ಉಪ ಚುನಾವಣೆ ಫಲಿತಾಂಶ : ʻಕೈʼ ತೆಕ್ಕೆಗೆ ಹಾನಗಲ್‌, ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

ಹಾವೇರಿ/ ಬೆಂಗಳೂರು : ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವಿನ ಓಟ ನಡೆಸಿದ್ದಾರೆ. ಹಾನಗಲ್ ಕ್ಷೇತ್ರವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿದ್ದರಿಂದ ಈ ಚುನಾವಣೆ ಅವರಿಗೂ ಪ್ರತಿಷ್ಠೆಯ ಕಣವಾಗಿತ್ತು.‌ ಆದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹಾನಗಲ್ ನಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸುವತ್ತ ಮುನ್ನಡೆದಿದ್ದಾರೆ.

ಮತ ಎಣಿಕೆ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಶ್ರೀನಿವಾಸ ಮಾನೆ ಹದಿನಾರನೇ ಸುತ್ತಿನ ಬಳಿಕವೂ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್​ 78,342, ಬಿಜೆಪಿ 71,326 ಮತ ಪಡೆದಿವೆ. ಅಂತಿಮ ಸುತ್ತು ಬಾಕಿ ಇದ್ದು. 7 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವ ಮಾನೆಯವರು ಗೆಲವು ಖಚಿತವಾಗುವ ಸಾಧ್ಯತೆ ಇದೆ.

ಹಾನಗಲ್ ಕ್ಷೇತ್ರದಲ್ಲಿ ಜನಬಲ ಗೆದ್ದಿದೆ. ಹಣ ಬಲ ಸೋತಿದೆ. ಹಾನಗಲ್ ಜನರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿದ್ದಾರೆ. ನಮ್ಮ ನಾಯಕರು ಪರಿಶ್ರಮ ಹಾಕಿದ್ದಾರೆ. ಸರ್ಕಾರದ ತಂತ್ರ ಮಣಿಸಿದ್ದಾರೆ. ಜನರು ಸರ್ಕಾರದ ಜನವಿರೋಧಿ ನೀತಿ. ದುರಾಡಳಿತ ತಿರಸ್ಕಾರ ಮಾಡಿದ್ದಾರೆ.  ಜನ ನನಗೆ ಹರಿಸಿದ್ದಾರೆ. ಖಂಡಿತಾ ಅವರ ಆಸೆಗಳನ್ನು ಈಡೇರಿಸುವ ಕೆಲಸ ಮಾಡುವೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆಲವಿನ ಸಮೀಪದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಇದನ್ನೂ ಓದಿ : ಸಿಂದಗಿಯಲ್ಲಿ ಅರಳಿದ ಕಮಲ, ನಡೆಯದ ʻಕೈʼ ಕಸರತ್ತು, ಬಾಡಿದ ತೆನೆ

ಹಾನಗಲ್ ಜನತೆ ಬಿಜೆಪಿ ಆಡಳಿತ ಸಾಕು ಎಂದಿದ್ದಾರೆ – ಡಿ.ಕೆ.ಶಿವಕುಮಾರ್​ : ಹಾನಗಲ್ ಜನತೆ ಬಿಜೆಪಿ ಆಡಳಿತ ಸಾಕು ಎಂದಿದ್ದಾರೆ. ಇದು ಸಿಎಂ, ರಾಜ್ಯ ಬಿಜೆಪಿಗೆ ಆಗಿರುವ ಮುಖಭಂಗ. ಮತದಾರರು ಕಾಂಗ್ರೆಸ್ ಕಡೆ ನೋಡ್ತಿದ್ದಾರೆ. ಕೆಲವರಿಗೆ ಪರ್ಸನಲ್ ಅಜೆಂಡಾ ಇರತ್ತದೆ. ಒಂದೇ ಕ್ಷೇತ್ರಕ್ಕೆ ಬಹಳ ಜನ ಆಕಾಂಕ್ಷಿಗಳಿರುತ್ತಾರೆ. ಮುಖ್ಯಮಂತ್ರಿ ಹೇಳಿದ್ದಾರಲ್ಲ ಫಲಿತಾಂಶ ಬಂದರೆ ಏನು ಅಂತ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ನಿವಾಸದಲ್ಲಿ ಜೈಕಾರ : ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಕೈ ಕಾರ್ಯಕರ್ತರು, ಮುಖಂಡರು ಆಗಮಿಸುತ್ತಿದ್ದಾರೆ. ಸಿದ್ದರಾಮಯ್ಯ ನಿವಾಸದಲ್ಲಿ ಸಿದ್ದರಾಮಯ್ಯಗೆ ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. ಜತೆಗೆ ಶ್ರೀನಿವಾಸ ಮಾನೆಗೂ ಜೈಕಾರ ಹಾಕಿದ್ದಾರೆ. ಅಲ್ಲದೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೈಕಾರ ಕೂಗಿದ್ದಾರೆ.  ಹಾನಗಲ್‌ ನಲ್ಲಿ ಗೆಲವು ದಾಖಲಿಸಿದ್ದೇವೆ.  ಸಿಂದಗಿಯಲ್ಲಿ ದೊಡ್ಡ ಅಂತರದಲ್ಲಿ ಸೋತಿದ್ದೇವೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ 3ನೇ ಸ್ಥಾನದಲ್ಲಿ ಇತ್ತು. ಆದರೆ ಈ ಬಾರಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದು ಸಮಾಧಾನ. ಆದರೆ ಸೋಲು ಸೋಲೇ. ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರಿಗೆ ಬೇಸರವಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಬೇಸತ್ತಿದ್ದಾರೆ. ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಂಡರು. ಆದರೂ ಜನರು ಈಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ಈ ಉಪಚುನಾವಣೆ ಫಲಿತಾಂಶದಿಂದ ಅದು ಸ್ಪಷ್ಟವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ. ಉಪಚುನಾವಣೆಗಳು ಯಾವ ಚುನಾವಣೆಗೂ ದಿಕ್ಸೂಚಿ ಅಲ್ಲ. ಆದರೆ ಇದು ಎಚ್ಚರಿಕೆಯ ಗಂಟೆ ಎಂದ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *