ಬೆಂಗಳೂರು: ಸಿಂದಗಿಯ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತದಾನ ಪ್ರಕ್ರಿಯೆಗೆ ಇನ್ನೆರಡು ದಿನ ಮಾತ್ರ ಬಾಕಿ ಇದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಬಿಜೆಪಿ ಪಕ್ಷವು ಕೊನೆ ಹಂತದ ಆಟ ಆಡಲು ಶುರು ಮಾಡಿದೆ. ಪ್ರತಿ ಹಳ್ಳಿಗೆ 30-40 ಲಕ್ಷ ಹಂಚಿಕೆ ಮಾಡುತ್ತಿದೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ʻʻಈ ಕೃತ್ಯದಲ್ಲಿ ಖುದ್ದು ಸಚಿವರೇ ತೊಡಗಿರುವ ಮಾಹಿತಿ ಬಂದಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಕೆಲಸ ನಡೆದಿದೆ” ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
“ವಸತಿ ಸಚಿವ ವಿ. ಸೋಮಣ್ಣ ಹೇಳಿದಂತೆಯೇ ಆಗುತ್ತಿದೆ. ನಿನ್ನೆಯಿಂದ ಸಚಿವರಾದ ವಿ.ಸೋಮಣ್ಣ, ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಮಂದಿ ಸಚಿವರು ಕ್ಷೇತ್ರದ ಸಮೀಪವಿರುವ ರೆಸಾರ್ಟ್ನಲ್ಲಿಯೇ ಉಳಿದುಕೊಂಡಿದ್ದಾರೆ. ಕೊನೆಯ ಹಂತದಲ್ಲಿ ಹಣ ಹಂಚುವ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಉಪಚುನಾವಣೆ: ಹಾನಗಲ್-ಸಿಂಧಗಿ ಕ್ಷೇತ್ರಗಳಿಗೆ ಅ.30ರಂದು ಮತದಾನ
“ಇವತ್ತು ಸಾಯಂಕಾಲದ ತನಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಿಂಧಗಿಯಲ್ಲಿ ಫ್ರೀ ಆಗಿ ಬಿಟ್ಟುಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ” ಎಂದು ಬುಧವಾರ ಸಚಿವ ಸೋಮಣ್ಣ ನೀಡಿದ್ದ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ “ನಾಳೆಯಿಂದ ನಮ್ಮ ಆಟ ಆರಂಭ ಎಂದರೆ ಅರ್ಥವೇನು? ಆಟ ಎಂದರೆ ದುಡ್ಡು ಹಂಚುವುದಾ?” ಎಂದು ಪ್ರಶ್ನಿಸಿದ್ದರು.
ಕೆಲ ಹಳ್ಳಿಗಳಲ್ಲಿ ಐದರಿಂದ ಆರು ಮತಗಟ್ಟೆಗಳಿವೆ. ಅಂದರೆ ಪ್ರತೀ ಮತಗಟ್ಟೆಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ ಹಾಗೂ ಒಂದು ಮತಕ್ಕೆ 1,000 ರೂ. ನಿಗದಿಯಾಗಿದೆ ಎಂದಾಯಿತು. ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರಕಾರ ರಚನೆ ಮಾಡಿದ ಮೇಲೆ ಎಲ್ಲ ಚುನಾವಣೆಗಳನ್ನು ಗೆದ್ದಿರುವುದು ಹಣದ ಹೊಳೆ ಹರಿಸಿಯೇ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇದನ್ನು ಓದಿ: ಉಪಚುನಾವಣೆ : ಜಾತಿ, ಹಣ ಬಲದ್ದೆ ಆಟ, ಮೌನಕ್ಕೆ ಶರಣಾದ ಚುನಾವಣಾ ಆಯೋಗ
ಈ ಹಿಂದೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಸರಕಾರಿ ಅಧಿಕಾರಿಯ ಕಾರಿನಲ್ಲೇ ಹಣ ಸಿಕ್ಕಿಬಿತ್ತು. ಆ ಹಣ ಸಿಕ್ಕಿದ್ದು ಗುಂಡ್ಲುಪೇಟೆಯಲ್ಲಿ. ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಕಾಂಗ್ರೆಸ್ ಪಕ್ಷದವರು ಮಾಡಿದ ತಂತ್ರಗಾರಿಕೆಯನ್ನು ಈಗ ಬಿಜೆಪಿಯವರು ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಹಣ ಬಲದಿಂದ ಚುನಾವಣೆ ಗೆಲ್ಲಬೇಕು ಎಂದು ಹೊರಟಿವೆಯೇ ವಿನಾ ಅಭಿವೃದ್ಧಿಯಿಂದಲ್ಲ ಎಂದ ಅವರು, ಕ್ಷೇತ್ರದ ಜನರಿಗೆ ನಾವು ಅಭಿವೃದ್ಧಿ ವಿಷಯಗಳನ್ನಷ್ಟೇ ಹೇಳಿದ್ದೇವೆ. ಆ ಮೂಲಕ ನಾವು ಸಿಂದಗಿ ಕ್ಷೇತ್ರದಲ್ಲಿ ಜಯ ಸಾಧಿಸುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.