ಮೈಶುಗರ್ ಕಾರ್ಖಾನೆ ಕೇವಲ 2 ವರ್ಷಗಳವರೆಗೆ ಮಾತ್ರ ಸರ್ಕಾರಿ ಒಡೆತನದಲ್ಲಿ!

ಬೆಂಗಳೂರು: ನಷ್ಟದಲ್ಲಿರುವ ಮೈಸೂರಿನ ಮೈ ಶುಗರ್ ಕಾರ್ಖಾನೆಯನ್ನು 2022ರ ಹಂಗಾಮಿನಿಂದ ಎರಡು ವರ್ಷಗಳ ಕಾಲ ಸರಕಾರವೇ ನಿರ್ವಹಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಂಡ್ಯದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ನಿಯೋಗದ ಜೊತೆ ನಡೆಸಿದ ಸಭೆಯಲ್ಲಿ ಕೇವಲ ಎರಡು ವರ್ಷಗಳ ಕಾಲ ಮೈಷುಗರ್ ಕಾರ್ಖಾನೆಯನ್ನು ಸರ್ಕಾರದ ನಿರ್ವಹಣೆಗೆ ಒಪ್ಪಿಗೆ ದೊರೆತಿದೆ. ಹೀಗಾಗಿ ಮೈ ಶುಗರ್‌ ಕಾರ್ಖಾನೆ ಖಾಸಗೀಕರಿಸುವ ಪ್ರಕ್ರಿಯೆ ಮುಂದೂಡಲ್ಪಟ್ಟಿವೆ.

ಸಭೆಯ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಮೂರು ತಿಂಗಳಲ್ಲಿ ಮೈಷುಗರ್ ಪುನಶ್ಚೇತನದ ಕ್ರಮಕ್ಕೆ ಸೂಚಿಸಲಾಗಿದೆ. ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗುತ್ತದೆ. ಕೂಡಲೇ ದಕ್ಷ ಅಧಿಕಾರಿಯನ್ನು ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ಸರಿಪಡಿಸಲು ಈಗಿನಿಂದಲೇ ಕ್ರಮಕೈಗೊಳ್ಳಲಾಗುವುದು ಎಂದರು.

ಮೈಷುಗರ್ ಖಾಸಗಿಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ವಾಪಸ್ ಪಡೆಯುತ್ತೇವೆ. ಅಷ್ಟೇ ಅಲ್ಲದೆ ಕಾರ್ಖಾನೆಗೆ ಅಗತ್ಯ ಹಣಕಾಸು ನೆರವು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯ ವ್ಯಾಪ್ತಿಯ ಕಬ್ಬನ್ನು ಖರೀದಿಸಿ ಬೇರೆ ಸಕ್ಕರೆ ಕಾರ್ಖಾನೆಗಳಿಗೆ ರವಾನಿಸಲು ನಿರ್ಧರಿಸಲಾಗಿದೆ. 2022ರಿಂದ ಪೂರ್ಣ ಪ್ರಮಾಣದಲ್ಲಿ ಕಬ್ಬು ಅರೆಯಲು ಸಿದ್ಧತೆ ಆರಂಭಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಆಡಳಿತ ನಿರ್ವಹಣೆ ಮತ್ತು ತಾಂತ್ರಿಕ ಸುಧಾರಣೆ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ನೇಮಿಸಲಾಗುವುದು. ಸಮಿತಿಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮೈ ಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಪ್ರಸ್ತಾವವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಎರಡು ವರ್ಷಗಳ ಕಾಲ ಸರ್ಕಾರದ ನಿರ್ವಹಣೆಯಲ್ಲಿ ದೊರೆಯುವ ಫಲಿತಾಂಶ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರೈತರಿಗೆ ತೊಂದರೆ ಆಗಬಾರದು ಎಂಬ ಸದುದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಾರ್ಖಾನೆ ಆರಂಭಕ್ಕೆ ತಕ್ಷಣದಿಂದಲೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಶಂಕರ್‌ ಪಾಟೀಲ್‌, ಡಾ. ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯರು, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಮತ್ತು ಮೈ ಶುಗರ್‌ ಕಾರ್ಖಾನೆ ಉಳಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ರೈತ ಮುಖಂಡರು ಸಭೆಯಲ್ಲಿದ್ದರು.

Donate Janashakthi Media

Leave a Reply

Your email address will not be published. Required fields are marked *