಣಾಮಗಳನ್ನು ಬೀರಬಹುದು. ಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಚಂದ್ರಕಾಂತ ಲಹರಿಯವರು ‘ದಿ ಫೆಡರಲ್’ ಆಯೋಜಿಸಿದ ಇತ್ತೀಚಿನ ಕಾರ್ಯಕ್ರಮ ದಲ್ಲಿ ಹೇಳಿದಂತೆ, ಹೆಚ್ಚಿದ “ನೈಸರ್ಗಿಕ” ರೋಗನಿರೋಧಕ ಶಕ್ತಿ ಮತ್ತು ಲಸಿಕೆ ಮೂಲಕ ನೀಡಲಾದ ಕೃತಕ ಪ್ರತಿರಕ್ಷೆಯ ಸಂಯೋಜನೆಗಳಿಂದಾಗಿ, ಭಾರತದಲ್ಲಿ ಮೊದಲ ಎರಡು ಅಲೆಗಳಂತೆ(2020 ಮತ್ತು 2021) ಹೊಸ ರಾಷ್ಟ್ರವ್ಯಾಪಿ ಅಲೆಯ ಸಂಭವನೀಯತೆ ಕಡಿಮೆ ಎಂದು ಸೂಚಿಸುತ್ತದೆ. ಇದು ಆಶಾದಾಯಕವೆಂದು ತೋರುತ್ತದೆಯಾದರೂ, ದೇಶದ ನಿರ್ದಿಷ್ಟ ಪಾಕೆಟ್ಗಳಲ್ಲಿ ಕೇಂದ್ರೀಕೃತವಾಗಿರುವ “ಉಪ-ರಾಷ್ಟ್ರೀಯ ಅಲೆಗಳ ” ಸಾಧ್ಯತೆಯನ್ನು ಇದು ತಳ್ಳಿಹಾಕುವುದಿಲ್ಲ ಎಂದು ಡಾ ಲಹರಿಯಾ ಎಚ್ಚರಿಸಿದ್ದಾರೆ. ಇದು ಒಂದು ಪ್ರಮುಖ ಸಮಸ್ಯೆಯನ್ನು ಹುಟ್ಟುಹಾಕುತ್ತದೆ: ಭಾರತೀಯ ಲಸಿಕೆ ಆಂದೋಲನವನ್ನು ಹೆಚ್ಚಾಗಿ ಕೇಂದ್ರ ಸರ್ಕಾರವು ನಿರ್ದೇಶಿಸಿದೆ ಮತ್ತು ನಡೆಸುತ್ತಿದೆ – ಆದರೆ ಹೆಚ್ಚಾಗಿ ರಾಜ್ಯಗಳು ಜಾರಿಗೆ ತಂದಿದೆ – ಮುಂದೆ ಹೆಚ್ಚು ಸ್ಥಳೀಯವಾಗಿ ಹೆಚ್ಚುವ ಸೋಂಕುಗಳ ಅಲೆಯಲ್ಲಿ ಬಲಿಯಾಗುವವರಿಗೆ ತ್ವರಿತವಾದ ಪರಿಹಾರ ಒದಗಿಸಲು ಅನುವು ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಲಸಿಕೆ ಪೂರೈಕೆಯಲ್ಲಿ ಅಸಮಾನತೆ
ಇಂತಹ ಆತಂಕಗಳು ಆಧಾರರಹಿತವಲ್ಲ. ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ನಂತಹ ಬಡ ರಾಜ್ಯಗಳು ಲಸಿಕೆ ನೀಡುವಲ್ಲಿ ಗಮನಾರ್ಹವಾಗಿ ಹಿಂದುಳಿದಿವೆ ಎಂದು ಭಾರತೀಯ ಲಸಿಕೆ ಆಂದೋಲನದ ವಿಶ್ಲೇಷಣೆಯು ತೋರಿಸುತ್ತದೆ. ವಾಸ್ತವವಾಗಿ, ತಮಿಳುನಾಡಿನಂತಹ ತುಲನಾತ್ಮಕವಾಗಿ ಹೆಚ್ಚು ಮುಂದುವರಿದ (ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ವಿಷಯದಲ್ಲಿ ಮಾತ್ರವಲ್ಲದೆ ಹೆಚ್ಚು ಸುಧಾರಿತ ಆರೋಗ್ಯ ಸೇವೆಗಳ ವಿತರಣಾ ಮೂಲಸೌಕರ್ಯಗಳ ವಿಷಯದಲ್ಲಿಯೂ ಸಹ) ರಾಜ್ಯವೂ ಸಹ, ಹಲವಾರು ಇತರ ಬಡ ರಾಜ್ಯಗಳಿಗಿಂತ ಹಿಂದುಳಿದಿದೆ. ಸ್ಥಳೀಯ “ಉಪ-ರಾಷ್ಟ್ರೀಯ ಅಲೆಗಳು” ಸಂಭವಿಸಿದಾಗ ಕೆಲವು ಭೌಗೋಳಿಕ ಪ್ರದೇಶಗಳು ಹೆಚ್ಚಿನ ಅಪಾಯದಲ್ಲಿದೆ ಎಂದು ಇದು ಸೂಚಿಸುತ್ತದೆ.
ಜನಸಂಖ್ಯೆಯ ನಿರ್ದಿಷ್ಟವಾಗಿ ದುರ್ಬಲ ವಿಭಾಗಗಳ ಕಡೆ ಗಮನ ಕೊಡುವ ಅಗತ್ಯವಿದೆ. ಉದಾಹರಣೆಗೆ, ಶಾಲೆಗಳ ದೀರ್ಘಾವಧಿಯ ಮುಚ್ಚುವಿಕೆಯಿಂದ ಭಾರತದ ಮಕ್ಕಳ ಮೇಲೆ ಹೇರಿದ ಅನ್ಯಾಯವು ಇನ್ನು ಮುಂದೆ ಸಮರ್ಥನೀಯವಲ್ಲ. ಡಾ ಲಹರಿಯಾ ಮತ್ತು ಇತರರು ಶಾಲೆಗಳನ್ನು ತೆರೆಯಬೇಕೆಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಏಕೆಂದರೆ ವೈಜ್ಞಾನಿಕ ಪುರಾವೆಗಳು ನಿರ್ಣಾಯಕವಾಗಿ ಮತ್ತು ಸ್ಪಷ್ಟವಾಗಿ ಮಕ್ಕಳಿಗೆ ಸೋಂಕಿನ ಅಪಾಯ ಬಹಳ ಕಡಿಮೆ ಎಂದು ತೋರಿಸಿವೆ. ಆದಾಗ್ಯೂ, ಶಾಲೆಗಳು ಪುನರಾರಂಭಗೊಂಡ ನಂತರ ಮಕ್ಕಳು ವೈರಸ್ ಅನ್ನು ಮನೆಗಳಿಗೆ ಒಯ್ಯಬಹುದು ಎಂಬ ಅಂಶವು ವಯಸ್ಸಾದವರಿಗೆ ಮತ್ತು ಮನೆಯಲ್ಲಿ ದುರ್ಬಲವಾಗಿರುವವರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ಹಾಕುವ ಅಗತ್ಯವಿದೆ ಎಂದು ಸೂಚಿಸುತ್ತದೆ.
ಇದಲ್ಲದೆ, ಮಕ್ಕಳ ಜನಸಂಖ್ಯೆಯ ಉಪ-ವರ್ಗದೊಳಗೆ ಸಹ, ಇತರ ಆರೋಗ್ಯ ಸಮಸ್ಯೆಗಳನ್ನು (ಡಯಬೀಟಿಸ್, ಉಸಿರಾಠದಲ್ಲಿ ತೊಂದರೆ ಇತ್ಯಾದಿ) ಹೊಂದಿರುವ ಮಕ್ಕಳಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆಯನ್ನು ನೀಡಬೇಕಾಗಬಹುದು ಎಂದು ಡಾ ಕಾಂಗ್ನಂತಹ ತಜ್ಞರು ಗಮನಸೆಳೆದಿದ್ದಾರೆ. ಆದರೆ ಉದ್ದೇಶಿತ ಜನಸಂಖ್ಯೆಯ ಆದ್ಯತೆಗಳಲ್ಲಿ ಈ ಸೂಕ್ಷ್ಮ ವ್ಯತ್ಯಾಸಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಭಾರತೀಯ ಲಸಿಕೆ ಆಂದೋಲನ ಹೊಂದಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಈ ಚಿತ್ರಣವು ಹಲವಾರು ಅಸಂಭಾವ್ಯಗಳಿಂದ ಮತ್ತಷ್ಟು ಜಟಿಲವಾಗಿದೆ. ಅಸ್ತಿತ್ವದಲ್ಲಿರುವ ಲಸಿಕೆಗಳಿಂದ ನೀಡಲಾಗುವ ರೋಗನಿರೋಧಕ ಶಕ್ತಿಯ ಪ್ರಮಾಣ ಮತ್ತು ಅವಧಿಯು ಪ್ರಮುಖ ಅಜ್ಞಾತಗಳಲ್ಲಿ ಒಂದಾಗಿದೆ. ಕೊವಿಡ್-19 ಮಹಾಸೋಂಕಿನ ಅತ್ಯಂತ ಗಂಭೀರ ಪರಿಣಾಮಗಳಿಂದ ಲಸಿಕೆಗಳು ರಕ್ಷಣೆ ನೀಡುತ್ತವೆ ಎಂದು ಎಲ್ಲಾ ಪುರಾವೆಗಳು ಇನ್ನೂ ಸೂಚಿಸುತ್ತವೆಯಾದರೂ, ರೋಗನಿರೋಧಕ ಶಕ್ತಿ ಎಷ್ಟು ಕಾಲ ಉಳಿಯುತ್ತದೆ ಎಂಬುದಕ್ಕೆ ಪುರಾವೆಗಳು ಇನ್ನೂ ನಿರ್ಣಾಯಕವಾಗಿಲ್ಲ.
ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಯು ಕನಿಷ್ಠ ಒಂದು ವರ್ಷದವರೆಗೆ ಸುರಕ್ಷಿತವಾಗಿರುತ್ತಾನೆ ಎಂದು ನಿರೀಕ್ಷಿಸಬಹುದು ಎಂದು ಡಾ ಲಹರಿಯಂತಹ ತಜ್ಞರು ನಮಗೆ ತಿಳಿಸುವುದು ಸಾಂತ್ವನ ಕೊಡಬಹುದಾಗಿದ್ದರೂ, ಲಸಿಕೆ ಉತ್ಪಾದನೆಯ ಪೂರೈಕೆಯ ಕುರಿತ ಆತಂಕಗಳನ್ನು ಕಡೆಗಣಿಸುವಂತಿಲ್ಲ.
ಮೊದಲನೆಯದಾಗಿ, ಜನಸಂಖ್ಯೆಯ ಗಮನಾರ್ಹ ಭಾಗಕ್ಕೆ ಎರಡು ಡೋಸುಗಳಿಂದ ದೊರೆಯುವ ಸಂಪೂರ್ಣ ರಕ್ಷಣೆ ಇನ್ನೂ ಸ್ವಲ್ಪ ದೂರದ ಮಾತು. ಎರಡನೆಯದಾಗಿ, ಅಕ್ಟೋಬರ್ 22 ರ ವೇಳೆಗೆ ಸುಮಾರು 29.2 ಕೋಟಿ ಜನರು ಎರಡನೇ ಡೋಸ್ ಅನ್ನು ಪಡೆದಿದ್ದಾರೆ, ಇಂದಿನಿಂದ ಒಂದು ವರ್ಷದೊಳಗೆ ಇದೇ ಸಂಖ್ಯೆಯ ಲಸಿಕೆಯನ್ನು ನೀಡಬೇಕಾಗಬಹುದು. ಇದರ ಅರ್ಥವೇನೆಂದರೆ, ಒಂದು ವರ್ಷದೊಳಗೆ, ಭಾರತವು ಈ ವರ್ಷ ಸಜ್ಜುಗೊಳಿಸಿದ ಅದೇ ಪ್ರಮಾಣದ ಲಸಿಕೆಗಳನ್ನು ಪೂರೈಸಬೇಕಾಗಬಹುದು. ಪೂರೈಕೆಗಳ ಪ್ರಮಾಣವು ಈಗಾಗಲೇ ಅಸ್ತಿತ್ವದಲ್ಲಿರುವ ಬ್ಯಾಕ್ಲಾಗ್ ಅನ್ನು ಸಹ ಒಳಗೊಂಡಿಲ್ಲ. ಹೀಗಾಗಿ ಕೇಳಬೇಕಾದ ಪ್ರಶ್ನೆಯೆಂದರೆ: ಭವಿಷ್ಯದಲ್ಲಿ ಬಹುಶಃ ಬೇಕಾಗಬಹುದಾದ ಪೂರೈಕೆಗಳನ್ನು ಭಾರತ ಸರ್ಕಾರ ಪಡೆದುಕೊಂಡಿದೆಯೇ? ಅಥವಾ,ಈಗಿನ ಸುತ್ತಿನ ಲಸಿಕೆಗಾಗಿ ಸಾಕಷ್ಟು ಸರಬರಾಜುಗಳನ್ನು ಪಡೆಯಲು ಸಾಕಷ್ಟು ತ್ವರಿತವಾಗಿ ಕಾರ್ಯನಿರ್ವಹಿಸದಿರುವ ತನ್ನ ವೈಫಲ್ಯದಿಂದ ಕಲಿಯಲು ವಿಫಲವಾಗುತ್ತದೆಯೇ? ಎರಡನೇ ತಲೆಮಾರಿನ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಭಾರತದ ಸನ್ನದ್ಧತೆಯ ಬಗ್ಗೆ ನಾವು ಇನ್ನೂ ಚರ್ಚಿಸುತ್ತಿಲ್ಲ ಎಂಬುದು ನೆನಪಿರಲಿ.
ಕೋವಾಕ್ಸಿನ್ ಫ್ಲಾಪ್ ಶೋ
ಸ್ವಪ್ರಶಂಸೆಯ ಭಂಡ ತೋರಿಕೆಯ ಹೊರತಾಗಿಯೂ, ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು ಅದರ ದುರ್ಬಲತೆಯಾಗಿದೆ. ಇದಕ್ಕೆ ಸರಳ ಕಾರಣವೆಂದರೆ ಒಂದೇ ಮೂಲದಿಂದ ಸರಬರಾಜು ಮಾಡಲಾದ ಒಂದು ಲಸಿಕೆಯ ಮೇಲೆ ಅಗಾಧವಾದ ಅವಲಂಬನೆಯಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ).
ಈ ಕಂಪನಿಯ ಲಸಿಕೆಯಾದ ಕೋವಿಶೀಲ್ಡ್, ಇದುವರೆಗೆ ಭಾರತೀಯರಿಗೆ ತಲುಪಿಸಲಾದ 88 ಪ್ರತಿಶತದಷ್ಟು ಪ್ರಮಾಣ ಹೊಂದಿದೆ. ಗಮನಾರ್ಹವಾದ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ದೇಸೀ ಲಸಿಕೆಯಾದ ಕೋವಾಕ್ಸಿನ್ ಹಿಂದುಳಿದಿದೆ.
ಹಲವಾರು ಸುಳ್ಳು ಭರವಸೆಗಳ ನಂತರವೂ ಕೋವಾಕ್ಸಿನ್ ಉತ್ಪಾದನೆಯು ನಿರೀಕ್ಷಿತ ದರದಲ್ಲಿ ಹೆಚ್ಚಿಲ್ಲ.
ಸೆಪ್ಟೆಂಬರ್ನಲ್ಲಿ, ಕೋವಾಕ್ಸಿನ್ನ ದೈನಂದಿನ ವಿತರಣೆಗಳು ಅತ್ಯಲ್ಪ 7.88 ಲಕ್ಷ ಡೋಸ್ಗಳಾಗಿವೆ;
ಅಕ್ಟೋಬರ್ನಲ್ಲಿ ಇಲ್ಲಿಯವರೆಗೆ, ಇದು 5.85 ಲಕ್ಷಕ್ಕೆ ಇಳಿದಿದೆ. ಇದು ಶೇಕಡಾ 25 ಕ್ಕಿಂತ ಹೆಚ್ಚು ಕುಸಿತವಾಗಿದೆ.
ಆಗಸ್ಟ್ 2 ರಂದು, ಈ ಬರಹಗಾರ ಸಹ ಭಾಗವಹಿಸಿದ ಟಿವಿ ಶೋನಲ್ಲಿ ಭಾಗವಹಿಸುವಾಗ, ಎನ್.ಕೆ.ಅರೋರಾ, ಅಧ್ಯಕ್ಷರು, ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು, ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಗಮನಾರ್ಹವಾದ ‘ಉತ್ಪಾದನೆಯಲ್ಲಿ ಹೆಚ್ಚಳ” ಸನ್ನಿಹಿತವಾಗಿದೆ ಎಂದು ಭರವಸೆ ನೀಡಿದರು;
ಕೋವಾಕ್ಸಿನ್ ಸರಬರಾಜು ತಿಂಗಳಿಗೆ 10ರಿಂದ 12 ಕೋಟಿಗೆ ಹೆಚ್ಚಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಆದರೆ ಸೆಪ್ಟೆಂಬರ್ನಲ್ಲಿ, ಅಕ್ಟೋಬರ್ನಲ್ಲಿ ಹಿಂದಿನ 1.8 ಕೋಟಿ ಯೋಜಿತ ಪೂರೈಕೆಗಳಿಗೆ ಹೋಲಿಸಿದರೆ, ಒಟ್ಟು ಕೇವಲ 2.4 ಕೋಟಿ ಲಸಿಕೆಗಳನ್ನು ವಾಸ್ತವವಾಗಿ ವಿತರಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆ “ಉಬ್ಬರದಂತಹ ಹೆಚ್ಚಳ” ಕಾರ್ಯರೂಪಕ್ಕೆ ಬರಲು ನಾವು ಇನ್ನೂ ಕಾಯುತ್ತಿದ್ದೇವೆ.
ಕೋವಿಡ್ ಶೀಲ್ಡ್ ಪೂರೈಕೆಯಲ್ಲೂ ತೊಡಕುಗಳು
ಏತನ್ಮಧ್ಯೆ, ಈ ಮಸುಕಾದ ಸನ್ನಿವೇಶದಲ್ಲಿ ಏಕೈಕ ಬೆಳ್ಳಿ ರೇಖೆಯೆಂದರೆ, ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒ ಆದರ್ ಪೂನಾವಾಲಾ ಅವರು ಭರವಸೆ ನೀಡಿದ ಸಾಮರ್ಥ್ಯಗಳನ್ನು ತಲುಪಿದ ಹಾಗೆ ಕಾಣುತ್ತಿದೆ. ಕೋವಿಶೀಲ್ಡ್ನ ವಿತರಣೆಗಳು ಪ್ರತಿ ತಿಂಗಳು 22.0-24.0 ಕೋಟಿ ಡೋಸ್ ಆಗುತ್ತವೆ ಎಂದು ಎಸ್ಐಐ ಹೇಳಿಕೊಂಡ ಸಾಮರ್ಥ್ಯಗಳಿಗೆ ಹತ್ತಿರದಲ್ಲಿವೆ.
ಸೆಪ್ಟೆಂಬರ್ನಲ್ಲಿ, 21.3 ಕೋಟಿ ಡೋಸ್ಗಳನ್ನು ವಿತರಿಸಲಾಯಿತು, ಆದರೆ ಅಕ್ಟೋಬರ್ನಲ್ಲಿ ವಿತರಣೆ ನಿಧಾನವಾಯಿತು. ಪ್ರತಿರಕ್ಷಣೆ ಕೇಂದ್ರಗಳಲ್ಲಿ ಕೋವಿಶೀಲ್ಡ್ ವಿತರಣೆಯು ಸೆಪ್ಟೆಂಬರ್ನಲ್ಲಿ ದೈನಂದಿನ ಸರಾಸರಿ 70.9 ಲಕ್ಷ ಡೋಸ್ಗಳಿಂದ ದಿನಕ್ಕೆ ಸುಮಾರು 47.0 ಲಕ್ಷ ಡೋಸ್ಗಳಿಗೆ ಇಳಿದಿದೆ. ಈ ದರದಲ್ಲಿ, ಅಕ್ಟೋಬರ್ನಲ್ಲಿ ಎಸ್ಐಐ ನ ಕೋವಿಶೀಲ್ಡ್ ವಿತರಣೆಗಳು ಕೇವಲ 14.6 ಕೋಟಿ ಡೋಸ್ಗಳಾಗಿವೆ.
ಈ ಮಟ್ಟದ ಪೂರೈಕೆಯು ಎಸ್ಐಐ ಯ ಘೋಷಿತ ಸಾಮರ್ಥ್ಯದ ಕನಿಷ್ಠ ಮಿತಿಯ ಮೂರನೇ ಎರಡರಷ್ಟು ಮಾತ್ರ.
ಸೀರಮ್ ಇನ್ಸ್ಟಿಟ್ಯೂಟ್ನಿಂದ ಆಗುವ ಸರಬರಾಜುಗಳಿಗೆ ಮತ್ತೊಂದು ತೊಡಕು ಸಹ ಕಾಡುತ್ತಿದೆ. ಇದು ಈಗಾಗಲೇ ಹಣವನ್ನು ಪಡೆದಿರುವ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ಕೊವ್ಯಾಕ್ಸ್ ಸೌಲಭ್ಯಕ್ಕೆ ಅದರ ಬಾಕಿ ಉಳಿದಿರುವ ಬದ್ಧತೆಗಳು. ವಾಸ್ತವವಾಗಿ, ಕೊವ್ಯಾಕ್ಸ್ ನಿಂದ ಧನಸಹಾಯವು ಎಸ್ಐಐ ಗೆ ಕೊವಿದ್ ಲಸಿಕೆ ಸಾಮರ್ಥ್ಯಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿತು. ಏಕೆಂದರೆ ಮೋದಿ ಸರ್ಕಾರವು ಆ ಸಮಯದಲ್ಲಿ ಭಾರತೀಯ ಜನಸಂಖ್ಯೆಗೆ ಲಸಿಕೆ ಹಾಕಲು ನಿರ್ಧರಿಸಿರಲಿಲ್ಲ. ಅದು ಒಪ್ಪಂದದ ಬಾಧ್ಯತೆಗಳ ಉಲ್ಲಂಘನೆಯಾಗುವುದರಿಂದ ಕೊವ್ಯಾಕ್ಸ್ ಗೆ ಸರಬರಾಜುಗಳನ್ನು ಮುಂದೂಡುವ ಆಯ್ಕೆಯು ಎಸ್ಐಐ ಗೆ ಅನಿರ್ದಿಷ್ಟವಾಗಿ ಲಭ್ಯವಾಗಿಲ್ಲ. ಈ ದೃಷ್ಟಿಕೋನದಿಂದ ನೋಡಿದಾಗ, ಮೋದಿ ಸರ್ಕಾರವು ವಿಶ್ವದ ಬಡ ದೇಶಗಳ ಸಂರಕ್ಷಕನೆಂದು ಪೋಸು ಕೊಡುವುದು ನಗು ತರಿಸುತ್ತದೆ.
ಮಕ್ಕಳಿಗಾಗಿ ಲಸಿಕೆಗಳನ್ನು ಅಧಿಕೃತಗೊಳಿಸುವ ಇತ್ತೀಚಿನ ಕ್ರಮಗಳು ಮೋದಿ ಆಡಳಿತವು ತನ್ನ ತಪ್ಪುಗಳಿಂದ ಅಷ್ಟೇನೂ ಕಲಿತಿಲ್ಲ ಎಂಬುದನ್ನು ತೋರಿಸುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಲಸಿಕೆಗಳ ತೀವ್ರ ಕೊರತೆಯ ನಡುವೆ, ಸರ್ಕಾರವು 18-45 ವಯೋಮಾನದವರಿಗೆ ವ್ಯಾಪ್ತಿಯನ್ನು ವಿಸ್ತರಿಸಿದ್ದಲ್ಲದೆ, ಅದರ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ನಾಟಕೀಯ ಬದಲಾವಣೆಗಳನ್ನು ತಂದಿತು, ಇದು ಅದರ ಬದ್ಧತೆಯಾದ ದೀರ್ಘಕಾಲದ ಮತ್ತು ಯಶಸ್ವಿ ಸಾರ್ವತ್ರಿಕ ಮತ್ತು ಉಚಿತ ವ್ಯಾಪ್ತಿಯನ್ನು ಆಧರಿಸಿದ ರೋಗನಿರೋಧಕ ಕಾರ್ಯಕ್ರಮದಿಂದ ಗಮನಾರ್ಹ ವಿಚಲನವಾಗಿತ್ತು.
ತರುವಾಯ, ಅನೇಕ ರೋಲ್ಬ್ಯಾಕ್ಗಳನ್ನು ಮಾಡಲಾಗಿದ್ದರೂ, ಆ ವೈಫಲ್ಯದ ಪಾಠಗಳನ್ನು ಕಲಿಯಬೇಕಾಗಿದೆ.
ಮಕ್ಕಳಿಗೆ ಲಸಿಕೆಯನ್ನು ಪರಿಚಯಿಸುವ ಕ್ರಮವು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿಲ್ಲ ಅಥವಾ ಆದ್ಯತೆಗಳ ತರ್ಕಬದ್ಧ ಕ್ರಮಕ್ಕೆ ಅನುಗುಣವಾಗಿಲ್ಲ. ಬದಲಾಗಿ, ಕೊವಾಕ್ಸಿನ್ ಅನ್ನು ‘ಟ್ರಂಪ್ ಕಾರ್ಡ್’ ಎಂದು ಹೇಳಲಾಗಿತ್ತು. ಆದರೆ ಅದು. ಪ್ಯಾಕ್ ನಲ್ಲಿ ಇರುವ ಜೋಕರ್ ಮಾತ್ರ ಎಂದು ಸಾಬೀತಾಗಿದೆ, ಅದರ ಬದ್ಧತೆಗಳನ್ನು ತಪ್ಪಿಸಲು ಮತ್ತು ಈ ಸಮಯದಲ್ಲಿ ದೇಶಕ್ಕೆ ಅಗತ್ಯವಿಲ್ಲದ ಉತ್ಪನ್ನಗಳ ವರ್ಗದಲ್ಲಿ ಅದರ ಸರಕುಗಳನ್ನು ಪ್ರಚಾರ ಮಾಡಲು ಅನುಮತಿಸಲಾಗುತ್ತಿದೆ.
ಅನುವಾದ : ಶೃಂಶಾನಾ