ಶಿವಮೊಗ್ಗ: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸಲು ಸರ್ಕಾರವು ಈಗಾಗಲೇ 3 ಸುತ್ತಿನ ಮಾತುಕತೆ ನಡೆಸಿದೆ. ಬಡ್ತಿ ವಿಷಯದಲ್ಲಿ ಸರ್ಕಾರ ಮತ್ತು ಸಂಘದ ಮಧ್ಯೆ ಸಹಮತ ಸಾಧ್ಯವಾಗಿಲ್ಲ. ಪರೀಕ್ಷೆ ನಡೆಸಿ ಪ್ರೌಢಶಾಲೆಗೆ ಬಡ್ತಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. 28,900 ಶಾಲೆಗಳು ಸುಸ್ಥಿತಿಯಲ್ಲಿವೆ. 7 ಸಾವಿರ ಶಾಲೆಗಳ ದುರಸ್ತಿ ಮಾಡಬೇಕಿದೆ. ಇಂತಹ ಶಾಲೆಗಳಲ್ಲಿ ಎರಡು ಪಾಳಿಯಲ್ಲಿ ಶಾಲೆ ತರಗತಿ ಸೂಚಿಸಲಾಗಿದೆ. ಮಕ್ಕಳ ಸಂಖ್ಯೆ ತೀರ ಕ್ಷೀಣಿಸಿರುವ ಶಾಲೆಗಳನ್ನು ದುರಸ್ತಿ ಮಾಡುವ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆಗಳ ಅಭಿವೃದ್ಧಿಗೆ ದತ್ತು ಯೋಜನೆ ಜಾರಿ ಮಾಡಲಾಗುತ್ತಿದೆ. ಅದಕ್ಕಾಗಿ ‘ನನ್ನ ಶಾಲೆ ನನ್ನ ಕೊಡುಗೆ’ ನೂತನ ತಂತ್ರಜ್ಞಾನ ತಂತ್ರಾಂಶವನ್ನು ರೂಪಿಸಲಾಗಿದೆ ಎಂದು ವಿವರ ನೀಡಿದರು.
ಕಳೆದ ಒಂದೂವರೆ ವರ್ಷದ ನಂತರ ಶಾಲೆಗಳು ಆರಂಭವಾಗಿವೆ. ಸದ್ಯಕ್ಕೆ ಪಠ್ಯ ಕಡಿತಗೊಳಿಸುವ ಚಿಂತನೆ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ನಲ್ಲಿ ನಿರ್ಧರಿಸಲಾಗುವುದು ಎಂದು
ನಗರದ ಮಲವಗೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 1ರಿಂದ 5ನೇ ತರಗತಿ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿಪೂರ್ವ ಕಾಲೇಜುಗಳು ಒಂದು ತಿಂಗಳ ವಿಳಂಬವಾಗಿ ಆರಂಭಿಸಿದ ಕಾರಣದಿಂದಾಗಿ ಪಠ್ಯ ಕಡಿತಗೊಳಿಸುವುದಿಲ್ಲ. ಈಗಾಗಲೇ ದಸರೆ ರಜೆ ಹೊಂದಾಣಿಕೆ ಮಾಡಲಾಗಿದೆ. ಮುಂದೆ ಇನ್ನಷ್ಟು ರಜೆ ಹೊಂದಾಣಿಕೆ ಮೂಲಕ ಪಠ್ಯ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಸದ್ಯ ಅರ್ಧ ದಿನ ಶಾಲೆ ನಡೆಸಲು ಸೂಚಿಸಲಾಗಿದೆ. ಮುಂದಿನ ವಾರದಿಂದ 1ರಿಂದ 5ನೇ ತರಗತಿ ಮಕ್ಕಳಿಗೂ ಬಿಸಿಯೂಟ ನೀಡಲಾಗುವುದು ಎಂದರು.