ಕೋಲಾರ : ಜಿಲ್ಲೆಯ ಮಾಲೂರು ತಾಲ್ಲೂಕಿನ ಮೈಲಾಂಡಹಳ್ಳಿ ಗ್ರಾಮದಲ್ಲಿ ದಲಿತರಿಗೆ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಿದ ಕಾರಣ ಪೂಜೆ ಸಲ್ಲಿಸದೆ ಮಹಿಳೆಯರು ದೇವಾಲಯದಿಂದ ಹೊರಬಂದ ಘಟನೆ ನಡೆದಿದೆ.
ದೀಪೋತ್ಸವ ವೇಳೆ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಮಾಲೂರು ತಾಲ್ಲೂಕಿನ ಮೈಲಾಂಡಹಳ್ಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಗ್ರಾಮದ ಚೌಡೇಶ್ವರಿ ದೇಗುಲಕ್ಕೆ ನಮಗೆ ಪ್ರವೇಶ ನೀಡಿಲ್ಲ ಎಂದು ಮೈಲಾಂಡಹಳ್ಳಿ ಗ್ರಾಮದ ದಲಿತರು ಬೇಸರ ವ್ಯಕ್ತಪಡಿಸಿದ್ದಾರೆ. ದೀಪೋತ್ಸವ ಹಿನ್ನೆಲೆಯಲ್ಲಿ ದಲಿತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅವರನ್ನು ದೇಗುಲ ಪ್ರವೇಶಿಸದಂತೆ ಸವರ್ಣೀಯರು ತಡೆದಿದ್ದರು.
ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಈ ಸಂದರ್ಭದಲ್ಲಿ ಗ್ರಾಮದ ಸವರ್ಣೀಯರಾದ ನಾರಾಯಣಗೌಡ, ಸೀನಪ್ಪ ಹಾಗೂ ದಲಿತ ತಿಮ್ಮರಾಯಪ್ಪ ನಡುವೆ ಮಾತಿನ ಚಕಮಕಿ ನಡಯಿತು. ಗ್ರಾಮದ ಹಿರಿಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂತು. ನಂತರ ದೇವಸ್ಥಾನ ಪ್ರವೇಶಕ್ಕೆ ಮುಖಂಡರು ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ : ಶ್ರೀರಾಮನ ದೇಗುಲಕ್ಕೆ ಭೇಟಿ ನೀಡಿದ್ದ ದಲಿತ ಕುಟುಂಬದ ಮೇಲೆ 20 ಜನರಿಂದ ಹಲ್ಲೆ, ಬೆಳೆ ನಾಶ ಪಡಿಸಿದ ಧುರುಳರು
ರಾಜ್ಯದಲ್ಲಿ ದಿನನಿತ್ಯ ದೇವಸ್ಥಾನಕ್ಕೆ ದಲಿತರು ಪ್ರವೇಶ ಮಾಡದಂತೆ, ಕ್ಷೌರ ಮಾಡಿಸಿಕೊಳ್ಳದಂತೆ ದೌರ್ಜನ್ಯ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಅನೇಕ ಗ್ರಾಮಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ದಲಿತರನ್ನು ಅವಮಾನಿಸದಂತೆ, ದೌರ್ಜನ್ಯ ನಡೆಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ.