ಬೆಂಗಳೂರು : ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಸಾಲು ಸಾಲು ಅವಘಡ ಸಂಭವಿಸುತ್ತಿವೆ. ವಾಸ್ತವ ಸ್ಥಿತಿ ಅರಿಯುವ ಉದ್ದೇಶದಿಂದ ಸಿಎಂ ಬಸವರಾಜ್ ಬೊಮ್ಮಾಯಿ, ಸಿಟಿ ರೌಂಡ್ಸ್ ಆರಂಭಿಸಿದ್ದಾರೆ.
ಒಂದು ವಾರದಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದ ನಗರದ ಬೊಮ್ಮನಹಳ್ಳಿ ವಲಯದ ಎಚ್ಎಸ್ಆರ್ ಬಡಾವಣೆಯಲ್ಲಿ ಪ್ರವಾಹ ಉಂಟಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು.
ಇದನ್ನೂ ಓದಿ : ಸರಣಿ ಕಟ್ಟಡ ಕುಸಿತ : ಆತಂಕದಲ್ಲಿ ಸಿಲಿಕಾನ್ ಸಿಟಿ ಜನ
ಎಚ್ಎಸ್ಆರ್ ಬಡಾವಣೆಯ ಅಗರ ಕೆರೆ ಆಸುಪಾಸಿನಲ್ಲಿ ಮನೆಗಳಿಗೆ ನೀರು ನುಗ್ಗಿರುವ ತಗ್ಗುಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ‘ನಗರದಲ್ಲಿ ಕೆಲವು ಕಡೆ ಪ್ರವಾಹ ಬಂದು ಜನವಸತಿಗಳಿಗೆಲ್ಲ ಸಾಕಷ್ಟು ತೊಂದರೆ ಆಗಿದೆ. ಅತಿ ಹೆಚ್ಚು ಮಳೆಯಾದ ಕೆಲವು ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.
ಇದೇ ರೀತಿ ನಗರದಲ್ಲಿ ಮಳೆಗೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಪ್ರವಾಹ ತಪ್ಪಿಸಲು ಸೂಕ್ತ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ಕೊಡುತ್ತೇನೆ’ ಎಂದರು.
ರಸ್ತೆ ಗುಂಡಿಗಳು, ಟ್ರಾಫಿಕ್ ಜಾಮ್ ಜಂಕ್ಷನ್ಸ್, ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಹಾಗೂ ರಾಜಕಾಲುವೆಯನ್ನು ವೀಕ್ಷಿಸಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗಳನ್ನು ನಿವಾರಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಪಾಲಿಕೆ ಸದಸ್ಯರು, ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.