ಬೆಂಗಳೂರು: ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡಬೇಕು, ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ವಾಪಸ್ಸು ಕರೆಸಿಕೊಳ್ಳಬೇಕು, ಮುಷ್ಕರದ ಸಂದರ್ಭದಲ್ಲಿ ಗೈರು ಹಾಜರಿಗೆ ವಿಧಿಸುತ್ತಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ (ಅಕ್ಟೋಬರ್ 27) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭವಾಗಿದೆ.
ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಧರಣಿ ಆರಂಭಿಸಿರುವ ಸಾರಿಗೆ ನೌಕರರು ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಇದನ್ನು ಓದಿ: ವಜಾಗೊಂಡಿದ್ದ 4200 ಸಾರಿಗೆ ನೌಕರರು ಮರು ನೇಮಕಕ್ಕೆ ಆದೇಶ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಅಧ್ಯಕ್ಷ ಎಚ್.ಡಿ.ರೇವಪ್ಪ ಮಾತನಾಡಿ ʻಸಾರಿಗೆಯ ನಾಲ್ಕು ನಿಗಮಗಳ ನೌಕರರನ್ನು ಆಡಳಿಯ ವರ್ಗ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ಜತೆಗೆ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್ನಲ್ಲಿ ನಡೆದ ಮುಷ್ಕರದ ವೇಳೆ ಕಾರಣವಿಲ್ಲದೆ ಸಾವಿರಾರು ನೌಕರರನ್ನು ಏಕಾಏಕಿ ವಜಾ, ವರ್ಗಾವಣೆ ಮತ್ತು ಅಮಾನತಿನ ಶಿಕ್ಷೆ ನೀಡಿದೆʼ ಎಂದರು.
ಅಲ್ಲದೆ, ಜತೆಗೆ ಹಲವಾರು ನೌಕರರ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಇನ್ನು ಸಚಿವರು ನಾವು ಭೇಟಿ ಮಾಡಿ ನೌಕರರ ಸಮಸ್ಯೆ ನಿವಾರಿಸಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆ ಮುಂದಾಗಬೇಕು ಎಂದು ಕೇಳಿಕೊಂಡಾಗ ಒಪ್ಪಿಕೊಂಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಕೊಡದ ಅಧಿಕಾರಿಗಳು ನೌಕರರನ್ನು ವಾಪಸ್ ತೆಗೆದುಕೊಳ್ಳಲು ತಯಾರಿಲ್ಲ. ಇಂಥ ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಸಚಿವರು ಕೂಡ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಮುಷ್ಕರ ಸಂದರ್ಭ ಕಾರ್ಮಿಕರ ಮೇಲೆ ಹೂಡಲಾದ ಪ್ರಕರಣಗಳು ಕೈಬಿಡುವಂತೆ ಸಾರಿಗೆ ನೌಕರರ ಆಗ್ರಹ
ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಏಪ್ರಿಲ್ನಲ್ಲಿ ನಡೆದ ಮುಷ್ಕರದ ವೇಳೆ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡಬೇಕು. ವರ್ಗಾವಣೆ ಮಾಡಿರುವ ಎಲ್ಲಾ ಕಾರ್ಮಿಕರನ್ನು ವಾಪಸ್ ತರಬೇಕು. ಅಮಾನತು ತೆರವು ಮಾಡಿ ಎಲ್ಲಾ ಶಿಸ್ತು ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಇಂದಿನಿಂದ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಾರಿಗೆ ನಿಗಮಗಳು ಈ ರಾಜ್ಯದ ಜನರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸುವ ಸಂಸ್ಥೆಗಳಾಗಿದ್ದು, ಈ ಉದ್ದೇಶ ಸಫಲವಾಗಬೇಕಾದರೆ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಇರಬೇಕು. ಸಂಸ್ಥೆಗಳಲ್ಲಿ ಕಾರ್ಮಿಕ ಸ್ನೇಹಿ ಆಡಳಿತ ಇದ್ದು, ಉತ್ತಮ ಕೈಗಾರಿಕಾ ಬಾಂಧವ್ಯ ಇದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ಈಡೇರಲು ಸಾಧ್ಯ ಎಂದರು.
ಮುಷ್ಕರದ ಅವಧಿಯನ್ನು ಗೈರು-ಹಾಜರಿ ಎಂದು ಪರಿಗಣಿಸಿ ರೂ.2000 ದಿಂದ ರೂ.10,000 ಗಳವರೆಗೆ ಹತ್ತಾರು ಸಾವಿರ ಕಾರ್ಮಿಕರಿಗೆ ದಂಡ ವಿಧಿಸುವುದು, ಮೇ-ಜೂನ್ ತಿಂಗಳು 2021 ನಿವೃತಿಯಾದ ಕಾರ್ಮಿಕರಿಗೆ 5 ಇಂಕ್ರಿಮೆಂಟ್ ಕಡಿತ ಮಾಡಲಾಗಿದೆ. ದೌರ್ಜನ್ಯ ಹಾಗೂ ಕಿರುಕುಳಗಳು ದಿನೇ ದಿನೇ ಹೆಚ್ಚಳವಾಗುತ್ತಲೇ ಇವೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ 1996 ರಿಂದ ಇಲ್ಲಿಯವರೆಗೂ ಕಾರ್ಮಿಕರ ವೇತನ ಹೆಚ್ಚಳ, ಮತ್ತಿತರೆ ಸೇವಾ ಸೌಲಭ್ಯಗಳ ಬಗ್ಗೆ ಕಾರ್ಮಿಕ ಸಂಘಗಳೊಂಡಿಗೆ ಚರ್ಚಿಸಿ ನ್ಯಾಯಸಮ್ಮತವಾಗಿ, ಕಾನೂನಿನ ಅನ್ವಯ ಒಪ್ಪಂದ ಆಗಿಲ್ಲ. 4 ವರ್ಷಗಳಿಗೊಂಮೆ ವೇತನ ಹೆಚ್ಚಳ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಒಪ್ಪಂದ ಆಗಬೇಕು. ಎಂಬ ದ್ವಿಪಕ್ಷೀಯ ಒಪ್ಪಂದವಿದ್ದರೂ ಸಹ ಈ ಪ್ರಕ್ರಿಯೆಗೆ ತಿಲಾಂಜಲಿ ನೀಡಲಾಗಿದೆ. ನೂರಾರು ಸುತ್ತೋಲೆಗಳನ್ನು ಆಡಳಿತ ವರ್ಗಗಳು ತಮಗೆ ಬೇಕಾದ ರೀತಿಯಲ್ಲಿ ಜಾರಿಗೊಳಿಸಿ ಕಾರ್ಮಿಕರು ನಿರಂತರವಾಗಿ ಕಿರುಕುಳಗಳನ್ನು ಅನುಭವಿಸುವಂತಾಗಿದೆ. ಸರ್ಕಾರಗಳು 4 ವರ್ಷಗಳಿಗೊಮ್ಮೆ ತಮಗೆ ತೋಚಿದಷ್ಟು ವೇತನ ಹೆಚ್ಚಳ ಮಾಡಿ ಏಕಪಕ್ಷೀಯವಾಗಿ ಘೋಷಿಸಿ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇಂತಹ ಕ್ರಮಗಳಿಂದ ಅತ್ಯಂತ ಕಷ್ಟಪಟ್ಟು ಹಗಲು-ರಾತ್ರಿ-ಹಬ್ಬದ ದಿನಗಳಲ್ಲೂ ದುಡಿಯುವ ಸಾರಿಗೆ ಕಾರ್ಮಿಕರಿಗೆ ಇತರೆ ಮಂಡಳಿಗಳು ಹಾಗೂ ಸರ್ಕಾರಿ ನೌಕರರ ವೇತನಕ್ಕಿಂತ ಶೇ. 40ರಷ್ಟು ಕಡಿಮೆ ವೇತನವಿದೆ ಎಂದು ಸಂಘಟನೆಯು ತಿಳಿಸಿದೆ.
ಸಚಿವರು ವಿಧಾನಸಭೆ ಅಧಿವೇಶನದಲ್ಲಿಯೂ ಸಹ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಿಸಿದರು. ಸಾರಿಗೆ ನಿಗಮಗಳ ಕಾರ್ಮಿಕರು ಸಚಿವರ ಹೇಳಿಕೆಯಿಂದ ಸಂಭ್ರಮಗೊಂಡರು. ಆದರೆ ಬಿಎಂಟಿಸಿ ಆಡಳಿತವರ್ಗ ಈ ನಡುವೆಯೇ ಪುನಃ 57 ಕಾರ್ಮಿಕರನ್ನು ಸೆಪ್ಟೆಂಬರ್ 27ರಂದು ವಜಾಗೊಳಿಸಿತು.
ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಹಲವು ಬಾರಿ ಬಹಿರಂಗವಾಗಿ ಮತ್ತು ಕಾರ್ಮಿಕ ಸಂಘಗಳ ಮುಖಂಡರ ಸಮ್ಮುಖದಲ್ಲೇ ತಿಳಿಸಿದ್ದಾರೆ. ಆದರೂ ಸೇವೆಯಿಂದ ವಜಾ ಆದವರಿಗೆ ಪುನರ್ ನೇಮಕ ಆದೇಶ ನೀಡಿಲ್ಲ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರುವವರೆಗೂ ಈ ಧರಣಿ ಸತ್ಯಾಗ್ರಹ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.