ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ, ವಿಮೋಚನಾ ಚಳವಳಿಯ ಮುಂದಾಳು, ನಿವೃತ್ತ ಶಿಕ್ಷಕ ಶರಣ ಬಸವರಾಜ ಬಿಸರಳ್ಳಿ (94) ವಯೋ ಸಹಜ ಕಾಯಿಲೆಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಸ್ವಾತಂತ್ರ್ಯ ಚಳುವಳಿ ಅಲ್ಲದೆ, ಹೈದ್ರಾಬಾದ್ ನಿಜಾಮರ ಕಪಿ ಮುಷ್ಟಿಯಿಂದ ವಿಮೋಚನೆಗೊಳಿಸುವ ಚಳುವಳಿಯಲ್ಲಿ ಇವರು ಸಾಕಷ್ಟು ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿಯೇ ಹೋರಾಡಿ ಬದುಕುಳಿದ ಸ್ವಾತಂತ್ರ್ಯ ಸೇನಾನಿಗಳ ಪೈಕಿ ಇವರು ಒಬ್ಬರಾಗಿ ಕೊಪ್ಪಳ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು.
ಹಿರಿಯ ಸ್ವಾತಂತ್ರ್ಯ ಸೇನಾನಿಯಾಗಿದ್ದ ದಿವಂಗತ ಅಳವಂಡಿ ಶಿವಮೂರ್ತಿ ಸ್ವಾಮಿಗಳ ನೇತೃತ್ವದಲ್ಲಿ ತರಬೇತಿ ಪಡೆಯುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಬಸವರಾಜ ಬಿಸರಳ್ಳಿ ಅವರು ದೇಶ, ಗಡಿ, ಭಾಷೆ ಹಾಗೂ ರಾಷ್ಟ್ರ ಲಾಂಚನಗಳ ವಿಷಯಗಳ ಕುರಿತು ನಿರರ್ಗಳವಾಗಿ ಮಾತನಾಡುವವರಾಗಿದ್ದರು.
ಅವರಿಗೆ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಬಿಸರಳ್ಳಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ತಮ್ಮ 84ನೇ ವಯಸ್ಸಿನಲ್ಲಿ ಪಿಎಚ್ಡಿ ಪದವಿ ಪಡೆದು ದೇಶದ ಗಮನ ಸೆಳೆದಿದ್ದರು. ಸತತ ಅಧ್ಯಯನಶೀಲರಾಗಿದ್ದ ಅವರು ಕೆಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ನಗರದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಯುವಕರನ್ನು ನಾಚಿಸುವಂತೆ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ಪ್ರೇರಣೆಯಾಗಿದ್ದರು.
ತಮ್ಮ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಅದರ ಮೂಲಕ ಸಾಮಾಜಿಕ ಸೇವೆಯಲ್ಲಿಯೂ ಅವರು ತೊಡಗಿಕೊಂಡಿದ್ದರು. ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ 2018 ರ ರಾಜ್ಯೋತ್ಸವ ಪ್ರಶಸ್ತಿಯೂ ಇವರಿಗೆ ಲಭಿಸಿದೆ.
ತಾಲ್ಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಬಸವರಾಜ ಬಿಸರಳ್ಳಿ ಅವರಿಗೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆದಿದೆ.