ಮಡಿಕೇರಿ: ಕೋವಿಡ್ ಸೋಂಕು ಕಡಿಮೆಯಾಗುತ್ತಿದೆ ಎಂದು ಸರ್ಕಾರವು ಶಾಲಾ ಕಾಲೇಜು ಆರಂಭ ಮಾಡಿದೆ. ಇತ್ತ ಶಾಲೆಗಳು ಆರಂಭವಾಗುತ್ತಿದ್ದಂತೆ ಕೊಡಗಿನ ನವೋದಯ ಶಾಲೆಯ 31 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ.
ಮಡಿಕೇರಿ ಸಮೀಪದ ಗಾಳಿಬೀಡಿನಲ್ಲಿರುವ ಜವಾಹಾರ್ ನವೋದಯ ಶಾಲೆಯಲ್ಲಿ 270 ವಿದ್ಯಾರ್ಥಿಗಳಿದ್ದು, ಅವರಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಶೀತ ಜ್ವರದ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರು.
ಶಾಲೆಯ 131 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿ ಅವರುಗಳ ಪೈಕಿ 21 ವಿದ್ಯಾರ್ಥಿಗಳಿಗೆ ನೆನ್ನೆ ಕೋವಿಡ್ ಸೋಂಕು ದೃಢಪಟ್ಟಿರುವ ಬಗ್ಗೆ ವರದಿ ಬಂದಿತ್ತು. ಇಂದು ಮತ್ತೆ 10 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ಮೊದಲು ಇಬ್ಬರು ವಿದ್ಯಾರ್ಥಿಗಳಿಗೆ ಜ್ವರವಿತ್ತು. ಅವರು ಜಿಲ್ಲಾಸ್ಪತ್ರೆಯಲ್ಲಿ ಸ್ಯ್ವಾಬ್ ಕೊಟ್ಟು ಊರಿಗೆ ಹೋಗಿದ್ದರು. ಬಳಿಕ ಅವರಿಗೂ ಕೋವಿಡ್ ದೃಢಪಟ್ಟಿತು. ಹೀಗಾಗಿ ಇದುವರೆಗೆ 31 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪಾಸಿಟಿವ್ ಬರುತ್ತಿದ್ದಂತೆ ವಿದ್ಯಾರ್ಥಿಗಳನ್ನು ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆಯಾಗಿ ಉಳಿದ 140 ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ ಇಂದು ಎಲ್ಲಾ 40 ಸಿಬ್ಬಂದಿಗಳಿಗೂ ಕೋವಿಡ್ ಪರೀಕ್ಷಿಸಿ ಫಲಿತಾಂಶದ ವರದಿಗಾಗಿ ಕಳುಹಿಸಿಕೊಟ್ಟಿದೆ.
ಅಲ್ಲದೆ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿರುವುದರಿಂದ ಒಂದು ವಾರಗಳ ಕಾಲ ಶಾಲೆಗೆ ರಜೆ ನೀಡಲಾಗಿದೆ. ಅಲ್ಲದೆ ಶಾಲಾ ಆವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿದ ಮೂಲದ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಶಾಲಾ ಮಕ್ಕಳು ಮನೆಗೆ ಹೋಗಿ ಬರುತ್ತಿದ್ದರೆಂಬ ಮಾಹಿತಿ ಇದೆ. ಹೀಗಾಗಿ ಹೊರಗಿನಿಂದ ವಿದ್ಯಾರ್ಥಿಗಳಿಗೆ ಬಂದಿರಬಹುದು ಅನುಮಾನಗಳು ಮೂಡಿವೆ. ಅದೇ ರೀತಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಸಿಇಓ ಭನ್ವರ್ ಸಿಂಗ್ ಮೀನಾ ಅವರು ಶಾಲೆಯನ್ನು ಕೂಡಲೇ ಸೀಲ್ಡೌನ್ ಮಾಡಬೇಕೆಂದು ಸೂಚನೆ ನೀಡಿದ್ದಾರೆ.