ಮೈಸೂರು: ರಾಜಕಾರಣಿಗಳೇ, ನಿಮ್ಮ ಸ್ವಪ್ರತಿಷ್ಠೆಯನ್ನು ಅಳಿಸಿ -ಪ್ರಜಾಪ್ರಭುತ್ವವನ್ನು ಉಳಿಸುವಂತೆ ಆಗ್ರಹಿಸಿ ‘ಸ್ವಪ್ರತಿಷ್ಠೆ ಅಳಿಸಿ-ಪ್ರಜಾಪ್ರಭುತ್ವ ಉಳಿಸಿ’ ವೇದಿಕೆಯಿಂದ ಜನ ಜಾಗೃತಿ ಪ್ರತಿಭಟನೆಯ ಅಭಿಯಾನ ನಡೆಸಲಾಯಿತು.
ನಗರದ ಅಂಬೇಡ್ಕರ್ ಪ್ರತಿಮೆ ಎದುರು ವೇದಿಕೆಯ ಕಾರ್ಯಕರ್ತರು ಜಮಾವಣೆಗೊಂಡು ಅಭಿಯಾನದ ಘೋಷಣೆಗಳನ್ನು ಕೂಗಿದರು. ಭಾರತದಂತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತತ್ವ ರಾಜಕಾರಣ ಮರೆಯಾಗಿ ಸ್ವಾರ್ಥ ರಾಜಕಾರಣ ವಿಜೃಂಭಿಸುತ್ತಿದ್ದು, ಇದರ ಪರಿಣಾಮ ಜನ ಸಾಮಾನ್ಯರ ಪಾಲಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳು ಮರಿಚಿಕೆಯಾಗಿದೆ. ಕೋಮುವಾದಿ ಶಕ್ತಿಗಳು ದೇಶದಲ್ಲಿ ಕೋಮು ಸಂಘರ್ಷಗಳನ್ನು ಸೃಷ್ಟಿಸಲು ಧಮನಕಾರಿ ನೀತಿ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಮತ್ತೊಂದೆಡೆ ಜಾತ್ಯಾತಿತ ಸಿದ್ದಾಂತದ ಮೇಲೆ ನಂಬಿಕೆ ಇಟ್ಟ ರಾಜಕೀಯ ಪಕ್ಷದ ನಾಯಕರೂ ಸಹ ಪರಸ್ಪರ ಸ್ವಪ್ರತಿಷ್ಠೆ ರಾಜಕಾರಣಕ್ಕೆ ಇಳಿದು ಪರೋಕ್ಷವಾಗಿ ಕೋಮುವಾದಿಗಳ ಬೆಂಬಲಕ್ಕೆ ನಿಂತಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿದೆ ಎಂದು ಆರೋಪಿಸಿದರು.
ಹಿಂದುತ್ವದ ಹೆಸರಲ್ಲಿ ಹಿಂದೂಗಳನ್ನು ಕೊಲ್ಲುತ್ತಿರುವ ಶಕ್ತಿಗಳ ವಿರುದ್ಧ ಎಚ್ಚರವಿರಲಿ. ಧರ್ಮ ಮತ್ತು ಜಾತಿ ಪ್ರಚೋದಕರ ಭಾಷಣಗಳಿಗೆ ಯುವಕರು ಕಿವಿಗೊಡಬೇಡಿ. ನೈತಿಕ ಪೊಲೀಸ್ ಹೆಸರಲ್ಲಿ ದ್ವೇಷ ಸೃಷ್ಟಿಸುತ್ತಿರುವ ರಾಜಕಾರಣಿ ಬಗ್ಗೆ ಎಚ್ಚರವಿರಲಿ. ಜಾತ್ಯಾತೀತ ಶಕ್ತಿಗಳು ಒಂದಾಗಿ ಕೋಮುವಾದಿಗಳ ಷಡ್ಯಂತ್ರವನ್ನು ವಿಫಲಗೊಳಿಸಿ. ಸ್ವಾರ್ಥ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳು ಮಾತನಾಡಲಿ. ಸುಳ್ಳು ಹೇಳಿ ದೇಶದ ಜನತೆಗೆ ಮಂಕುಬೂದಿ ಎರಚಿದ ವ್ಯಕ್ತಿಗಳ ಬಗ್ಗೆ ಜಾಗೃತರಾಗಿ, ದೀನ, ದಲಿತ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ. ಸಂವಿಧಾನದ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗಲಿ.ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಜನರು ಜಾಗೃತರಾಗಿ ಹೋರಾಟ ನಡೆಸಿ ಎಂಬ ಅಂಶಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು. ವೇದಿಕೆಯ ಸಂಚಾಲಕರಾದ ಕೆ.ದೀಪಕ್, ನಾ.ದಿವಾಕರ್, ಲಕ್ಷ್ಮಣ್ ಹೊಸಕೋಟೆ, ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಅರವಿಂದ ಶರ್ಮಾ, ಮಹೇಶ್ ಸೋಸಲೆ, ಭಾನು ಮೋಹನ್, ಪ್ರೊ.ನಂಜರಾಜ ಅರಸ್ ಇನ್ನಿತರರು ಉಪಸ್ಥಿತರಿದ್ದರು