ಬೆಂಗಳೂರು: ಚಿತ್ರ ನಿರ್ದೇಶಕ ಪ್ರಕಾಶ್ ಝಾ ನಿರ್ದೇಶನದ, ನಟ ಬಾಬಿ ಡಿಯೋಲ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ವೆಬ್ ಸರಣಿ “ಆಶ್ರಮ್ 3” ತಂಡದ ಚಿತ್ರೀಕರಣ ಘಟಕದಲ್ಲಿ ಬಜರಂಗದಳದ ಕಾರ್ಯಕರ್ತರು ನಡೆಸಿರುವ ಧಾಳಿಯನ್ನು ಸಾಂಸ್ಕೃತಿಕ ಸಂಘಟನೆ ಸಮುದಾಯ ಖಂಡಿಸಿದೆ.
ತಮ್ಮ ಚಿಂತನೆಗೆ ಒಗ್ಗದ ಕಲಾವಿದರ ಸೃಜನಶೀಲ ಚಟುವಟಿಕೆಗಳ ಮೇಲೆ ದಾಳಿ ನಡೆಸುವ ಭಜರಂಗದಳದ ದಾಳಿ ಖಂಡನೀಯ. ಸದ್ರಿ ದಳದ ಕ್ರಿಮಿನಲ್ ಕೃತ್ಯಕ್ಕೆ ಸಂಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಸಮುದಾಯ ಸಂಘಟನೆಯ ರಾಜ್ಯ ಅಧ್ಯಕ್ಷ ಅಚ್ಯುತ ಒತ್ತಾಯಿಸಿದ್ದಾರೆ.
‘ಭೋಪಾಲದ ಹೊರವಲಯದಲ್ಲಿ ಆಶ್ರಮ್ 3 ವೆಬ್ ಸರಣಿಯ ಶೂಟಿಂಗ್ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜರಂಗದಳದ ಕಾರ್ಯಕರ್ತರು ಸೆಟ್ ಅನ್ನು ಧ್ವಂಸಗೊಳಿಸಿದ್ದಾರೆ. ನಿರ್ದೇಶಕ ಪ್ರಕಾಶ್ ಝಾ ಅವರ ಮೇಲೆ ಮಸಿ ಎರಚಿದ್ದಾರೆ’ ಎಂದು ವಿಡಿಯೊ ಸಾಕಷ್ಟು ವೈರಲ್ ಆಗಿದೆ.
ದುಷ್ಕರ್ಮಿಗಳ ತಂಡವೊಂದು ಮೇಲೆ ದಾಳಿ ನಡೆಸಿ ಸಾಮಗ್ರಿಗಳನ್ನು ಹಾಳುಗೆಡವಿದ್ದಲ್ಲದೆ, ಎರಡು ವಾಹನಗಳ ಗಾಜು ಒಡೆಯಲಾಗಿದೆ. ಕೆಲವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹಲ್ಲೆಕೋರರು ಪ್ರಕಾಶ ಝಾ ಮತ್ತು ಸನ್ನಿ ದಿಯೊಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇಂತಹ ವಿಕೃತಿ ಪ್ರದರ್ಶಿಸಿದ ಹಲ್ಲೆಕೋರರ ಮೇಲೆ ಕಠಿಣವಾದ ಕಾನೂನು ಕ್ರಮವಹಿಸಬೇಕೆಂದು ಸಮುದಾಯ ಆಗ್ರಹಿಸಿದೆ.