ಪಾಟ್ನಾ: 2013ರ ಗಾಂಧಿ ಮೈದಾನ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿನ 10 ಮಂದಿ ಆರೋಪಿಗಳಲ್ಲಿ 9 ಮಂದಿ ಅಪರಾಧಿಗಳೆಂದು ತೀರ್ಪು ನೀಡಲಾಗಿದ್ದು ಓರ್ವನನ್ನು ಖುಲಾಸೆಗೊಳಿಸಲಾಗಿದೆ. ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಹೇಳಿದೆ.
2013ರ ಅಕ್ಟೋಬರ್ 27ರಂದು ಬಿಹಾರದ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದ ಸ್ಥಳದಲ್ಲಿ ನಡೆದ ಸರಣಿ ಸ್ಫೋಟದ ಸಂಬಂಧ 9 ಮಂದಿ ಇಂಡಿಯನ್ ಮುಜಾಹಿದ್ದೀನ್ ಶಂಕಿತರು ಹಾಗೂ ಓರ್ವ ಎಸ್ಐಎಂಐ ಸಂಘಟನೆಯ ಸದಸ್ಯನನ್ನು ಪೊಲೀಸರು ಬಂಧಿಸಿದ್ದರು.
ಪಾಟ್ನಾ ಸಭೆಯ ಮುಂಚಿತವಾಗಿ ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ದೆಹಲಿಗಳಲ್ಲಿ ಬಿಜೆಪಿ ರ‍್ಯಾಲಿಗಳು ಆಯೋಜಿಸಲಾಗಿತ್ತು. ಅಲ್ಲೆಲ್ಲ ನರೇಂದ್ರ ಮೋದಿ ಭಾಷಣ ನಿಗದಿಯಾಗಿತ್ತು. ಅಲ್ಲಿಯೂ ಸ್ಪೋಟಗೊಳಿಸಲು ಸಂಚು ರೂಪಿಸಿದ್ದ ಆರೋಪಿಗಳು ವಿಫಲವಾದದ್ದರಿಂದ ಪಾಟ್ನಾದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂತು.
ಸರಣಿ ಸ್ಫೋಟಗಳಲ್ಲಿ ಆರು ಜನರು ಮೃತಪಟ್ಟು 90 ಕ್ಕೂ ಹೆಚ್ಚು ಜನರು ಗಾಯಗೊಂಡರು. ನಂತರ, ಎನ್‌ಐಎ ನವೆಂಬರ್ 6, 2013 ರಂದು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತು. 11 ಆರೋಪಿಗಳ ವಿರುದ್ಧ ಆಗಸ್ಟ್ 21, 2014 ರಂದು ಚಾರ್ಜ್ ಶೀಟ್ ಸಲ್ಲಿಸಿತು.
ಬಂಧಿತರನ್ನು ನುಮನ್ ಅನ್ಸಾರಿ, ಹೈದರಿ ಅಲಿ ಅಲಿಯಾಸ್ ಬ್ಲಾಕ್ ಬ್ಯೂಟಿ, ಮೊಹಮ್ಮದ್ ಮುಜಿಬುಲ್ಲಾ ಅನ್ಸಾರಿ, ಉಮರ್ ಸಿದ್ದಿಕಿ, ಅಝಾರುದ್ದೀನ್ ಕುರೇಶಿ, ಅಹಮದ್ ಹುಸೇನ್, ಫಕ್ರುದ್ದೀನ್, ಮೊಹಮ್ಮದ್ ಇಫ್ತೆಖರ್ ಆಲಂ, ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿತ್ತು. ಅಪ್ರಾಪ್ತನ ವಿವರಗಳನ್ನು ಪೊಲೀಸರು ಗೌಪ್ಯವಾಗಿರಿಸಿದ್ದರು. 2017ರ ಅಕ್ಟೋಬರ್ 12ರಂದು ಬಾಲಾಪರಾಧ ನ್ಯಾಯಮಂಡಳಿಯು ಸರಣಿ ಸ್ಫೋಟದಲ್ಲಿ ಅಪ್ರಾಪ್ತ ಭಾಗಿಯಾಗಿದ್ದಾನೆ ಎಂದು ಹೇಳುವ ಮೂಲಕ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಒಬ್ಬ ಆರೋಪಿ ತಾರಿಖ್ ಅನ್ಸಾರಿ ಪಾಟ್ನಾದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಇಡಲು ಪ್ರಯತ್ನಿಸುತ್ತಿದ್ದಾಗ ಮೃತಪಟ್ಟಿದ್ದರು. ಅಪರಾಧಿಗಳು ಸದ್ಯ ಪಾಟ್ನಾ ಜೈಲಿನಲ್ಲಿ ಇರಿಸಲಾಗಿದೆ.