ಜಮೀನು ಅತಿಕ್ರಮಣ ಆರೋಪ : ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್, ಪುತ್ರರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ : ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ‌ ಶ್ರೀಮಂತ್ ಪಾಟೀಲ್ ವಿರುದ್ಧ 10 ಎಕರೆ ಜಮೀನು ಅತಿಕ್ರಮಣ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನಿಸಲು ಮುಂದಾದ ಜಮೀನು ಮಾಲೀಕನಿಗೆ ಶಾಸಕರ ಪುತ್ರರಿಂದ ಜೀವ ಬೆದರಿಕೆ ಬಂದ ಹಿನ್ನೆಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಶಾಸಕ ಸೇರಿ ಮೂವರು ಪುತ್ರರ ವಿರುದ್ಧ ದೂರು ದಾಖಲಾಗಿದೆ.

ದೇವದಾಸ ದೊಂಡಿಬಾ ಶೇರಖಾನೆ ಎಂಬುವವರ 61/1 ಹಾಗೂ 61/3 ಜಮೀನಿನಲ್ಲಿ ಶಾಸಕ ಶ್ರೀಮಂತ ಪಾಟೀಲ ಗೊಬ್ಬರ ಕಾರ್ಖಾನೆ ನಿರ್ಮಿಸಿ ಹಾಗೂ ಕೆರೆ ನಿರ್ಮಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಘಟನೆ ಹಿನ್ನಲೆ : ದೇವದಾಸ್ ಎಂಬುವವರಿಗೆ ಸೇರಿದ್ದ 10ಎಕರೆ ಜಮೀನನ್ನು ಶಾಸಕ ಶ್ರೀಮಂತ ಪಾಟೀಲ ಅತಿಕ್ರಮಣ ಮಾಡಿಕೊಂಡು ಗೊಬ್ಬರ ಕಾರ್ಖಾನೆ, ಕೆರೆ ನಿರ್ಮಾಣ ಮಾಡಿದ್ದಾರಂತೆ. ಇದಲ್ಲದೇ ಕೆಂಪವಾಡ ಗ್ರಾಮಕ್ಕೆ ಸೇರಿದ ಸುಮಾರು 40ಎಕರೆ ಗಾಯರಾಣ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಜಮೀನು ಅತಿಕ್ರಮಣ ಬಗ್ಗೆ ಪ್ರಶ್ನಿಸಲು ಮುಂದಾದ ದೇವದಾಸ್ ಮೇಲೆ ಶಾಸಕರು ತಮ್ಮ ಬೆಂಬಲಿಗರು ಹಾಗೂ ಪುತ್ರರ ಮುಕೇನ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಮತ್ತವರ ಪುತ್ರರ ಸೂಚನೆ ಮೇರೆಗೆ ಆಶೀಶ ಗಜಾನನ ಪಾಟೀಲ ನೇತೃತ್ವದಲ್ಲಿ ಬಂದ ಕೆಲವರು ನಮ್ಮ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ಜಾತಿ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಜಮೀನು ಬಿಟ್ಟು ಹೋಗದಿದ್ದರೆ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ – ದೇವದಾಸ್ – ಜಮೀನು ಮಾಲಕ

ಸದ್ಯ ಜಮೀನು ಕಳೆದುಕೊಂಡು ಕಂಗಾಲಾಗಿರುವ ಜಮೀನು ಮಾಲೀಕರು ಕಾಗವಾಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌ ದೂರಿನ ಮೇರೆಗೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಪುತ್ರರಾದ ಶ್ರೀನಿವಾಸ್ ಪಾಟೀಲ, ಯೋಗೇಶ ಶ್ರೀಮಂತ್ ಪಾಟೀಲ ಹಾಗೂ ಬೆಂಬಲಿಗರಾದ ರಾಹುಲ್ ಚವ್ಹಾಣ, ಸುರೇಶ ಪಾಟೀಲ, ಶಶಿಕಾಂತ ಪಾಟೀಲ ಸೇರಿದಂತೆ ಒಟ್ಟು 8ಕ್ಕೂ ಹೆಚ್ಚಿನ ಜನರ ಮೇಲೆ ಕಾಗವಾಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *